IPL 2023: ಐಪಿಎಲ್ ಬಂಪರ್: ಪ್ರತಿ ತಂಡಕ್ಕೆ ಸಿಗುವ ಮೊತ್ತ ಎಷ್ಟು ಗೊತ್ತಾ?
IPL Media Revenues: ಈ ಬಾರಿ ಐಪಿಎಲ್ ನೇರ ಪ್ರಸಾರ ಹಕ್ಕುಗಳನ್ನು 74 ಪಂದ್ಯಗಳು, 84 ಪಂದ್ಯಗಳು ಹಾಗೂ 94 ಪಂದ್ಯಗಳಂತೆ ಮಾರಾಟ ಮಾಡಲಾಗಿದೆ. ಇಲ್ಲಿ ಐಪಿಎಲ್ 2023 ಮತ್ತು 2024 ರಲ್ಲಿ 74 ಪಂದ್ಯಗಳು ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಐದು ಸೀಸನ್ಗಳ ನೇರ ಪ್ರಸಾರ ಹಕ್ಕುಗಳು ಮಾರಾಟವಾಗಿದೆ. ನಾಲ್ಕು ಪ್ಯಾಕೇಜ್ಗಳ ಮೂಲಕ ನಡೆಸಲಾದ ಹರಾಜಿನ ಮೂಲಕ ಬಿಸಿಸಿಐ ಬರೋಬ್ಬರಿ 48,390 ಕೋಟಿ ರೂ. ಆದಾಯಗಳಿಸಿದೆ. ಇತ್ತ ಬಿಸಿಸಿಐ ಭರ್ಜರಿ ಮೊತ್ತಕ್ಕೆ ನೇರ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡುತ್ತಿದ್ದಂತೆ ಅತ್ತ 10 ತಂಡಗಳ ಮಾಲೀಕರು ಬಂಪರ್ ಆದಾಯಗಳಿಸಿದ್ದಾರೆ. ಏಕೆಂದರೆ ಮಾಧ್ಯಮ ಹಕ್ಕುಗಳ (ದೂರದರ್ಶನ ಮತ್ತು ಡಿಜಿಟಲ್) ಆದಾಯದ ಪಾಲನ್ನು ಬಿಸಿಸಿಐ ಫ್ರಾಂಚೈಸಿಗಳ ಜೊತೆ ಹಂಚಿಕೊಳ್ಳುತ್ತದೆ. ಇದೀಗ ಭರ್ಜರಿ ಮೊತ್ತಕ್ಕೆ ಐಪಿಎಲ್ ಪ್ರಸಾರ ಹಕ್ಕುಗಳು ಮಾರಾಟವಾಗಿದ್ದರಿಂದ ಫ್ರಾಂಚೈಸಿ ಮಾಲೀಕರು ಫುಲ್ ಖುಷ್ ಆಗಿದ್ದಾರೆ.
ಇಲ್ಲಿ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳ ಪ್ರಕಾರ, ಮಾಧ್ಯಮ ಪ್ರಸಾರ ಮತ್ತು ಪ್ರಾಯೋಜಕತ್ವದಿಂದ ಗಳಿಸುವ ಶೇ.50 ರಷ್ಟು ಆದಾಯವನ್ನು ಬಿಸಿಸಿಐ ಫ್ರಾಂಚೈಸಿಗಳೊಂದಿಗೆ ಹಂಚಿಕೊಳ್ಳುತ್ತದೆ. ಅಂದರೆ 48 ಸಾವಿರಕ್ಕೂ ಅಧಿಕ ಕೋಟಿ ಮೊತ್ತದಿಂದ ಅರ್ಧ ಪಾಲು 10 ತಂಡಗಳ ಮಾಲೀಕರಿಗೆ ಸಿಗಲಿದೆ. ಆದರೆ ಇದನ್ನು ಪ್ರತಿ ಸೀಸನ್ಗೆ ಅನುಗುಣವಾಗಿ ನೀಡಲಿದೆ.
ಅಂದರೆ ಈ ಬಾರಿ ಐಪಿಎಲ್ ನೇರ ಪ್ರಸಾರ ಹಕ್ಕುಗಳನ್ನು 74 ಪಂದ್ಯಗಳು, 84 ಪಂದ್ಯಗಳು ಹಾಗೂ 94 ಪಂದ್ಯಗಳಂತೆ ಮಾರಾಟ ಮಾಡಲಾಗಿದೆ. ಇಲ್ಲಿ ಐಪಿಎಲ್ 2023 ಮತ್ತು 2024 ರಲ್ಲಿ 74 ಪಂದ್ಯಗಳು ನಡೆಯಲಿದೆ. ಹಾಗೆಯೇ ಐಪಿಎಲ್ 2025 – 2026 ರಲ್ಲಿ 84 ಪಂದ್ಯಗಳನ್ನು ಆಡಿಸಲಾಗುತ್ತದೆ. ಹಾಗೆಯೇ ಐಪಿಎಲ್ 2027 ರಲ್ಲಿ ಒಟ್ಟು 94 ಪಂದ್ಯಗಳು ನಡೆಯಲಿದೆ. ಅದರಂತೆ ಬಿಸಿಸಿಐ 410 ಪಂದ್ಯಗಳ ನೇರ ಪ್ರಸಾರ ಹಕ್ಕುಗಳನ್ನು 48,390 ಕೋಟಿಗೆ ಮಾರಾಟ ಮಾಡಿದೆ.
ಇಲ್ಲಿ ಪ್ರತಿ ಸೀಸನ್ನಲ್ಲಿನ ಐಪಿಎಲ್ ಪ್ರಸಾರ ಹಕ್ಕುಗಳಿಂದ ದೊರೆಯುವ ಒಟ್ಟು ಮೊತ್ತದ ಶೇ.50 ರಷ್ಟು ಬಿಸಿಸಿಐ ಫ್ರಾಂಚೈಸಿಗಳಿಗೆ ನೀಡಲಿದೆ. ಅದರಂತೆ ಐಪಿಎಲ್ ಮಾಧ್ಯಮ ಹಕ್ಕುಗಳ ಆದಾಯದಿಂದ ಪ್ರತಿ ಫ್ರಾಂಚೈಸಿ ಎಷ್ಟು ಮೊತ್ತ ಪಡೆಯಲಿದೆ ಎಂಬುದರ ಸಂಕ್ಷಿಪ್ತ ರೂಪ ಈ ಕೆಳಗಿನಂತಿದೆ.
- IPL 2022: ಪ್ರತಿ ಫ್ರಾಂಚೈಸಿಯ ಮಾಧ್ಯಮ ಹಕ್ಕು ಪಾಲು- 201.65 ಕೋಟಿ ರೂ. (ಕಳೆದ ಸೀಸನ್ನಲ್ಲಿ ಪ್ರತಿ ತಂಡಗಳು ಗಳಿಸಿದ ಆದಾಯ)
- IPL 2023-2024: ಪ್ರತಿ ಫ್ರಾಂಚೈಸಿ ಮಾಧ್ಯಮ ಹಕ್ಕು ಪಾಲು- 436.6 ಕೋಟಿ ರೂ.
- IPL 2025-2026: ಪ್ರತಿ ಫ್ರಾಂಚೈಸಿ ಮಾಧ್ಯಮ ಹಕ್ಕು ಪಾಲು- 495.6 ಕೋಟಿ ರೂ.
- IPL 2027: ಪ್ರತಿ ಫ್ರಾಂಚೈಸಿ ಮಾಧ್ಯಮ ಹಕ್ಕು ಪಾಲು- 554.6 ಕೋಟಿ ರೂ.
ಅಂದರೆ ಐಪಿಎಲ್ 2027 ರಲ್ಲಿ ಪ್ರತಿ ತಂಡಗಳ ಮಾಲೀಕರು ಕೇವಲ ಮಾಧ್ಯಮ ಹಕ್ಕುಗಳ ಶೇರುಗಳಿಂದಲೇ ಬರೋಬ್ಬರಿ 554.6 ಕೋಟಿ ಆದಾಯಗಳಿಸಲಿದೆ. ಇನ್ನು ಫ್ರಾಂಚೈಸಿಗಳೂ ಕೂಡ ತಮ್ಮದೇ ಆದ ಪ್ರಾಯೋಜಕತ್ವದ ಆದಾಯ, ಟಿಕೆಟ್ ಮಾರಾಟದ ಆದಾಯ ಮತ್ತು ಹಣವನ್ನು ಗಳಿಸಲು ಇತರ ಮಾರ್ಗಗಳನ್ನು ಹೊಂದಿದೆ.
ಹಾಗೆಯೇ ಮಾಧ್ಯಮ ಹಕ್ಕುಗಳ ಆದಾಯವನ್ನು ಹೊರತುಪಡಿಸಿ, BCCI ಇತರೆ ಪ್ರಾಯೋಜಕತ್ವದ ಆದಾಯದ ಶೇ.50 ರಷ್ಟರನ್ನು ಕೂಡ ಐಪಿಎಲ್ ಫ್ರಾಂಚೈಸಿಗಳಿಗೆ ನೀಡಲಿದೆ. ಅಂದರೆ ಮುಂಬರುವ ಐಪಿಎಲ್ ಸೀಸನ್ಗಳ ಮೂಲಕ ಪ್ರತಿ ಫ್ರಾಂಚೈಸಿಗಳ ಸೀಸನ್ ಆದಾಯ ಸಾವಿರ ಕೋಟಿ ತಲುಪಿದರೂ ಅಚ್ಚರಿಪಡಬೇಕಿಲ್ಲ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.