IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

IPL 2026 Playoffs: ಐಪಿಎಲ್​​ನ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ನಾಲ್ಕು ಮ್ಯಾಚ್​ಗಳಿಗಾಗಿ ನಾಲ್ಕು ಬಲಿಷ್ಠ ತಂಡಗಳು ಸಜ್ಜಾಗಿವೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಪ್ಲೇಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.

IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!
Ipl 2026
Image Credit source: Cricketangon

Updated on: May 25, 2026 | 12:29 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 10 ತಂಡಗಳಲ್ಲಿ 4 ಟೀಮ್​ಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅದರಂತೆ ಪ್ಲೇಆಫ್ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ತಂಡಗಳು ಕಣಕ್ಕಿಳಿಯಲಿವೆ. ವಿಶೇಷ ಎಂದರೆ ಈ ಬಾರಿಯ ಪ್ಲೇಆಫ್ ಹಂತವು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅಪರೂಪದ ಹಾಗೂ ಕುತೂಹಲಕಾರಿ ಮುಖಾಮುಖಿಗೆ ಸಾಕ್ಷಿಯಾಗಲಿದೆ.

ಅಂದರೆ ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ಲೇಆಫ್ ತಲುಪಿರುವ ನಾಲ್ಕೂ ತಂಡಗಳು ಈ ಹಿಂದೆ ತಲಾ ಒಂದೊಂದು ಬಾರಿ  ಐಪಿಎಲ್ ಟ್ರೋಫಿ ಗೆದ್ದಿವೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​ನಂತಹ ಬಹು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ದೈತ್ಯ ತಂಡಗಳಿಲ್ಲದ ಈ ಪ್ಲೇಆಫ್ ಕಣದಲ್ಲಿ ಪ್ರತಿಯೊಂದು ತಂಡಕ್ಕೂ ಎರಡನೇ ಬಾರಿ ಚಾಂಪಿಯನ್ ಆಗುವ ಸುವರ್ಣಾವಕಾಶ ಎದುರಾಗಿದೆ.

 ‘ಒಂದೇ ಒಂದು’ ಟ್ರೋಫಿ ಇತಿಹಾಸ:

ಈ ಬಾರಿ ಅಂತಿಮ ನಾಲ್ಕರ ಘಟ್ಟ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ಹಿಂದಿನ ಚಾಂಪಿಯನ್ ಹಾದಿ ಹೀಗಿದೆ:

  • ರಾಜಸ್ಥಾನ್ ರಾಯಲ್ಸ್ (2008): ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವು ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತ್ತು.
  • ಸನ್‌ರೈಸರ್ಸ್ ಹೈದರಾಬಾದ್ (2016): ಡೇವಿಡ್ ವಾರ್ನರ್ ಸಾರಥ್ಯದ ಸನ್​ರೈಸರ್ಸ್ ಹೈದರಾಬಾದ್ ತಂಡ ಫೈನಲ್​ನಲ್ಲಿ ಆರ್​​ಸಿಬಿ ತಂಡವನ್ನು ಮಣಿಸಿ ತನ್ನ ಏಕೈಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
  • ಗುಜರಾತ್ ಟೈಟಾನ್ಸ್ (2022): ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಗುಜರಾತ್ ಟೈಟಾನ್ಸ್ ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (2025): ಐಪಿಎಲ್​ 2025ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಕೋಟ್ಯಂತರ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಿ ಆರ್​ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಇದೀಗ ಈ ನಾಲ್ಕು ತಂಡಗಳೇ ಪ್ಲೇಆಫ್ ಪಂದ್ಯಗಳನ್ನಾಡಿದೆ. ಇದರೊಂದಿಗೆ ಈ ನಾಲ್ಕು ತಂಡಗಳಲ್ಲಿ ಒಂದು ಟೀಮ್ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದು ಕೂಡ ಖಚಿತವಾಗಿದೆ. ಅದರಂತೆ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದು ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ!

ಪ್ಲೇಆಫ್ ಸುತ್ತಿನ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ / ಸ್ಥಳ
ಕ್ವಾಲಿಫೈಯರ್ 1  ಮೇ 26, ಮಂಗಳವಾರ  ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಗುಜರಾತ್ ಟೈಟಾನ್ಸ್ ಹೆಚ್​ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಎಲಿಮಿನೇಟರ್  ಮೇ 27, ಬುಧವಾರ ಸನ್​ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಕ್ವಾಲಿಫೈಯರ್ 2  ಮೇ 29, ಶುಕ್ರವಾರ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಫೈನಲ್  ಮೇ 31, ಭಾನುವಾರ ಕ್ವಾಲಿಫೈಯರ್ 1 ವಿಜೇತರು vs ಕ್ವಾಲಿಫೈಯರ್ 2 ವಿಜೇತರು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

 

 

Published On - 12:22 pm, Mon, 25 May 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us