ಸೌತ್ ಝೋನ್ ತಂಡ ತೊರೆದು ಬೆಂಗಳೂರಿನಲ್ಲಿ ಶತಕ ಸಿಡಿಸಿದ ಕರುಣ್ ನಾಯರ್!

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಆಯ್ಕೆಯಲ್ಲಿ ತಮಗೆ ಸತತವಾಗಿ ಅನ್ಯಾಯ ಎಸಗಿದ ಸೌತ್ ಝೋನ್ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ತಿಲಕ್ ವರ್ಮಾ ಅವರ ಹಠಮಾರಿ ಧೋರಣೆಗೆ ಕರ್ನಾಟಕದ ಹಿರಿಯ ಬ್ಯಾಟರ್ ಕರುಣ್ ನಾಯರ್ ಭರ್ಜರಿ ಸೆಂಚುರಿ ಸಿಡಿಸಿ ಬ್ಯಾಟ್ ಮೂಲಕವೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಸೌತ್ ಝೋನ್ ತಂಡ ತೊರೆದು ಬೆಂಗಳೂರಿನಲ್ಲಿ ಶತಕ ಸಿಡಿಸಿದ ಕರುಣ್ ನಾಯರ್!
ಕರುಣ್ ನಾಯರ್
Image Credit source: GettyImages

Updated on: Sep 08, 2026 | 8:53 AM

ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಪ್ಲೇಯಿಂಗ್ ಇಲೆವೆನ್​​ನಿಂದ ತಮ್ಮನ್ನು ಹೊರಗಿಟ್ಟ ಸೌತ್ ಝೋನ್ ತಂಡದ ನಾಯಕ ತಿಲಕ್ ವರ್ಮಾ ಹಾಗೂ ಮ್ಯಾನೇಜ್‌ಮೆಂಟ್‌ನ ನಿರ್ಧಾರದ ವಿರುದ್ಧ ಹಿರಿಯ ಬ್ಯಾಟರ್ ಕರುಣ್ ನಾಯರ್ ಮೌನ ಮುರಿದಿದ್ದಾರೆ. ತಮಗೆ ಸ್ಥಾನ ನಿರಾಕರಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಂಡ ತೊರೆದಿದ್ದ ನಾಯರ್, ಇದೀಗ ದೇಶಿ ಟೂರ್ನಿಯಲ್ಲಿ ಭರ್ಜರಿ ಶತಕ ಸಿಡಿಸಿ ಬ್ಯಾಟ್‌ ಮೂಲಕವೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಕೇವಲ ರನ್‌ಗಳ ಮೂಲಕಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ತಂಡದ ತೊರೆದ ಕರುಣ್:

ಈ ಬಾರಿಯ ದುಲೀಪ್ ಟ್ರೋಫಿಗೆ ಕರುಣ್ ನಾಯರ್ ಆಯ್ಕೆಯಾಗಿದ್ದರು. ಇದಾಗ್ಯೂ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಝೋನ್ ಪರ ಕಣಕ್ಕಿಳಿದಿರಲಿಲ್ಲ. ಇನ್ನು ಫೈನಲ್​ನಲ್ಲಿ ಚಾನ್ಸ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಫೈನಲ್ ಪಂದ್ಯಕ್ಕಾಗಿ ಹೆಸರಿಸಿದ ಆಡುವ ಬಳಗದಲ್ಲಿ ಕರುಣ್ ನಾಯರ್ ಹೆಸರು ಇರಲಿಲ್ಲ. ಹೀಗಾಗಿ ಅವರು ಸೌತ್ ಝೋನ್ ತಂಡ ತೊರೆದು ಬೆಂಗಳೂರಿಗೆ ಹಿಂತಿರುಗಿದ್ದರು.

ಗೊಂದಲ ಸೃಷ್ಟಿಸಿದ ಕೋಚ್ ಹೇಳಿಕೆ:

ಇತ್ತ ಕರುಣ್ ನಾಯರ್ ಅಸಮಾಧಾನದಿಂದ ಹೋಟೆಲ್ ಖಾಲಿ ಮಾಡಿದ್ದರೆ, ಅತ್ತ ಸೌತ್ ಝೋನ್ ಕೋಚ್ ವಿಕ್ರಮ್ ವರ್ಮಾ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದರು. “ಕರುಣ್ ನಾಯರ್ ವೈಯಕ್ತಿಕ ಕಾರಣಗಳಿಂದಾಗಿ ತಂಡವನ್ನು ತೊರೆದಿದ್ದಾರೆ” ಎಂದು ಕೋಚ್ ಹೇಳಿಕೆ ನೀಡಿದ್ದರು. ಆದರೆ, ಕರುಣ್ ನಾಯರ್ ಬೆಂಗಳೂರಿಗೆ ಬಂದು ಕ್ಲಬ್ ಪಂದ್ಯ ಆಡಿ ಶತಕ ಬಾರಿಸಿದ್ದು ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು ಕೋಚ್ ಸುಳ್ಳನ್ನು ಬಯಲು ಮಾಡಿದೆ.

ಸೆಂಚುರಿ ಸಿಡಿಸಿದ ಕರುಣ್:

ಫೈನಲ್ ಪಂದ್ಯದಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಕರುಣ್ ನಾಯರ್ ಮೈದಾನದಲ್ಲೇ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಮೆಮೋರಿಯಲ್ ಟೂರ್ನಮೆಂಟ್‌ನಲ್ಲಿ, ಕೆಎಸ್‌ಸಿಎ ಸೆಕ್ರೆಟರಿಸ್ ಇಲೆವೆನ್ ತಂಡದ ಪರ ಕಣಕ್ಕಿಳಿದ ಕರುಣ್ ನಾಯರ್, ಛತ್ತೀಸ್‌ಗಢ್ ಸ್ಟೇಟ್ ಕ್ರಿಕೆಟ್ ಸಂಘದ ಬೌಲರ್‌ಗಳನ್ನು ದಂಡಿಸಿ 183 ಎಸೆತಗಳಲ್ಲಿ 104 ರನ್ (12 ಬೌಂಡರಿ, 1 ಸಿಕ್ಸರ್) ಬಾರಿಸಿದ್ದಾರೆ. ಈ ಮೂಲಕ ತಾವಿನ್ನೂ ಫಾರ್ಮ್‌ನಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈ ಶತಕದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟ ಸುದ್ದಿಯನ್ನು ಉಲ್ಲೇಖಿಸಿ  “ವಿವರಿಸಲಾಗದ್ದು ಎನ್ನುವುದು ತೀರಾ ಸಣ್ಣ ಮಾತು” ಎಂದು ಬರೆದುಕೊಳ್ಳುವ ಮೂಲಕ ತಿಲಕ್ ವರ್ಮಾ ಮತ್ತು ಮ್ಯಾನೇಜ್‌ಮೆಂಟ್‌ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

ನೆಪ ಹೇಳಿದ್ದ ಮ್ಯಾನೇಜ್‌ಮೆಂಟ್:

ಕರುಣ್ ನಾಯರ್ ಅವರನ್ನು ಮೊದಲು ನಾರ್ತ್ ಝೋನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಬೆಂಚ್ ಕಾಯಿಸಲಾಗಿತ್ತು. ಆ ಸಮಯದಲ್ಲಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ನಾಯಕ ತಿಲಕ್ ವರ್ಮಾ, “ವಿರೋಧಿ ತಂಡದ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಲು ಎಡಗೈ ಯುವ ಬ್ಯಾಟರ್ ಕೊಡಿಮೇಲ ಹಿಮತೇಜ ಅವರಿಗೆ ಅವಕಾಶ ನೀಡಲಾಗಿದೆ. ಇದು ಕೇವಲ ತಾಂತ್ರಿಕ ನಿರ್ಧಾರ” ಎಂದಿದ್ದರು.

ಆದರೆ, ಹಿಮತೇಜ ಶೂನ್ಯಕ್ಕೆ ಔಟಾದ ಹೊರತಾಗಿಯೂ, ಫೈನಲ್ ಪಂದ್ಯಕ್ಕೆ ಕರುಣ್ ನಾಯರ್ ಅವರನ್ನು ಪರಿಗಣಿಸದೆ ಮತ್ತೊಬ್ಬ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇದು ಕರುಣ್ ನಾಯರ್ ಅವರ ತಾಳ್ಮೆ ಗೆಡಿಸಿದೆ. ಹೀಗಾಗಿಯೇ ಅವರು ಸೌತ್ ಝೋನ್ ತಂಡವನ್ನು ತೊರೆದು ಚೆನ್ನೈನಿಂದ ಬೆಂಗಳೂರಿಗೆ ಹಿಂತಿರುಗಿದ್ದರು.

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡ ಪ್ರಕಟ: ಸೀನಿಯರ್ ಆಟಗಾರರ ಕಂಬ್ಯಾಕ್!

ಬೆಂಗಳೂರಿಗೆ ಮರಳಿದ ಬೆನ್ನಲ್ಲೇ ನಾಯರ್ ಕ್ಲಬ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು ಮ್ಯಾನೇಜ್‌ಮೆಂಟ್‌ನ ಸುಳ್ಳನ್ನು ಬಯಲು ಮಾಡಿದೆ. ಮುಂಬರುವ ದೇಶಿ ಸರಣಿಗಳ ಹೊಸ್ತಿಲಲ್ಲಿರುವಾಗಲೇ ಸೌತ್ ಝೋನ್ ಕ್ಯಾಂಪ್‌ನಲ್ಲಿ ಸೃಷ್ಟಿಯಾಗಿರುವ ಈ ಆಂತರಿಕ ಭಿನ್ನಮತ ಮತ್ತು ತಾರತಮ್ಯದ ವಿವಾದ ಈಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

Loading...
Unable to load recommendations.
Follow Us