
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ವಾರ್ವಿಕ್‌ಷೇರ್ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತ್ತಾರ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಕಳೆದ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದ ಸುತಾರ್, ಇದೀಗ ಗ್ಲಾಮೋರ್ಗನ್ ವಿರುದ್ಧದ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೆ ಒಟ್ಟು ಮೂರು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರೊಂದಿಗೆ, ಮಾನವ್ ಸುತಾರ್ ಬರೋಬ್ಬರಿ 131 ವರ್ಷಗಳ ಹಳೆಯ ಪ್ರಥಮ ದರ್ಜೆ ಕ್ರಿಕೆಟ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ವಾರ್ವಿಕ್‌ಷೈರ್ ತಂಡವು ಗ್ಲಾಮೋರ್ಗನ್ ತಂಡವನ್ನು ಇನ್ನಿಂಗ್ಸ್ ಮತ್ತು 257 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗ್ಲಾಮೋರ್ಗನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 69 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಾರ್ವಿಕ್‌ಷೈರ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್ ಕಲೆಹಾಕಿತು. ನಂತರ ಎರಡನೇ ಇನ್ನಿಂಗ್ಸ್ನಲ್ಲಿಯೂ ಹೀನಾಯ ಪ್ರದರ್ಶನ ನೀಡಿದ ಗ್ಲಾಮೋರ್ಗನ್ 65 ರನ್ಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು ಸೋತಿತು
ಮಾನವ್ ಸುತಾರ್ ಈಗ ಪ್ರಥಮ ದರ್ಜೆ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ರನ್ ಬಿಟ್ಟುಕೊಡದೆ ಕನಿಷ್ಠ ಒಂದು ವಿಕೆಟ್ ಪಡೆದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 1895 ರಲ್ಲಿ ಇಂಗ್ಲಿಷ್ ಆಟಗಾರ ಟಾಮ್ ಹೇವರ್ಡ್ ಈ ಸಾಧನೆ ಮಾಡಿದ್ದರು. ಲೀಸೆಸ್ಟರ್‌ಶೈರ್ ಪರ ಆಡುತ್ತಿದ್ದ ಹೇವರ್ಡ್, ಸರ್ರೆ ವಿರುದ್ಧದ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಆರು ಎಸೆತಗಳಲ್ಲಿ ಯಾವುದೇ ರನ್ಗಳನ್ನು ನೀಡದೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
ಇದೀಗ 131 ವರ್ಷಗಳ ನಂತರ ಮಾನವ್ ಸುತಾರ್ ಈ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸುತಾರ್ ಕೇವಲ ಮೂರು ಎಸೆತಗಳನ್ನು ಎಸೆದು, ಒಂದು ರನ್ ಬಿಟ್ಟುಕೊಡದೆ ಒಂದು ವಿಕೆಟ್ ಪಡೆದಿದ್ದರು. ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಓವರ್‌ಗಳನ್ನು ಬೌಲ್ ಮಾಡಿದ ಸುತಾರ್, ಒಂದು ರನ್ ಬಿಟ್ಟುಕೊಡದೆ ಕ್ರಿಸ್ ಕುಕ್ ಮತ್ತು ಜೇಮಿ ಮ್ಯಾಕ್‌ಲ್ರಾಯ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು.