KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ

KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ
KL Rahul IND vs SA 3rd ODI

South Africa vs India: ದೀಪಕ್ ಚಹರ್ ಕಡೇ ಹಂತದವರೆಗೂ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಡಿದರೂ ಭಾರತಕ್ಕೆ ಗೆಲುವು ದಕ್ಕಲಿಲ್ಲ. ಇದರೊಂದಿಗೆ ನಾಯಕ ರಾಹುಲ್ ಕೂಡ ಕೆಟ್ಟ ದಾಖಲೆಯನ್ನು ತನ್ನ ಹೆಗಲಿಗೆ ಹಾಕಿಕೊಂಡರು. ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಇವರು ಮಾತನಾಡಿದ್ದು ಏನು ಹೇಳಿದ್ರು ಎಂಬುದನ್ನು ನೋಡೋಣ.

TV9kannada Web Team

| Edited By: Vinay Bhat

Jan 24, 2022 | 8:39 AM

ಆಫ್ರಿಕಾ ಪ್ರವಾಸವನ್ನು ಭಾರತ (India vs South Africa) ವೈಟ್​ವಾಷ್ ಆಗುವ ಮೂಲಕ ಕೊನೆಗೊಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಟೀಮ್ ಇಂಡಿಯಾ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಮೊದಲೆರಡು ಏಕದಿನ ಪಂದ್ಯ ಸಂಪೂರ್ಣ ಹರಿಣಗಳ ಕಡೆಗೆ ಇದ್ದರೂ ಕೊನೇ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಪಡೆ ಸುಲಭ ಜಯ ಸಾಧಿಸಿಬಹುದಿತ್ತು. ಆದರೆ, ಅದನ್ನು ತನ್ನ ಕೈಯಾರೆ ಕಳೆದುಕೊಂಡಿತು. ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ (Deepak Chahar) ಕಡೇ ಹಂತದವರೆಗೂ ಗೆಲುವಿಗಾಗಿ ಹೋರಾಡಿದರೂ ದಕ್ಷಿಣ ಆಫ್ರಿಕಾದ ಸಂಘಟಿತ ದಾಳಿಗೆ ನಲುಗಿದ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ ವೀರೋಚಿತ ಸೋಲು ಕಾಣಬೇಕಾಯಿತು. ಇದರೊಂದಿಗೆ ನಾಯಕ ರಾಹುಲ್ ಕೂಡ ಕೆಟ್ಟ ದಾಖಲೆಯನ್ನು ತನ್ನ ಹೆಗಲಿಗೆ ಹಾಕಿಕೊಂಡರು. ತಾವು ನಾಯಕರಾಗಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡ ಭಾರತದ ಮೊದಲ ನಾಯಕ ಎಂಬ ಹಣೆಪಟ್ಟಿಗೆ ಕೆಎಲ್ ರಾಹುಲ್ ತುತ್ತಾಗಿದ್ದಾರೆ. ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಇವರು ಮಾತನಾಡಿದ್ದು ಏನು ಹೇಳಿದ್ರು ಎಂಬುದನ್ನು ನೋಡೋಣ.

“ದೀಪಕ್ ಚಹರ್ ನಮಗೆ ಗೆಲ್ಲಬಹುದಾದ ಉತ್ತಮ ಅವಕಾಶವನ್ನು ಮಾಡಿಕೊಟ್ಟಿದ್ದರು. ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಆದರೆ, ಅಂತಿಮವಾಗಿ ಬೇಸರದಿಂದ ಸೋಲಿಗೆ ಶರಣಾದೆವು. ನಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಪ್ರಯತ್ನವನ್ನು ಹಾಕಿದ್ದೆವು. ಇದರಿಂದ ಕೆಲವು ವಿಚಾರಗಳನ್ನು ಕಲಿತಿದ್ದೇವೆ ಮತ್ತು ಉತ್ತಮ ಗೊಳಿಸುತ್ತೇವೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದು ನಮಗೆ ತಿಳಿದಿದೆ. ಇದರಿಂದ ಹಿಂದೆ ಸರಿಯುವುದಿಲ್ಲ. ನಾವು ಆಯ್ಕೆ ಮಾಡಿಕೊಂಡ ಶಾಟ್ ಸೆಲೆಕ್ಷನ್ ಚೆನ್ನಾಗಿರಲಿಲ್ಲ. ಬೌಲಿಂಗ್​ನಲ್ಲಿ ಕೂಡ ನಾವು ಸರಿಯಾದ ಜಾಗಕ್ಕೆ ಚೆಂಡನ್ನು ಎಸೆಯಲಿಲ್ಲ,” ಎಂದು ರಾಹುಲ್ ಹೇಳಿದ್ದಾರೆ.

“ಕೌಶಲ್ಯ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ತಪ್ಪು ಮಾಡಿದ್ದೇವೆ. ಆದರೆ, ಈರೀತಿ ಆಗುತ್ತದೆ. ನಮಗೆ ತಂಡದಲ್ಲಿ ಕೆಲ ಹೊಸ ಆಟಗಾರರ ಪರಿಚಯವಾಗಿದೆ. ಏಕದಿನ ಸರಣಿಯಲ್ಲಿ ನಾವು ಈ ತಪ್ಪುಗಳನ್ನು ಮಾಡುತ್ತಲೇ ಇದ್ದೇವೆ. ವಿಶ್ವಕಪ್​ಗೆ ತಂಡದವನ್ನು ಕಟ್ಟುವ ಕಾರ್ಯದಲ್ಲಿ ನಾವಿನ್ನು ಆರಂಭದಲ್ಲಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಉತ್ತಮ ಸಮಯವನ್ನು ಕಳೆದಿದ್ದೇವೆ. ಇಲ್ಲಿ ಎಲ್ಲರೂ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾವು ಸಾಕಷ್ಟು ಕಠಿಣ ಹೋರಾಟ ನಡೆಸಿದ್ದೇವೆ,” ಎಂಬುದು ರಾಹುಲ್ ಮಾತಾಗಿತ್ತು.

ಇನ್ನು ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಮಾತನಾಡಿದ್ದು, “ಅಂತಿಮ ಹಂತದಲ್ಲಿ ಈ ಪಂದ್ಯ ಅದ್ಭುತವಾಗಿತ್ತು. ನಮಗೆ ತೃಪ್ತಿಯಾಗಿದೆ. ಅನೇಕರು ನಮಗೆ ಹೆಚ್ಚು ಅವಕಾಶ ನೀಡಲಿಲ್ಲ. ನಮ್ಮ ಪ್ರದರ್ಶನಗಳ ಮೂಲಕ ನಾವು ಒಂದೆರಡು ಹೊಸ ಆಟಗಾರರನ್ನು ಪಡೆಯಲು ಸಾಧ್ಯವಾಯಿತು ಎಂದು ಭಾವಿಸುತ್ತೇವೆ. ಕ್ವಿಂಟನ್ ಡಿಕಾಕ್ ಗ್ರೇಟ್, ರಾಸಿ ವಂಡರ್ ಡುಸೆಲ್ ಒಳ್ಳೆಯ ಬ್ಯಾಟರ್. ಇವರು ಪಂದ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿದರು. ಟೆಸ್ಟ್ ಸರಣಿ ನಂತರ ಇದೀಗ ಏಕದಿನ ಸರಣಿ ಗೆದ್ದಿರುವುದು ಸಂತಸ ತಂದಿದೆ. ಟೆಸ್ಟ್ ಸರಣಿ ನೋಡಿದಾಗ ಇದೊಂದು ನಾನು ನೋಡಿದ ಅತ್ಯಂತ ಕಷ್ಟದ ಪಂದ್ಯವಾಗಿತ್ತು. ಭಾರತದ ಬೌಲಿಂಗ್ ವಿಭಾಗ ಚೆನ್ನಾಗಿದೆ. ಅವರನ್ನು ಎದುರಿಸುವುದು ಸುಲಭವಲ್ಲ. ಸೌತ್ ಆಫ್ರಿಕಾ ಕಂಡೀಷನ್ ಹೀಗೆಯೆ ಇರುತ್ತದೆ. ನಾನು ಬ್ಯಾಟಿಂಗ್ ಮಾಡಲು ತುಂಬಾ ಸಂತಸ ಪಡುತ್ತೇವೆ ಇಲ್ಲಿ,” ಎಂದು ಹೇಳಿದ್ದಾರೆ.

ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್ ಡಿ ಕಾಕ್ ಅವರ ಅಕರ್ಷಕ ಶತಕದ ನಡುವೆಯೂ ಕೆಳಕ್ರಮಾಂಕದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಗೆ ನಲುಗಿ 49.5 ಓವರ್‌ಗಳಲ್ಲಿ 287ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ತಂಡ ಸಂಘಟಿತ ಹೋರಾಟದ ನಡುವೆಯೂ 49.2 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಎರಡೂ ಪ್ರಶಸ್ತಿಯನ್ನು ಡಿಕಾಕ್ ಬಾಜಿಕೊಂಡರು.

South Africa vs India: ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ ಭಾರತಕ್ಕೆ ಭಾರೀ ಮುಖಭಂಗ: ಟೀಮ್ ಇಂಡಿಯಾ ಎಡವಿದ್ದೆಲ್ಲಿ?

Follow us on

Related Stories

Most Read Stories

Click on your DTH Provider to Add TV9 Kannada