ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!

ಕಳೆದ ಒಂದು ದಶಕದಿಂದ ಭಾರತೀಯ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವೈಯಕ್ತಿಕ ಮುನಿಸೊಂದು ಈಗ ಸುಖಾಂತ್ಯ ಕಾಣುವ ಮುನ್ಸೂಚನೆ ಸಿಕ್ಕಿದೆ. ಇತ್ತೀಚೆಗೆ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮುರಳಿ ವಿಜಯ್ ಅವರು ದಿನೇಶ್ ಕಾರ್ತಿಕ್ ಅವರನ್ನು "ನನ್ನ ಆತ್ಮೀಯ ಗೆಳೆಯ" ಎಂದು ಕರೆಯುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. 

ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!
Murali Vijay - Dinesh Karthik
Image Credit source: IPL

Updated on: Jul 05, 2026 | 11:46 AM

ಟೀಮ್ ಇಂಡಿಯಾದ ಮಾಜಿ ಆಟಗಾರ ಮುರಳಿ ವಿಜಯ್ ಅವರು ತಮ್ಮ ಹಳೆಯ ಸಹ-ಆಟಗಾರ ದಿನೇಶ್ ಕಾರ್ತಿಕ್ ಬಗ್ಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (TNCA) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ಮುರಳಿ ವಿಜಯ್, ದಿನೇಶ್ ಕಾರ್ತಿಕ್​ ಜೊತೆಗಿನ ತಮ್ಮ ಹಳೆಯ ಸ್ನೇಹ ಮತ್ತು ಅವರ ಕ್ರಿಕೆಟ್ ಕೊಡುಗೆಯನ್ನು ಮೆಲುಕು ಹಾಕಿದರು.

“ಅವನೊಬ್ಬ ಅದ್ಭುತ ಗೆಳೆಯ”

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುರಳಿ ವಿಜಯ್, “ದಿನೇಶ್ ಕಾರ್ತಿಕ್ ಬಗ್ಗೆ ನಾನು ಇಲ್ಲಿ ಮಾತನಾಡುವುದು ಕೆಲವರಿಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ನಾನು ಅವರನ್ನು ನನ್ನ ಬಾಲ್ಯದಿಂದಲೂ ಬಲ್ಲೆ. ಅವರು ಅತ್ಯಂತ ಅದ್ಭುತ ವ್ಯಕ್ತಿತ್ವ ಹೊಂದಿರುವ ನನ್ನ ಅತ್ಯಂತ ಆತ್ಮೀಯ ಗೆಳೆಯ” ಎಂದು ಬಣ್ಣಿಸಿದರು.

ಮುಂದುವರಿದು ಮಾತನಾಡಿದ ಮುರಳಿ ವಿಜಯ್, “ಕಾರ್ತಿಕ್ ಅವರ ಅದ್ಭುತ ಕ್ರಿಕೆಟ್ ಜ್ಞಾನದಿಂದ ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯವಾಗಿದೆ. ಅದಕ್ಕಾಗಿ ನಾನು ಅವರಿಗೆ ಸದಾ ಧನ್ಯವಾದ ಅರ್ಪಿಸುತ್ತೇನೆ. ದಿನೇಶ್ ಕಾರ್ತಿಕ್ ಅವರ ಶೈಲಿಯಲ್ಲಿ ಆಡುವುದನ್ನು ನಾನು ಇದುವರೆಗೆ ಬೇರೆ ಯಾವೊಬ್ಬ ಆಟಗಾರನಲ್ಲೂ ನೋಡಿಲ್ಲ” ಎಂದು ಗುಣಗಾನ ಮಾಡಿದರು.

ಗೆಳೆಯರು ದೂರವಾಗಲು ಕಾರಣವೇನು?

ಮುರಳಿ ವಿಜಯ್ ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಲು ಇಬ್ಬರ ನಡುವಿನ ಹಳೆಯ ವೈಯಕ್ತಿಕ ಇತಿಹಾಸವೇ ಕಾರಣ. ತಮಿಳುನಾಡು ದೇಶಿ ಕ್ರಿಕೆಟ್ ತಂಡದಲ್ಲಿ ಒಟ್ಟಿಗೆ ಬೆಳೆದ ಇವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದರು.

ಆದರೆ, 2012ರ ಆಸುಪಾಸಿನಲ್ಲಿ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಮತ್ತು ಮುರಳಿ ವಿಜಯ್ ನಡುವೆ ಪ್ರೇಮ ಸಂಬಂಧ ಏರ್ಪಟ್ಟಿತ್ತು. ಈ ವಿಷಯ ತಿಳಿದ ತಕ್ಷಣ ದಿನೇಶ್ ಕಾರ್ತಿಕ್ ಅವರು ನಿಕಿತಾ ಅವರಿಗೆ ವಿಚ್ಛೇದನ ನೀಡಿದರು.  ಆ ನಂತರ ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು.

ಈ ಘಟನೆಯ ಬಳಿಕ ಇಬ್ಬರ ನಡುವಿನ ದಶಕಗಳ ಸ್ನೇಹ ಸಂಪೂರ್ಣವಾಗಿ ಮುರಿದು ಬಿದ್ದಿತ್ತು. ಇದಾದ ನಂತರ ಇಬ್ಬರೂ ಭಾರತ ತಂಡದಲ್ಲಿದ್ದಾಗಲೂ ಪರಸ್ಪರ ಮಾತನಾಡುತ್ತಿರಲಿಲ್ಲ.

ಡಿಕೆ ಹೊಸ ಇನಿಂಗ್ಸ್​:

ಕಾಲ ಕಳೆದಂತೆ ಇಬ್ಬರೂ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ. ದಿನೇಶ್ ಕಾರ್ತಿಕ್ ಅವರು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ.

2024 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ದಿನೇಶ್ ಕಾರ್ತಿಕ್, ಪ್ರಸ್ತುತ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು… ಟೀಮ್ ಇಂಡಿಯಾ ಕ್ಯಾಪ್ಟನ್ ಹೆಗಲಿಗೆ ಬೇಡದ ದಾಖಲೆ!

ಇದೀಗ ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ನಡುವಣ ಸ್ನೇಹದ ‘ಕಥೆ’ ಮತ್ತೆ ಮುನ್ನಲೆಗೆ ಬಂದಿದೆ. ವರ್ಷಗಳ ಕಾಲ ಇಬ್ಬರ ನಡುವೆ ಇದ್ದ ಕಹಿಯನ್ನು ಮರೆತು, ಮುರಳಿ ವಿಜಯ್ ಅವರು ಸಾರ್ವಜನಿಕವಾಗಿ ದಿನೇಶ್ ಕಾರ್ತಿಕ್ ಅವರನ್ನು “ಆತ್ಮೀಯ ಗೆಳೆಯ” ಎಂದು ಕರೆದಿರುವುದು ಇದೀಗ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ.

 

 

Follow Us