
ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕರ್ನಾಟಕದ ಯುವ ಪ್ರತಿಭೆ ಉಮಾ ಕಾಶ್ವಿ ಅವರನ್ನು ಖರೀದಿಸಿದೆ. ಕೇವಲ 15 ವರ್ಷದ ಉಮಾ ಅವರನ್ನು ಡೆಲ್ಲಿ ತಂಡ 10 ಲಕ್ಷ ರೂ. ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಖರೀದಿಯಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಉಮಾ ಕಾಶ್ವಿ ಪಾಲಾಗಿದೆ. ಹಾಗೆಯೇ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಸ್ವಾಧೀನಪಡಿಸಿಕೊಂಡಿದ್ದ ಅಂಶು ನಗರ್ ಅವರ ದಾಖಲೆಯನ್ನು ಉಮಾ ಮುರಿದಿದ್ದಾರೆ. ಅಂಶು ನಗರ್ ಕೂಡ 15 ನೇ ವಯಸ್ಸಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಖರೀದಿಯಾಗಿದ್ದರು ಆದರೆ ಉಮಾ ಕಾಶ್ವಿ ಅವರಿಗಿಂತ ಮೂರು ತಿಂಗಳು ಚಿಕ್ಕವರು.
ಸ್ಪಿನ್ ಬೌಲಿಂಗ್ ಹಾಗೂ ಆಲ್‌ರೌಂಡರ್ ಸಾಮರ್ಥ್ಯದಿಂದ ಗಮನ ಸೆಳೆದಿರುವ ಈ ಯುವ ಆಟಗಾರ್ತಿಗೆ ಇದೀಗ ವೃತ್ತಿಪರ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಅವಕಾಶ ಸಿಕ್ಕಿದೆ. ಬಲಗೈ ಸ್ಪಿನ್ ಬೌಲಿಂಗ್ ಮಾಡುವ ಆಲ್‌ರೌಂಡರ್ ಆಗಿರುವ ಉಮಾ ಕಾಶ್ವಿ, ತಮ್ಮ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೇವಲ ರಾಜ್ಯ ಮಟ್ಟದ ಕಿರಿಯರ ಕ್ರಿಕೆಟ್‌ಗೆ ಸೀಮಿತವಾಗದೆ, ಅಂತರರಾಷ್ಟ್ರೀಯ ಮಟ್ಟದ ಅನುಭವವನ್ನೂ ಅವರು ಪಡೆದುಕೊಂಡಿದ್ದಾರೆ.
ಶ್ರೀಲಂಕಾ ಅಂಡರ್-19 ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಉಮಾ, ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅನುಭವ ಪಡೆದಿದ್ದಾರೆ. ಬೌಲಿಂಗ್ ಜೊತೆಗೆ ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಅವರತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. 15ನೇ ವಯಸ್ಸಿನಲ್ಲೇ ಡಬ್ಲ್ಯುಪಿಎಲ್ ಹರಾಜಿನಲ್ಲಿ ಹೆಸರು ದಾಖಲಿಸಿದ್ದ ಉಮಾ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಹಿರಿಯ ಆಟಗಾರ್ತಿಯರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಅವರ ಕ್ರಿಕೆಟ್ ಬೆಳವಣಿಗೆಗೆ ನೆರವಾಗುವ ನಿರೀಕ್ಷೆಯಿದೆ.
ಉಮಾ ಕಾಶ್ವಿ ಅವರು ಭಾರತ ತಂಡದ ಪ್ರಮುಖ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರಿಂದ ಮಾರ್ಗದರ್ಶನ ಪಡೆದಿರುವುದಾಗಿಯೂ ಈ ಹಿಂದೆ ಹೇಳಿಕೊಂಡಿದ್ದಾರೆ. ಜೆಮಿಮಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಲಿರುವುದರಿಂದ, ಅವರೊಂದಿಗೆ ಒಂದೇ ತಂಡದಲ್ಲಿ ಆಡುವ ಅವಕಾಶ ಉಮಾಗೆ ಸಿಗಲಿದೆ. ಅನುಭವಿ ಆಟಗಾರ್ತಿಯರಿಂದ ಆಟದ ತಂತ್ರಗಳನ್ನು ಕಲಿಯಲು ಹಾಗೂ ದೊಡ್ಡ ಮಟ್ಟದ ಪಂದ್ಯಗಳ ಒತ್ತಡವನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಬಹುದು.
ಆರ್‌ಸಿಬಿಗೆ ಶಾಕ್ ಕೊಟ್ಟ ಯುಪಿ; ಇಬ್ಬರು ಸ್ಟಾರ್ ಆಟಗಾರ್ತಿಯರ ಖರೀದಿ
ಉಮಾ ಕಾಶ್ವಿ ಅವರನ್ನು ಖರೀದಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಬಳಗಕ್ಕೆ ಯುವ ಪ್ರತಿಭೆಯನ್ನು ಸೇರಿಸಿಕೊಂಡಿದೆ. ಅವರಿಗೆ ಇನ್ನೂ ಕ್ರಿಕೆಟ್‌ನಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಕಿರಿಯರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಅನುಭವ ಆರಂಭಿಕ ಹಂತದಲ್ಲಿ ನೆರವಾಗಬಹುದು. 10 ಲಕ್ಷ ರೂ. ಮೊತ್ತದ ಈ ಒಪ್ಪಂದ ಉಮಾ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಡಬ್ಲ್ಯುಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಅನುಭವಿ ಆಟಗಾರ್ತಿಯರೊಂದಿಗೆ ಆಡುವ ಅವಕಾಶವನ್ನು ಬಳಸಿಕೊಂಡು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಗುರಿ ಅವರ ಮುಂದಿದೆ.