KL Rahul: ಕೆಎಲ್ ರಾಹುಲ್ಗೆ ಅಗ್ನಿಪರೀಕ್ಷೆ: ಫೇಲ್ ಆದ್ರೆ ಏಷ್ಯಾಕಪ್ ತಂಡದಿಂದ ಔಟ್..!
India Squad For Asia Cup 2022: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ.
ಏಷ್ಯಾಕಪ್ಗಾಗಿ (Asia Cup 2022) ಆಯ್ಕೆ ಮಾಡಲಾದ 15 ಸದಸ್ಯರ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಕೂಡ ಸ್ಥಾನ ಪಡೆದಿದ್ದಾರೆ. ಅದು ಕೂಡ ಉಪನಾಯಕನಾಗಿ ಎಂಬುದು ವಿಶೇಷ. ಆದರೆ ತಂಡದಲ್ಲಿ ಸ್ಥಾನ ಪಡೆದರೂ ಕೆಎಲ್ ರಾಹುಲ್ ಏಷ್ಯಾಕಪ್ ಆಡುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಏಕೆಂದರೆ ಕೆಎಲ್ಆರ್ ಐಪಿಎಲ್ ಬಳಿಕ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ತೊಡೆ ಸಂದು ಗಾಯದ ಸಮಸ್ಯೆಯ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಇದಾದ ಬಳಿಕ ಅವರು ಜರ್ಮನಿಗೆ ತೆರಳಿ ಸರ್ಜರಿಯನ್ನು ಕೂಡ ಮಾಡಿಸಿಕೊಂಡಿದ್ದರು. ಆ ಬಳಿಕ ವೆಸ್ಟ್ ಇಂಡೀಸ್ ಸರಣಿಗಾಗಿ ಕೆಎಲ್ ರಾಹುಲ್ ಸಿದ್ಧತೆಗಳನ್ನು ಆರಂಭಿಸಿದ್ದರು. ಇದೇ ವೇಳೆ ಕೊರೋನಾ ಸೋಂಕಿಗೆ ಒಳಗಾದ ಕಾರಣ ಆ ಸರಣಿಯಿಂದಲೂ ಹೊರಗುಳಿಯಬೇಕಾಯಿತು.
ಇದೀಗ ನೇರವಾಗಿ ಏಷ್ಯಾಕಪ್ಗೆ ಆಯ್ಕೆಯಾಗಿದ್ದಾರೆ. ಆದರೆ ಈ ಟೂರ್ನಿಗಾಗಿ ಯುಎಇಗೆ ತೆರಳುವ ಮುನ್ನ ಕೆಎಲ್ ರಾಹುಲ್ ತಮ್ಮ ಫಿಟ್‌ನೆಸ್ ಸಾಬೀತುಪಡಿಸುವಂತೆ ಬಿಸಿಸಿಐ ಸೂಚಿಸಿದೆ. ಅಂದರೆ ಮೈದಾನದಿಂದ ದೀರ್ಘಕಾಲ ಹೊರಗುಳಿದಿರುವ ಕೆಎಲ್ ರಾಹುಲ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕು. ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಅವರಿಗೆ ಏಷ್ಯಾಕಪ್ ತಂಡದಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಬಿಸಿಸಿಐನ ಫಿಸಿಯೋಸ್ ಮುಂದಿನ ವಾರ ಕೆಎಲ್ ರಾಹುಲ್ ಅವರ ಫಿಟ್‌ನೆಸ್ ಪರೀಕ್ಷೆಯನ್ನು ನಡೆಸಲಿದ್ದು, ಆ ಬಳಿಕ ಆಯ್ಕೆ ಸಮಿತಿಗೆ ವರದಿ ಸಲ್ಲಿಸಲಿದೆ. ಇದಾದ ಬಳಿಕವಷ್ಟೇ ಕನ್ನಡಿಗ ಏಷ್ಯಾಕಪ್ ಆಡಲಿದ್ದಾರಾ ಅಥವಾ ಇಲ್ಲವಾ ಎಂಬುದು ನಿರ್ಧಾರವಾಗಲಿದೆ.
ಇದಾಗ್ಯೂ ಕೆಎಲ್ ರಾಹುಲ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಅದಕ್ಕಾಗಿಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಪ್ರೋಟೋಕಾಲ್‌ನಂತೆ ಅವರು ಬೆಂಗಳೂರಿನಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಒಂದು ವೇಳೆ ಕೆಎಲ್ ರಾಹುಲ್ ಫಿಟ್‌ನೆಸ್ ಟೆಸ್ಟ್ನಲ್ಲಿ ವಿಫಲರಾದರೆ ಶ್ರೇಯಸ್ ಅಯ್ಯರ್ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗಬಹುದು. ಏಕೆಂದರೆ ಅಯ್ಯರ್ ಈಗಾಗಲೇ ತಂಡದಲ್ಲಿ ಮೀಸಲು ಆಟಗಾರರನಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿಯೇ ಮುಂದಿನ ವಾರ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಏಷ್ಯಾಕಪ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.