IPL or PSL ಯಾವುದು ಬೆಸ್ಟ್? ಪಾಕ್ ಪತ್ರಕರ್ತನಿಗೆ ಮುಖ ಹೊಡೆದಂಗೆ ಉತ್ತರ ನೀಡಿದ ಸ್ಯಾಮ್ ಬಿಲ್ಲಿಂಗ್ಸ್
IPL 2025 - PSL 2025: ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಇದೀಗ ಪಾಕಿಸ್ರಾನ್ ಸೂಪರ್ ಲೀಗ್ (ಪಿಎಸ್ಎಲ್) ಆಡುತ್ತಿದ್ದಾರೆ. ಹೀಗಾಗಿ ಐಪಿಎಲ್ ಹಾಗೂ ಪಿಎಸ್ಎಲ್ ಟೂರ್ನಿಯಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆಯನ್ನು ಸ್ಯಾಮ್ ಬಿಲ್ಲಿಂಗ್ಸ್ ಮುಂದಿಡಲಾಗಿತ್ತು.

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಡೆಯುತ್ತಿದ್ದರೆ, ನೆರೆ ದೇಶ ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL 2025) ಟಿ20 ಟೂರ್ನಿ ಜರುಗುತ್ತಿದೆ. ಇತ್ತ ಈ ಹಿಂದೆ ಐಪಿಎಲ್ನಲ್ಲಿ ಕಾಣಿಸಿಕೊಂಡ ಕೆಲ ಆಟಗಾರರು ಈ ಬಾರಿ ಪಿಎಸ್‌ಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿಯೇ ಐಪಿಎಲ್ ಆಡಿದ ಆಟಗಾರರಿಗೆ ಯಾವ ಲೀಗ್ ಉತ್ತಮ ಎಂಬ ಪ್ರಶ್ನೆಯನ್ನು ಪಾಕ್ ಪತ್ರಕರ್ತರು ಮುಂದಿಡುತ್ತಿದ್ದಾರೆ. ಇಂತಹದ್ದೇ ಪ್ರಶ್ನೆಯೊಂದನ್ನು ಸ್ಯಾಮ್ ಬಿಲ್ಲಿಂಗ್ಸ್ ಅವರಲ್ಲೂ ಕೇಳಿದ್ದಾರೆ. ಆದರೆ ಬಿಲ್ಲಿಂಗ್ಸ್ ನೀಡಿದ ಉತ್ತರದಿಂದ ಪಾಕ್ ಪತ್ರಕರ್ತರೊಬ್ಬರು ಗಲಿಬಿಲಿಗೊಂಡಿದ್ದಾರೆ.
ಲಾಹೋರ್ ಖಲಂದರ್ಸ್ ತಂಡದ ಆಟಗಾರನಾಗಿರುವ ಸ್ಯಾಮ್ ಬಿಲ್ಲಿಂಗ್ಸ್ ಕರಾಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಪಾಕಿಸ್ತಾನ್ ಸೂಪರ್ ಲೀಗ್ ಅಥವಾ ಇಂಡಿಯನ್ಸ್ ಪ್ರೀಮಿಯರ್ ಲೀಗ್? ಈವೆರಡರಲ್ಲಿ ಯಾವ ಲೀಗ್ ಉತ್ತಮ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್ ಬಿಲ್ಲಿಂಗ್ಸ್, ನೀವು ನನ್ನಿಂದ ಸಿಲ್ಲಿ ಉತ್ತರ ಪಡೆಯಲು ಬಯಸುತ್ತಿದ್ದೀರಾ?. ನಿಜ ಹೇಳಬೇಕೆಂದರೆ ಐಪಿಎಲ್ ಅನ್ನು ಮೀರಿ ಯಾವುದೇ ಲೀಗ್ ಕ್ರಿಕೆಟ್ ಇಲ್ಲ. ಇದುವೇ ಸತ್ಯ. ಪಾಕಿಸ್ತಾನ್ ಸೂಪರ್ ಲೀಗ್, ದಿ ಹಂಡ್ರೆಡ್ ಲೀಗ್ ಸೇರಿದಂತೆ ಎಲ್ಲವೂ ಐಪಿಎಲ್ಗಿಂತ ಹಿಂದೆ ಉಳಿದಿದೆ. ಅಂದರೆ ನಾವೆಲ್ಲರೂ ವಿಶ್ವದ 2ನೇ ಉತ್ತಮ ಲೀಗ್ ರೂಪಿಸುವ ಪಯತ್ನದಲ್ಲಿದ್ದೇವೆ. ಆಸ್ಟ್ರೇಲಿಯಾ ಬಿಗ್ ಬ್ಯಾಷ್ ಲೀಗ್ ಕೂಡ ಇದೇ ರೀತಿಯ ಪ್ರಯತ್ನದಲ್ಲಿದೆ.
ನನ್ನ ಪ್ರಕಾರ, ಐಪಿಎಲ್ ವಿಶ್ವದ ಬೆಸ್ಟ್ ಲೀಗ್. ಇನ್ನುಳಿದ ಲೀಗ್ಗಳ ನಡುವಣ 2ನೇ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಕೂಡ ಇದೆ. ಹೀಗಾಗಿ ಪಿಎಸ್ಎಲ್ ಅನ್ನು ಐಪಿಎಲ್ ಜೊತೆ ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ. ಐಪಿಎಲ್ ಈಗಾಗಲೇ ಮೊದಲ ಸ್ಥಾನದಲ್ಲಿದೆ ಎಂದು ಸ್ಯಾಮ್ ಬಿಲ್ಲಿಂಗ್ಸ್ ಹೇಳಿದ್ದಾರೆ.
ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್ ನಡುವೆ ಯಾವುದೇ ಬೆಸ್ಟ್ ಎಂಬ ಪ್ರಶ್ನೆಗೆ ಐಪಿಎಲ್ ಎಂಬ ಉತ್ತರ ನೀಡಿ ಸ್ಯಾಮ್ ಬಿಲ್ಲಿಂಗ್ಸ್ ಚರ್ಚೆಯನ್ನು ಅಂತ್ಯಗೊಳಿಸಿದ್ದಾರೆ.
ಇನ್ನು ಪಾಕಿಸ್ತಾನ್ ಪತ್ರಕರ್ತರು ಪಿಎಸ್ಎಲ್ ಸುದ್ದಿಗೋಷ್ಠಿಯಲ್ಲಿ ಐಪಿಎಲ್ ಅನ್ನು ಎಳೆದು ತರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರಿಗೂ ಇದೇ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿತ್ತು.
ಐಪಿಎಲ್ನಲ್ಲಿ ಅವಕಾಶ ಸಿಗದಿರುವ ಕಾರಣ ನಿಮ್ಮನ್ನು ಭಾರತೀಯರು ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ ಬಿಟ್ಟು ಪಿಎಸ್ಎಲ್ ಆಡುತ್ತಿರುವುದರ ಬಗ್ಗೆ ಇಂಡಿಯಾದ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ವಾರ್ನರ್ ಅವರನ್ನು ಪ್ರಶ್ನಿಸಲಾಗಿತ್ತು.
ಪಾಕಿಸ್ತಾನ್ ಪತ್ರಕರ್ತನ ಈ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್, ನೀವು ಹೇಳಿರುವ ವಿಷಯವನ್ನು ನಾನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಆ ರೀತಿ ಏನೂ ಇಲ್ಲ. ನನಗೆ ಕ್ರಿಕೆಟ್ ಆಡಲು ಮಾತ್ರ ಇಷ್ಟ. ಈ ಬಾರಿ ಪಿಎಸ್‌ಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಅದಕ್ಕೆ ಆಡುತ್ತಿದ್ದೇನೆ ಎಂದಿದ್ದರು.
ಈ ಮೂಲಕ ದ್ವೇಷ ಹರಡಲು ಮುಂದಾಗಿದ್ದ ಪಾಕಿಸ್ತಾನ್ ಪತ್ರಕರ್ತನಿಗೆ ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದೇ ಡೇವಿಡ್ ವಾರ್ನರ್ ಖಡಕ್ ಉತ್ತರ ನೀಡಿ ಗಮನ ಸೆಳೆದಿದ್ದರು. ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಮುಖಕ್ಕೆ ಹೊಡೆದಂಗೆ ಐಪಿಎಲ್ ಬೆಸ್ಟ್ ಎನ್ನುವ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
ಅಂದಹಾಗೆ ಸ್ಯಾಮ್ ಬಿಲ್ಲಿಂಗ್ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 27 ಇನಿಂಗ್ಸ್ ಆಡಿದ್ದ ಬಿಲ್ಲಿಂಗ್ಸ್ 3 ಅರ್ಧಶತಕಗಳೊಂದಿಗೆ ಒಟ್ಟು 503 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: VIDEO: ಮೋಸದಾಟಕ್ಕೆ ಮುಂದಾಗಿ ಸಿಕ್ಕಿಬಿದ್ದ ಸುನಿಲ್ ನರೈನ್, ಆ್ಯಂಡ್ರೆ ರಸೆಲ್
ಅಲ್ಲದೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಅವರು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.