Yashasvi Jaiswal: ಮುಂಬೈ ತಂಡವನ್ನು ತೊರೆಯಲಿರುವ ಯಶಸ್ವಿ ಜೈಸ್ವಾಲ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಮೂರು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿರುವ ಜೈಸ್ವಾಲ್ ಕಡೆಯಿಂದ ಈ ಬಾರಿ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದರ ನಡುವೆ ದೇಶೀಯ ಅಂಗಳದಲ್ಲಿ ತನ್ನ ತಂಡವನ್ನು ಬದಲಿಸಲು ಯಶಸ್ವಿ ಜೈಸ್ವಾಲ್ ನಿರ್ಧರಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಮುಂಬೈ ತಂಡವನ್ನು ತೊರೆದು, ಮುಂಬರುವ ದೇಶೀಯ ಸೀಸನ್ನಲ್ಲಿ ಗೋವಾ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಎನ್‌ಒಸಿಗಾಗಿ ಪತ್ರ ಬರೆದಿದ್ದಾರೆ. ಮಂಗಳವಾರ ಭಾರತದ ಆಟಗಾರನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಕೋರಿ ಇಮೇಲ್ ಬಂದಿದೆ. ಅವರು ತಮ್ಮ ಇಮೇಲ್‌ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ಸೀಸನ್ನಲ್ಲಿ ಗೋವಾ ರಾಜ್ಯ ತಂಡದ ಪರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳು ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದಾರೆ.
ಇತ್ತ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಸಹ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ನಾವು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ಮುಂಬರುವ ದೇಶೀಯ ಸೀಸನ್ನಲ್ಲಿ ಗೋವಾ ಪರ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದಾಗ್ಯೂ ಅವರಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಸಿಕ್ಕಿಲ್ಲ. ಎನ್ಒಸಿ ಲೆಟರ್ ಸಿಕ್ಕ ಬಳಿಕ ಅವರನ್ನು ಮುಂದಿನ ಸೀಸನ್ಗೆ ಗೋವಾ ತಂಡದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಜಿಸಿಎ ಕಾರ್ಯದರ್ಶಿ ಶಂಬಾ ನಾಯಕ್ ದೇಸಾಯಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮುಂಬೈ ಪರ ಕಣಕ್ಕಿಳಿದಿದ್ದ ಅರ್ಜುನ್ ತೆಂಡೂಲ್ಕರ್ ಅವರು ಗೋವಾ ಪರ ವಲಸೆ ಹೋಗಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ದೇಶೀಯ ವೃತ್ತಿಜೀವನ:
ಯಶಸ್ವಿ ಜೈಸ್ವಾಲ್ 2019 ರಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡಿದ್ದರು. ಛತ್ತೀಸ್‌ಗಢ ವಿರುದ್ಧ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವಾಡಿದ್ದ ಅವರು, ಈವರೆಗೆ 36 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 60 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಒಟ್ಟು 3712 ರನ್ ಗಳಿಸಿದ್ದಾರೆ.
ಇನ್ನು ಮುಂಬೈ ಪರ ಯಶಸ್ವಿ ಜೈಸ್ವಾಲ್ ಬ್ಯಾಟ್ನಿಂದ 13 ಶತಕಗಳು ಹಾಗೂ 12 ಅರ್ಧಶತಕಗಳು ಮೂಡಿಬಂದಿವೆ. ಅಲ್ಲದೆ ಮುಂಬೈ ಪರ ಅಬ್ಬರಿಸುವ ಮೂಲಕವೇ ಯಶಸ್ವಿ ಟೀಮ್ ಇಂಡಿಯಾದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದರು. ಆದರೀಗ ವೈಯುಕ್ತಿಕ ಕಾರಣಗಳಿಂದಾಗಿ ಮುಂಬೈ ತಂಡವನ್ನು ತೊರೆದು ಗೋವಾ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
ಸದ್ಯ ಯಶಸ್ವಿ ಜೈಸ್ವಾಲ್ ಐಪಿಎಲ್ ಆಡುತ್ತಿದ್ದು, ರಾಜಸ್ಥಾನ್ ರಾಯಲ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿರುವ ಜೈಸ್ವಾಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
Published On - 2:49 pm, Wed, 2 April 25