AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದಿಂದ ಔಟ್: ಹೈದರಾಬಾದ್ ಪರ ಕಣಕ್ಕಿಳಿಯಲು ಸಿರಾಜ್ ರೆಡಿ

Mohammad Siraj: 2025ರ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಆರಂಭವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದ್ದು, ಉಳಿದ ಮ್ಯಾಚ್​ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಈ ಟೂರ್ನಿಗಾಗಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್​ಅವರನ್ನು ಆಯ್ಕೆ ಮಾಡಲಾಗಿಲ್ಲ.

ಟೀಮ್ ಇಂಡಿಯಾದಿಂದ ಔಟ್: ಹೈದರಾಬಾದ್ ಪರ ಕಣಕ್ಕಿಳಿಯಲು ಸಿರಾಜ್ ರೆಡಿ
Mohammad Siraj
ಝಾಹಿರ್ ಯೂಸುಫ್
|

Updated on: Jan 20, 2025 | 7:14 AM

Share

ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್​ಗೆ ಸ್ಥಾನ ಲಭಿಸಿಲ್ಲ. 15 ಸದಸ್ಯರ ಈ ತಂಡದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಅರ್ಷದೀಪ್ ಸಿಂಗ್​ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಸಿರಾಜ್ ತಂಡದಿಂದ ಹೊರಬಿದ್ದಂತಾಗಿದೆ.

ಇತ್ತ ಭಾರತ ತಂಡದಿಂದ ಹೊರಬಿದ್ದಿರುವ ಸಿರಾಜ್, ರಣಜಿ ಟೂರ್ನಿಯತ್ತ ಮುಖ ಮಾಡಲು ನಿರ್ಧರಿಸಿದ್ದಾರೆ. ನ್ಯೂಸ್18 ವರದಿ ಪ್ರಕಾರ, ಟೀಮ್ ಇಂಡಿಯಾ ವೇಗಿ ರಣಜಿ ಟೂರ್ನಿಯ ದ್ವಿತೀಯಾರ್ಧದ ಪಂದ್ಯದಲ್ಲಿ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ.

ಜನವರಿ 23 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ ದ್ವಿತೀಯ ಹಂತದ ಮೊದಲ ಪಂದ್ಯಕ್ಕೆ ಸಿರಾಜ್ ಲಭ್ಯರಿಲ್ಲ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಎಚ್‌ಸಿಎ) ಅಧ್ಯಕ್ಷ ಜಗನ್ ಮೋಹನ್ ರಾವ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಇದಾಗ್ಯೂ ಅವರು ಮುಂದಿನ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಅದರಂತೆ ಜನವರಿ 30 ರಿಂದ ನಾಗ್ಪುರದಲ್ಲಿ ಪ್ರಾರಂಭವಾಗುವ ವಿದರ್ಭ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಹೈದರಾಬಾದ್‌ ಪರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ 4 ವರ್ಷಗಳ ಬಳಿಕ ಮತ್ತೆ ದೇಶೀಯ ಅಂಗಳದಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಬರೋಬ್ಬರಿ 71 ವಿಕೆಟ್​ಗಳು:

ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳು ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದಲ್ಲಿ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂಬುದು ಒಂದೆಡೆಯಾದರೆ, 2022 ರಿಂದ 2024 ರವರೆಗಿನ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಸಿರಾಜ್ ಕೇವಲ 22.97 ರ ಸರಾಸರಿಯಲ್ಲಿ ಒಟ್ಟು 71 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ವಿಕೆಟ್​ಗಳೊಂದಿಗೆ ಇದೀಗ ಐಸಿಸಿ ಬೌಲರ್​​ಗಳ ಶ್ರೇಯಾಂಕದಲ್ಲಿ 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದಾಗ್ಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ.

ಅತ್ತ ಜಸ್​ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದರೂ, ಮೊಹಮ್ಮದ್ ಸಿರಾಜ್​ಗೆ ಸ್ಥಾನ ಕಲ್ಪಿಸಲಾಗಿಲ್ಲ. ಬದಲಾಗಿ ಹರ್ಷೀತ್ ರಾಣಾ ಅವರನ್ನು ಬದಲಿ ಬೌಲರ್ ಆಗಿ ಆಯ್ಕೆ ಮಾಡಲಾಗಿದೆ.

ಇಂಡೊ-ಆಂಗ್ಲ ಸರಣಿ ಯಾವಾಗ ಶುರು?

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 22 ರಿಂದ ಆರಂಭವಾಗಲಿದೆ. ಈ ಸರಣಿಗೆ ಮೊದಲಿಗೆ 5 ಪಂದ್ಯಗಳ ಟಿ20 ಪಂದ್ಯಗಳನ್ನು ಆಡಲಾಗುತ್ತಿದ್ದು, ಇದಾದ ಬಳಿಕ ಮೂರು ಮ್ಯಾಚ್​​ಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

  • 1ನೇ T20I: ಜನವರಿ 22 (ಚೆನ್ನೈ)
  • 2ನೇ T20I: ಜನವರಿ 25 (ಕೋಲ್ಕತ್ತಾ)
  • 3ನೇ T20I: ಜನವರಿ 28 (ರಾಜ್‌ಕೋಟ್)
  • 4ನೇ T20I: ಜನವರಿ 31 (ಪುಣೆ)
  • 5ನೇ T20I: ಫೆಬ್ರವರಿ 2 (ಮುಂಬೈ)

ಇದನ್ನೂ ಓದಿ: Champions Trophy 2025: ಟೀಮ್ ಇಂಡಿಯಾದಲ್ಲಿ 6 ಹಳೆ ಹುಲಿಗಳು

  • 1ನೇ ODI: ಫೆಬ್ರವರಿ 6 (ನಾಗ್ಪುರ)
  • 2ನೇ ODI: ಫೆಬ್ರವರಿ 9 (ಕಟಕ್)
  • 3ನೇ ODI: ಫೆಬ್ರವರಿ 12 (ಅಹಮದಾಬಾದ್)