ತಂಡ ಬದಲಾದ ತಕ್ಷಣ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರ ಆಟವೂ ಸಂಪೂರ್ಣವಾಗಿ ಬದಲಾದಂತೆ ಕಾಣುತ್ತಿದೆ. ಕಳೆದ ಕೆಲವು ಸೀಸನ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕರಾಗಿದ್ದಾಗ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಕೆಗಳನ್ನು ಎದುರಿಸಿದ್ದ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ (DC) ಸೇರಿದ ತಕ್ಷಣ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಐಪಿಎಲ್ 2025 ರಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಸಣ್ಣ ಆದರೆ ಸ್ಫೋಟಕ ಇನ್ನಿಂಗ್ಸ್ ಆಡಿದ ರಾಹುಲ್, ಎರಡನೇ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸಿದರು. ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಸಿಡಿಸಿದರು.
ಈ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿದೆ. ಈ ಆವೃತ್ತಿಯಲ್ಲಿ 14 ಕೋಟಿ ರೂ. ಮೊತ್ತದೊಂದಿಗೆ ಡೆಲ್ಲಿ ತಂಡವನ್ನು ಸೇರಿಕೊಂಡಿರುವ ಕೆಎಲ್ ರಾಹುಲ್ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದ ಕಾರಣ ರಾಹುಲ್ ಇನ್ನಿಂಗ್ಸ್ ಆರಂಭಿಸಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ, ರಾಹುಲ್ ತನ್ನ ಹಳೆಯ ಇಮೇಜ್ ಅನ್ನು ಮುರಿದು ಪವರ್‌ಪ್ಲೇನಲ್ಲಿ ಸ್ಫೋಟಕ ಆರಂಭವನ್ನು ನೀಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದವು.
ಚೆನ್ನೈನಲ್ಲಿ ಬಿಸಿಲಿನ ಮಧ್ಯಾಹ್ನ ಮೊದಲು ಬ್ಯಾಟಿಂಗ್ ಮಾಡಿದ ರಾಹುಲ್ ತಮ್ಮ ತಂಡ ಮತ್ತು ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಮೊದಲ 6 ಓವರ್‌ಗಳಲ್ಲಿ ರಾಹುಲ್ ಕೇವಲ 13 ಎಸೆತಗಳನ್ನು ಎದುರಿಸುವ ಅವಕಾಶ ಪಡೆದರು, ಅದರಲ್ಲಿ ಅವರು 19 ರನ್ ಗಳಿಸಿದರು. ಇದಾದ ನಂತರ ಗೇರ್ ಬದಲಿಸಿದ ರಾಹುಲ್ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ದಾಖಲಿಸಿದರು. ದೆಹಲಿ ಪರ ರಾಹುಲ್ 33 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ ತಮ್ಮ ಮೊದಲ ಅರ್ಧಶತಕವನ್ನು ಸಿಡಿಸಿದರು. ರಾಹುಲ್ ಕೊನೆಗೂ 20ನೇ ಓವರ್‌ನಲ್ಲಿ ಔಟಾದರು. ರನ್ಗಳಿಸಲು ಕಷ್ಟಕರವಾದ ಪಿಚ್‌ನಲ್ಲಿ ರಾಹುಲ್ 51 ಎಸೆತಗಳಲ್ಲಿ 77 ರನ್ ಗಳಿಸಿದರು, ಇದರಲ್ಲಿ 6 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿವೆ.
IPL 2025: ಐಪಿಎಲ್ಗೆ ಧೋನಿ ವಿದಾಯ? ಮೊದಲ ಬಾರಿಗೆ ಮಾಹಿ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬಂದ ಅಪ್ಪ-ಅಮ್ಮ
ರಾಹುಲ್ ಅವರ ಈ ಇನ್ನಿಂಗ್ಸ್‌ನ ಆಧಾರದ ಮೇಲೆ, ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 183 ರನ್ ಗಳಿಸಿತು. ರಾಹುಲ್ ಹೊರತುಪಡಿಸಿ, ಅಭಿಷೇಕ್ ಪೊರೆಲ್ ದೆಹಲಿ ಪರ ಪವರ್‌ಪ್ಲೇನಲ್ಲಿ ತ್ವರಿತ ಇನ್ನಿಂಗ್ಸ್ ಆಡಿದ 20 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ನಾಯಕ ಅಕ್ಷರ್ ಪಟೇಲ್ ಕೂಡ 21 ರನ್‌ಗಳ ಸಣ್ಣ ಆದರೆ ಪ್ರಮುಖ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ಟ್ರಿಸ್ಟಾನ್ ಸ್ಟಬ್ಸ್ ಕೇವಲ 12 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ತಂಡಕ್ಕೆ ಅಂತಿಮ ಸ್ಪರ್ಶ ನೀಡಿದರೆ, ಸಮೀರ್ ರಿಜ್ವಿ ಕೂಡ 20 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಖಲೀಲ್ ಅಹ್ಮದ್ 4 ಓವರ್‌ಗಳಲ್ಲಿ ಕೇವಲ 25 ರನ್ ನೀಡಿ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Sat, 5 April 25