ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೆ ಆಡಿದ ನಾಲ್ಕು ಟೆಸ್ಟ್ಗಳಲ್ಲಿ ಎಡಗೈ ಬ್ಯಾಟರ್ 93.57 ರನ್ ಸರಾಸರಿಯಲ್ಲಿ 655 ರನ್ ಗಳಿಸಿದ್ದಾರೆ. ಅವರು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ತವರಿನಲ್ಲಿ ತನ್ನ ಮೊದಲ ಟೆಸ್ಟ್ ಸರಣಿ ಆಡುತ್ತಿರುವ 22 ವರ್ಷದ ಕ್ರಿಕೆಟಿಗ, ಇದುವರೆಗೆ ಆಡಿದ ನಾಲ್ಕು ಟೆಸ್ಟ್ಗಳಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಇದೀಗ ಐದನೇ ಟೆಸ್ಟ್ನಲ್ಲಿ ಕೂಡ ಸಾಧನೆಯ ಶಿಖರವನ್ನೇರಲು ಸಜ್ಜಾಗಿದ್ದಾರೆ. ಗುರುವಾರ (ಮಾರ್ಚ್ 7) ಧರ್ಮಶಾಲಾದಲ್ಲಿ ಐದನೇ ಟೆಸ್ಟ್ ಆರಂಭವಾಗಲಿದೆ.
ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ 29 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಲಿದ್ದಾರೆ. ಸದ್ಯ ಈ ದಾಖಲೆ ಚೇತೇಶ್ವರ ಪೂಜಾರ ಅವರ ಹೆಸರಿನಲ್ಲಿದ್ದು, ಈ ಮೈಲುಗಲ್ಲು ತಲುಪಲು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇನ್ನಿಂಗ್ಸ್ ವಿಚಾರದಲ್ಲಿ ಈ ದಾಖಲೆ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ಮಾಜಿ ಎಡಗೈ ಬ್ಯಾಟರ್ 12 ಪಂದ್ಯಗಳ 14 ಇನ್ನಿಂಗ್ಸ್ಗಳಲ್ಲಿ ಟೆಸ್ಟ್ನಲ್ಲಿ 1000 ರನ್ ಪೂರೈಸಿದ್ದರು.
ಸ್ಮೃತಿ ಮಂಧಾನ ಸ್ಫೋಟಕ ಸಿಕ್ಸ್ ಕಂಡು ದಂಗಾದ ಆರ್ಸಿಬಿ ಫ್ಯಾನ್ಸ್: ವಿಡಿಯೋ ನೋಡಿ
ಜೈಸ್ವಾಲ್ ಈಗ ಎಂಟು ಟೆಸ್ಟ್ಗಳ 15 ಇನ್ನಿಂಗ್ಸ್ಗಳಲ್ಲಿ 971 ರನ್ ಗಳಿಸಿದ್ದಾರೆ. ಲೆಜೆಂಡರಿ ಸರ್ ಡೊನಾಲ್ಡ್ ಬ್ರಾಡ್ಮನ್ ಏಳು ಪಂದ್ಯಗಳಲ್ಲಿ 1000 ಟೆಸ್ಟ್ ರನ್ಗಳನ್ನು ಪೂರೈಸಿದ ಸಾಧನೆ ಮಾಡಿದ್ದರು. ಉಳಿದ ಮೂರು ಬ್ಯಾಟರ್ಗಳು – ಇಂಗ್ಲೆಂಡ್ನ ಹರ್ಬರ್ಟ್ ಸಟ್ಕ್ಲಿಫ್, ಎವರ್ಟನ್ ವೀಕ್ಸ್ ಮತ್ತು ಜಾರ್ಜ್ ಹೆಡ್ಲಿ ಈ ಸಾಧನೆಯನ್ನು ಮಾಡಲು ಒಂಬತ್ತು ಟೆಸ್ಟ್ಗಳನ್ನು ತೆಗೆದುಕೊಂಡಿದ್ದರು. ಜೈಸ್ವಾಲ್ ಐದನೇ ಟೆಸ್ಟ್ನಲ್ಲಿ 1000 ರನ್ಗಳ ಗಡಿಯನ್ನು ತಲುಪಲು ಯಶಸ್ವಿಯಾದರೆ, ಅವರು ಟೆಸ್ಟ್ನಲ್ಲಿ 1000 ರನ್ ಪೂರೈಸಿದ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಬ್ಯಾಟರ್ ಆಗಲಿದ್ದಾರೆ.
ಇದಲ್ಲದೆ, ಜೈಸ್ವಾಲ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇತಿಹಾಸದ ಮೊದಲ ಭಾರತೀಯ ಬ್ಯಾಟರ್ ಮತ್ತು ಒಟ್ಟಾರೆ ಮೂರನೇ ಆಟಗಾರನಾಗುವ ಅವಕಾಶಹೊಂದಿದ್ದಾರೆ. ಸದ್ಯಕ್ಕೆ, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಗ್ರಹಾಂ ಗೂಚ್ ಹೆಸರಿನಲ್ಲಿದೆ, ಅವರು 1990 ರಲ್ಲಿ ಇಂಗ್ಲೆಂಡ್ನಲ್ಲಿ ಆಡಿದ ಸರಣಿಯಲ್ಲಿ ಒಟ್ಟು 752 ರನ್ ಗಳಿಸಿದ್ದರು. ಜೈಸ್ವಾಲ್ಗೆ ಈ ದಾಖಲೆ ಮುರಿಯಲು 98 ರನ್ ಅಗತ್ಯವಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ