ರೆನ್​ಶಾ ಅಮೋಘ ಶತಕ: ಕುಸಿತದಿಂದ ಬೃಹತ್ ಮೊತ್ತ ಪೇರಿಸಿದ ಆಸ್ಟ್ರೇಲಿಯಾ

ಒಂದು ಕಡೆ ವಿಕೆಟ್‌ಗಳ ಪೆವಿಲಿಯನ್ ಪರೇಡ್, ಇನ್ನೊಂದೆಡೆ ಆಫ್ರಿಕನ್ನರ ತೀಕ್ಷ್ಣ ಬೌಲಿಂಗ್ ದಾಳಿ... ಇಂತಹ ಭೀಕರ ಒತ್ತಡದ ಪರಿಸ್ಥಿತಿಯಲ್ಲೂ ಧೃತಿಗೆಡದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಮ್ಯಾಟ್ ರೆನ್‌ಶಾ, ಡರ್ಬನ್ ಟೆಸ್ಟ್‌ನಲ್ಲಿ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ಈ ಜವಾಬ್ದಾರಿಯುತ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಲು ಪ್ರಮುಖ ಕಾರಣರಾಗಿದ್ದಾರೆ.

ರೆನ್​ಶಾ ಅಮೋಘ ಶತಕ: ಕುಸಿತದಿಂದ ಬೃಹತ್ ಮೊತ್ತ ಪೇರಿಸಿದ ಆಸ್ಟ್ರೇಲಿಯಾ
Matt Renshaw
Image Credit source: GettyImages

Updated on: Oct 11, 2026 | 8:30 AM

ಡರ್ಬನ್‌ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆಫ್ರಿಕನ್ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ದರು. ಪರಿಣಾಮವಾಗಿ ಆಸೀಸ್ ಪಡೆ ಕೇವಲ 124 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಇದೇ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 390 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಮ್ಯಾಟ್ ರೆನ್‌ಶಾ ಅವರ 190 ರನ್‌ಗಳ ಮ್ಯಾರಥಾನ್ ಇನಿಂಗ್ಸ್!

ಮ್ಯಾಟ್ ಮ್ಯಾರಥಾನ್ ಇನಿಂಗ್ಸ್​:

ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಟ್ ರೆನ್‌ಶಾ ಒಂದು ತುದಿಯಲ್ಲಿ ಕ್ರೀಸ್ ಕಚ್ಚಿ ನಿಂತರೆ, ಇನ್ನೊಂದು ತುದಿಯಲ್ಲಿ ಉಳಿದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಆದಾಗ್ಯೂ ಧೃತಿಗೆಡದ ರೆನ್‌ಶಾ ಅತ್ಯಂತ ತಾಳ್ಮೆಯ ಆಟ ಪ್ರದರ್ಶಿಸಿದರು. ತಮ್ಮ ಮೊದಲ 50 ರನ್ ಗಳಿಸುವ ವೇಳೆ ಕೇವಲ 14.2% ಎಸೆತಗಳನ್ನು ಮಾತ್ರ ಆಕ್ರಮಣಕಾರಿಯಾಗಿ ಎದುರಿಸಿದರು. ಅಂದರೆ ಇಲ್ಲಿ ರೆನ್​ಶಾ ತಾಳ್ಮೆಯುತ ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡಿದರು. ಹೀಗೆ ಸೌತ್ ಆಫ್ರಿಕಾ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಆಸೀಸ್ ದಾಂಡಿಗ ಒಟ್ಟು 397 ಎಸೆತಗಳಲ್ಲಿ 21 ಫೋರ್ ಹಾಗೂ 1 ಸಿಕ್ಸರ್​ನೊಂದಿಗೆ 190 ರನ್​ ಚಚ್ಚಿದರು.

9 ವರ್ಷಗಳ ಕಾಯುವಿಕೆಗೆ ಅಂತ್ಯ:

ಮ್ಯಾಟ್ ರೆನ್‌ಶಾ ಅವರ ಈ ಅಮೋಘ ಇನಿಂಗ್ಸ್​ನೊಂದಿಗೆ ಅವರ ಸುದೀರ್ಘ ಕಾಯುವಿಕೆ ಅಂತ್ಯವಾಗಿದೆ. ಅಂದರೆ ಇದು ಅವರ ಟೆಸ್ಟ್ ವೃತ್ತಿಜೀವನದ ಕೇವಲ ಎರಡನೇ ಶತಕವಾಗಿದೆ. ಜನವರಿ 2017ರಲ್ಲಿ ಪಾಕಿಸ್ತಾನ್ ವಿರುದ್ಧ ಸಿಡ್ನಿಯಲ್ಲಿ ತಮ್ಮ ಮೊದಲ ಶತಕ (184 ರನ್) ಬಾರಿಸಿದ್ದ ಅವರು, 9 ವರ್ಷ ಹಾಗೂ 280 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಟೆಸ್ಟ್‌ನಲ್ಲಿ ಶತಕದ ಸಂಭ್ರಮ ಆಚರಿಸಿದ್ದಾರೆ.

ಟೀ ವಿರಾಮದ ನಂತರದ ಮೊದಲ ಓವರ್‌ನಲ್ಲಿ ಸೈಮನ್ ಹಾರ್ಮರ್‌ಗೆ ವಿಕೆಟ್ ಒಪ್ಪಿಸುವ ಮುನ್ನ ರೆನ್‌ಶಾ ಆಡಿದ ಈ ಮ್ಯಾರಥಾನ್ ಇನಿಂಗ್ಸ್, ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಗಿದೆ. ಅದರಂತೆ ಇದೀಗ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 390 ರನ್​ ಕಲೆಹಾಕಿದೆ.

ಸೌತ್ ಆಫ್ರಿಕಾಗೆ ಆರಂಭಿಕ ಆಘಾತ:

ಆಸ್ಟ್ರೇಲಿಯಾ ಪೇರಿಸಿದ 390 ರನ್​ಗಳ ಇನಿಂಗ್ಸ್​ಗೆ ಪ್ರತ್ಯುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಜೋಶ್ ಹೇಝಲ್​ವುಡ್​ ಯಶಸ್ವಿಯಾಗಿದ್ದಾರೆ. ಸೌತ್ ಆಫ್ರಿಕಾ ಇನಿಂಗ್ಸ್​ನ 2ನೇ ಓವರ್​ನ ಮೂರನೇ ಎಸೆತದಲ್ಲೇ ರಯಾನ್ ರಿಕೆಲ್ಟನ್ (0) ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದಾರೆ. ಅದರಂತೆ 2ನೇ ದಿನದಾಟದ ಅಂತ್ಯದ ವೇಳೆಗೆ ಸೌತ್ ಆಫ್ರಿಕಾ ತಂಡ 1 ವಿಕೆಟ್ ಕಳೆದುಕೊಂಡು 27 ರನ್​ ಕಲೆಹಾಕಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ಡೇವಿಡ್ ಬೆಡಿಂಗ್ಹ್ಯಾಮ್ ,
ಟೆಂಬಾ ಬವುಮಾ (ನಾಯಕ) , ಟ್ರಿಸ್ಟನ್ ಸ್ಟಬ್ಸ್ , ವಿಯಾನ್ ಮುಲ್ಡರ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್ ,
ಸೈಮನ್ ಹಾರ್ಮರ್ , ಕೇಶವ ಮಹಾರಾಜ್ , ಅನ್ರಿಕ್ ನೋಕಿಯ.

ಇದನ್ನೂ ಓದಿ: 26 ದಿನಗಳಲ್ಲಿ 10 ಟಿ20 ಪಂದ್ಯಗಳನ್ನಾಡಲಿದೆ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ನಿಕ್ ಮ್ಯಾಡಿನ್ಸನ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ ,
ಮ್ಯಾಟ್ ರೆನ್​ಶಾ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್‌ವುಡ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us