ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಬುಧವಾರ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡರು. ಮಂಗಳವಾರ ನಡೆದ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ, ಭಾರತದ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಮಿಫೈನಲ್ನಲ್ಲಿ ಬಲಿಷ್ಠ ಭಾರತದ ವಿರುದ್ಧ ಕಣಕ್ಕಿಳಿಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದ ಕೇನ್ ವಿಲಿಯಮ್ಸನ್, ಟೀಮ್ ಇಂಡಿಯಾ ವಿರುದ್ಧ ಆಡುವುದು ಕಠಿಣ ಸವಾಲು. ಏಕೆಂದರೆ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ ಫೈನಲ್ಗೆ (ಸೆಮಿ ಫೈನಲ್) ತಲುಪಿದರೆ ಎಲ್ಲವೂ ಮತ್ತೆ ಪ್ರಾರಂಭವಾಗುತ್ತದೆ. ಇಲ್ಲಿ ಆ ದಿನ ಒಂದು ತಂಡವಾಗಿ ಹೇಗೆ ಆಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ನಾವು ಒಂದು ತಂಡವಾಗಿ ನಮ್ಮ ಗುರಿಯತ್ತ ಹೆಚ್ಚು ಗಮಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸೆಮಿಫೈನಲ್ ತಲುಪುವ ಹಾದಿಯಲ್ಲಿ ನಾವು ಒಂದೆರಡು ಸೋಲುಗಳನ್ನು ಮತ್ತು ಕೆಲವು ಗೆಲುವುಗಳನ್ನು ನೋಡಿದ್ದೇವೆ. ಈ ಗೆಲುವುಗಳು ನಮ್ಮನ್ನು ಈ ಸ್ಥಾನದಲ್ಲಿ ಇರಿಸಿದೆ. ಹಾಗಾಗಿ ನಾವು ಮುಂದಿರುವ ಸವಾಲಿನ ಬಗ್ಗೆ ಹೆಚ್ಚು ಉತ್ಸುಕರಾಗಿದ್ದೇವೆ ಎಂದು ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ.
ಇದೇ ವೇಳೆ ನ್ಯೂಝಿಲೆಂಡ್ ತಂಡದ 15 ಆಟಗಾರರು ಕೂಡ ಫಿಟ್ ಆಗಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಉತ್ತಮ ಆಯ್ಕೆಗಳಿವೆ. ಸೆಮಿಫೈನಲ್ಗೂ ಮುನ್ನ ಪಿಚ್ ನೋಡಿ, ಆ ಬಳಿಕ ಮೌಲ್ಯಮಾಪನ ಮಾಡಿ ಆಡುವ ಬಳಗವನ್ನು ರೂಪಿಸಲಿದ್ದೇವೆ ಎಂದು ನ್ಯೂಝಿಲೆಂಡ್ ನಾಯಕ ತಿಳಿಸಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು