AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಖರೀದಿಯಾದ ಫಿನ್ ಅಲೆನ್

ನ್ಯೂಜಿಲೆಂಡ್‌ನ ಸ್ಫೋಟಕ ಆಟಗಾರ ಫಿನ್ ಅಲೆನ್ ಬಿಬಿಎಲ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ದಾಖಲೆಯ ₹4 ಕೋಟಿ (600,000 AUD) ಮೊತ್ತಕ್ಕೆ ಸೇರಿಕೊಂಡಿದ್ದಾರೆ. ಇದು ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿಯೇ ಅತಿ ದೊಡ್ಡ ಒಪ್ಪಂದ. ಈ ಸೇರ್ಪಡೆಯು ಸ್ಟಾರ್ಸ್ ಬ್ಯಾಟಿಂಗ್‌ಗೆ ಬಲ ತುಂಬಿದೆ. ಆದರೆ, ವಿದೇಶಿ ಆಟಗಾರರಿಗೆ ಸಿಗುತ್ತಿರುವ ಈ ಭಾರಿ ವೇತನವು ಆಸ್ಟ್ರೇಲಿಯಾದ ದೇಶೀಯ ಆಟಗಾರರಲ್ಲಿ ಅಸಮಾಧಾನ ಮೂಡಿಸಿದೆ.

ಬಿಬಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಖರೀದಿಯಾದ ಫಿನ್ ಅಲೆನ್
Finn Allen
ಪೃಥ್ವಿಶಂಕರ
|

Updated on: Sep 11, 2026 | 5:50 PM

Share

ನ್ಯೂಜಿಲೆಂಡ್​ನ ಸ್ಫೋಟಕ ಆರಂಭಿಕ ಆಟಗಾರ ಫಿನ್ ಅಲೆನ್ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್​ನಲ್ಲಿ ದಾಖಲೆಯ ಮೊತ್ತಕ್ಕೆ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಫಿನ್ ಅಲೆನ್ ಅವರನ್ನು ಮೆಲ್ಬೋರ್ನ್ ಸ್ಟಾರ್ಸ್ ದಾಖಲೆಯ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ. ಈ ದಾಖಲೆ ಒಪ್ಪಂದವು ಮೂರು ವರ್ಷಗಳವರೆಗೆ ಇರಲಿದ್ದು, ಅಲೆನ್ ತಂಡವನ್ನು ಕೂಡಿಕೊಂಡಿರುವುದು ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಿದೆ.

ಅತ್ಯಂತ ದುಬಾರಿ ಆಟಗಾರ

ಮೆಲ್ಬೋರ್ನ್ ಸ್ಟಾರ್ಸ್ ತಂಡವು ಫಿನ್ ಅಲೆನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸುಮಾರು 600,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ಅಂದರೆ 4 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದು ಬಿಗ್ ಬ್ಯಾಷ್ ಲೀಗ್‌ನ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ವಿದೇಶಿ ಆಟಗಾರರಿಗೆ ಡ್ರಾಫ್ಟ್ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಹೀಗಾಗಿ ತಂಡಗಳು ತಮಗಿಷ್ಟದ ಆಟಗಾರನನ್ನು ಅಧಿಕ ಬೆಲೆಗೆ ಖರೀದಿಸುವ ಆಯ್ಕೆ ಹೊಂದಿವೆ. ಇದರ ಪರಿಣಾಮವಾಗಿ ಅಲೆನ್‌ಗಾಗಿ ಹಲವು ಫ್ರಾಂಚೈಸಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಅಂತಿಮವಾಗಿ ಮೆಲ್ಬೋರ್ನ್ ಸ್ಟಾರ್ಸ್ ತಂಡ ಅಲೆನ್​ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

ಮೆಲ್ಬೋರ್ನ್ ಸ್ಟಾರ್ಸ್ ಸೇರಿದ ಅಲೆನ್

ಮೇಲೆ ಹೇಳಿದಂತೆ ಕಳೆದ ಆವೃತ್ತಿಯಲ್ಲಿ ಪರ್ತ್ ಸ್ಕಾರ್ಚರ್ಸ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಅಲೆನ್ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಡ್ರಾಫ್ಟ್ ವ್ಯವಸ್ಥೆಯಲ್ಲಿನ ಬದಲಾವಣೆಯಿಂದಾಗಿ, ಸ್ಕಾರ್ಚರ್ಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಹಳೆಯ ಹಕ್ಕನ್ನು ಪರ್ತ್ ಸ್ಕಾರ್ಚರ್ಸ್ ಕಳೆದುಕೊಂಡಿತ್ತು. ಈ ಅವಕಾಶವನ್ನು ಬಳಸಿಕೊಂಡ ಮೆಲ್ಬೋರ್ನ್ ಸ್ಟಾರ್ಸ್ ಅಲೆನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಹೊಸ ಮುಖ್ಯ ತರಬೇತುದಾರ ಕ್ಯಾಮರೂನ್ ವೈಟ್ ಅವರೊಂದಿಗೆ ಫಿನ್ ಅಲೆನ್ ಈ ಹಿಂದೆ ಕೆಲಸ ಮಾಡಿದ್ದಾರೆ. ಇವರಿಬ್ಬರು MLC ಕ್ರಿಕೆಟ್ ಲೀಗ್​ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್‌ ತಂಡದ ಪರ ಎರಡು ಆವೃತ್ತಿಗಳನ್ನು ಆಡಿದ್ದರು.

ಫಿನ್ ಅಲೆನ್ ಪ್ರಸ್ತುತ ಅತ್ಯಂತ ಅಪಾಯಕಾರಿ ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ 33 ಎಸೆತಗಳಲ್ಲಿ ಅಜೇಯ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದರು. ನಂತರ ಅವರು ಐಪಿಎಲ್‌ನಲ್ಲಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರದ ಶತಕ ಬಾರಿಸಿದ್ದರು. ಹೀಗಾಗಿ ಅವರಿಗೆ ಈ ದಾಖಲೆಯ ಮೊತ್ತವನ್ನು ನೀಡಲಾಗಿದೆ.

ಆಸೀಸ್ ಆಟಗಾರರಲ್ಲಿ ಅಸಮಾಧಾನ

ಆದಾಗ್ಯೂ, ಫಿನ್ ಅಲೆನ್ ಅವರ ಮೆಗಾ-ಕಾಂಟ್ರಾಕ್ಟ್ ಆಸ್ಟ್ರೇಲಿಯಾದ ದೇಶೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಮಾರ್ಕಸ್ ಸ್ಟೊಯಿನಿಸ್ ಮತ್ತು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಈ ಲೀಗ್‌ನಲ್ಲಿ ಬಹಳ ಹಿಂದಿನಿಂದಲೂ ಆಡುತ್ತಿದ್ದಾರೆ. ಆದಾಗ್ಯೂ ಅವರು ಪಡೆಯುವ ವೇತನ ವಿದೇಶಿ ಆಟಗಾರರಿಗಿಂತ ಗಮನಾರ್ಹವಾಗಿ ಕಡಿಮೆ ಇದೆ. ಈ ಹಿಂದೆ, ಅಡಿಲೇಡ್ ಸ್ಟ್ರೈಕರ್ಸ್ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರನ್ನು 500,000 ಆಸ್ಟ್ರೇಲಿಯನ್ ಡಾಲರ್‌ಗೆ ಖರೀದಿಸಿತ್ತು. ಇದು ವಿದೇಶಿ ಆಟಗಾರರ ವೇತನದ ಮೇಲೆ ಮಿತಿ ಹೇರಬೇಕೆಂಬ ಒತ್ತಾಯಕ್ಕೆ ಕಾರಣವಾಗಿದೆ, ಏಕೆಂದರೆ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ತಮ್ಮ ಸಹ ಆಟಗಾರರಿಗಿಂತ ಕಡಿಮೆ ವೇತನ ಪಡೆಯುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us