IPL 2025: ಇದ್ದಕ್ಕಿದ್ದಂತೆ ಡೆಲ್ಲಿ ತಂಡ ತೊರೆದು ಮನೆಗೆ ಮರಳಿದ ರಾಹುಲ್; ಮತ್ತೆ ಮರಳುವುದು ಯಾವಾಗ?
KL Rahul Returns Home: ಐಪಿಎಲ್ 2025ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್ ಕುಟುಂಬ ಕಾರಣಗಳಿಂದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಅವರ ಪತ್ನಿ ಅತಿಯಾ ಶೆಟ್ಟಿ ಮಗುವಿಗೆ ಇಷ್ಟರಲ್ಲೇ ಜನ್ಮ ನೀಡಲಿದ್ದಾರೆ. ಹೀಗಾಗಿ ರಾಹುಲ್ ತಂಡದ ಅನುಮತಿ ಪಡೆದು ಮನೆಗೆ ಮರಳಿದ್ದಾರೆ. ಅವರು ಎರಡನೇ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ.

ಐಪಿಎಲ್ 2025 (IPL 2025) ಸೀಸನ್ ಪ್ರಾರಂಭವಾಗಿದ್ದು, ಪ್ರತಿಯೊಂದು ತಂಡವೂ ಪ್ರಸ್ತುತ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಪಂದ್ಯಾವಳಿ ಪ್ರಾರಂಭವಾಗಿ ಕೇವಲ ಎರಡು ದಿನಗಳು ಕಳೆದಿದ್ದು ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul), ಕೌಟುಂಬಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ. ವಾಸ್ತವವಾಗಿ ಮಾರ್ಚ್ 24, ಸೋಮವಾರದಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕಿತ್ತು. ಆದರೆ ರಾಹುಲ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಮೊದಲೇ ತಿಳಿದಿರುವಂತೆ ರಾಹುಲ್ ಅವರ ಮಡದಿ ಅತಿಯಾ ಶೆಟ್ಟಿ ಇಷ್ಟರಲ್ಲೇ ತಮ್ಮ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಕಾರಣದಿಂದಾಗಿ ರಾಹುಲ್ ತಂಡದ ತೊರೆದಿರಬಹುದು ಎಂದು ಹೇಳಲಾಗುತ್ತಿದೆ.
ನಿನ್ನೆ ತಂಡದ ತೊರೆದ ರಾಹುಲ್
ಮಾರ್ಚ್ 24, ಸೋಮವಾರ, ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಪಂದ್ಯದ ಒಂದು ದಿನ ಮೊದಲು, ಕೆಎಲ್ ರಾಹುಲ್ ತಂಡವನ್ನು ತೊರೆದು ಮನೆಗೆ ಮರಳಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ರಾಹುಲ್ ಕೇವಲ ಮೂರು ದಿನಗಳ ಹಿಂದೆಯಷ್ಟೇ ವಿಶಾಖಪಟ್ಟಣದಲ್ಲಿ ತಂಡವನ್ನು ಸೇರಿಕೊಂಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಅನುಮಾನಗಳಿದ್ದವು. ಪಂದ್ಯಕ್ಕೂ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಕೂಡ ರಾಹುಲ್ ಮೊದಲ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ತಿಳಿದಿಲ್ಲ ಎಂದು ಹೇಳಿದ್ದರು.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಮಾರ್ಚ್ 23 ರ ಭಾನುವಾರ, ರಾಹುಲ್ ಅವರ ಪತ್ನಿ ಅತಿಯಾ ಶೆಟ್ಟಿ ಮಗುವಿಗೆ ಜನ್ಮ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ, ರಾಹುಲ್ ತಕ್ಷಣ ಮನೆಗೆ ಮರಳಲು ತಂಡದ ಆಡಳಿತ ಮಂಡಳಿಯ ಅನುಮತಿ ಕೇಳಿದದ್ದು, ಫ್ರಾಂಚೈಸಿ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ರಾಹುಲ್ ಭಾನುವಾರ ರಾತ್ರಿಯೇ ಮುಂಬೈಗೆ ಮರಳಿದ್ದಾರೆ. ರಾಹುಲ್ ಕೆಲವು ತಿಂಗಳ ಹಿಂದೆ ತಮ್ಮ ಪತ್ನಿ ಗರ್ಭಿಣಿಯಾಗಿದ್ದು, ಇಬ್ಬರೂ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂಬ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
DC vs LSG Live Score, IPL 2025: ಲಕ್ನೋ ಮೊದಲ ವಿಕೆಟ್ ಪತನ
ರಾಹುಲ್ ಎರಡನೇ ಪಂದ್ಯ ಆಡುತ್ತಾರಾ?
ಸದ್ಯ ರಾಹುಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಆದರೆ ಮಾರ್ಚ್ 30 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಎರಡನೇ ಪಂದ್ಯಕ್ಕೆ ಅವರು ಲಭ್ಯವಾಗುವ ನಿರೀಕ್ಷೆಯಿದೆ. ರಾಹುಲ್ ಈ ಪಂದ್ಯದಿಂದ ಹೊರಗುಳಿದ ಕಾರಣ, ಅವರ ಹಳೆಯ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸುವ ಮತ್ತು ಅವರ ವಿರುದ್ಧ ಬಲಿಷ್ಠ ಪ್ರದರ್ಶನ ನೀಡುವ ಅವಕಾಶವೂ ಅವರ ಕೈ ಜಾರಿದೆ. ರಾಹುಲ್ ಕಳೆದ 3 ಸೀಸನ್ಗಳಲ್ಲಿ ಲಕ್ನೋ ತಂಡದ ನಾಯಕರಾಗಿದ್ದರು ಆದರೆ ಕಳಪೆ ಪ್ರದರ್ಶನದಿಂದಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ