IND vs SL: ಕೈಗೆ ಗಾಯ, ನಡೆಯಲೂ ಆಗುತ್ತಿಲ್ಲ! ಬ್ಯಾಟಿಂಗ್ ನಿಲ್ಲಿಸಿ ಡಗೌಟ್ಗೆ ತೆರಳಿದ ರಾಹುಲ್
KL Rahul Injury Update: ಶ್ರೀಲಂಕಾ ವಿರುದ್ಧದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಸ್ನಾಯು ಸೆಳೆತದಿಂದ ನಿವೃತ್ತಿ ಹೊಂದಿದರು. 77 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರಾಹುಲ್, ನೋವು ತೀವ್ರಗೊಂಡಿದ್ದರಿಂದ ಆಟ ಮುಂದುವರಿಸಲಾಗದೆ ಪೆವಿಲಿಯನ್‌ಗೆ ಮರಳಿದರು. ಇದು ಟೀಂ ಇಂಡಿಯಾ ಮತ್ತು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಅವರ ಗಾಯದ ಸ್ವರೂಪ ಮತ್ತು ಮೈದಾನಕ್ಕೆ ಮರಳುವಿಕೆ ಬಗ್ಗೆ ಸ್ಪಷ್ಟತೆ ನಿರೀಕ್ಷಿಸಲಾಗಿದೆ.

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Sri Lanka) ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಪರ ಬ್ಯಾಟರ್ಗಳು ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಆದರೆ ಮೊದಲ ದಿನದಾಟದ ಎರಡನೇ ಸೆಷನ್ ಅಂದರೆ ಚಹಾ ವಿರಾಮ ಮುಗಿದ ಬಳಿಕ ಕಂಡುಬಂದ ದೃಶ್ಯ ಟೀಂ ಇಂಡಿಯಾವನ್ನು ಹಾಗೂ ಅದರ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ತಂಡದ ಅನುಭವಿ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ರಾಹುಲ್ಗೆ ಈ ಸ್ನಾಯು ಸೆಳೆತ ಗಂಭೀರವಾಗಿದ್ದು, ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ರಾಹುಲ್ ಮೈದಾನದಿಂದ ಹೊರನಡೆದರು. ರಾಹುಲ್ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮುನ್ನ 162 ಎಸೆತಗಳಲ್ಲಿ 77 ರನ್ಗಳ ಇನ್ನಿಂಗ್ಸ್ ಆಡಿದ್ದರು.
ರಾಹುಲ್ಗೆ ಸ್ನಾಯು ಸೆಳೆತ
ದಿನದಾಟದ ಎರಡನೇ ಸೆಷನ್ನ ಅಂತಿಮ ಓವರ್‌ನಲ್ಲಿಯೇ ಕೆ.ಎಲ್. ರಾಹುಲ್ಗೆ ಸ್ನಾಯು ಸೆಳೆತ ಸಾಕಷ್ಟು ತೊಂದರೆ ನೀಡುತ್ತಿರುವುದು ಸ್ಪಷ್ಟವಾಗಿತ್ತು. ಇದಾದ ಬಳಿಕ ಎರಡನೇ ಸೆಷನ್ ಮುಗಿದಿದ್ದರಿಂದ ಡಗೌಟ್ಗೆ ತೆರಳಿದ ರಾಹುಲ್ಗೆ ತಂಡದ ಫಿಸಿಯೋ ಡ್ರೆಸ್ಸಿಂಗ್ ಕೋಣೆಯಲ್ಲಿ ಚಿಕಿತ್ಸೆ ನೀಡಿದರು. ಹೀಗಾಗಿ ಮೂರನೇ ಸೆಷನ್ ಆರಂಭಿಸುವುದಕ್ಕೆ ರಾಹುಲ್ ಸ್ವಲ್ಪ ತಡವಾಗಿ ಕ್ರೀಸ್‌ಗೆ ಬಂದರು. ಆದರೆ ರಾಹುಲ್ಗೆ ಮೂರನೇ ಸೆಷನ್ನಲ್ಲಿ ಒಂದೇ ಒಂದು ಎಸೆತವನ್ನು ಎದುರಿಸಲು ಸಾಧ್ಯವಾಗಲಿಲ್ಲ.
ನಡೆಯುವುದು ಕಷ್ಟಕರವಾಯಿತು
ಮೊದಲಿಗೆ ತನ್ನ ಬಲಗೈ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ರಾಹುಲ್ ತನಗಾಗುತ್ತಿರುವ ನೋವನ್ನು ಅಂಪೈರ್ ಬಳಿ ಹೇಳಿಕೊಂಡರು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಆಗಮನಿಸಿ ರಾಹುಲ್ಗೆ ಚಿಕಿತ್ಸೆ ನೀಡಲು ಶುರು ಮಾಡಿದರು. ಬಲಗೈ ಜೊತೆಗೆ ರಾಹುಲ್ಗೆ ತಮ್ಮ ಎಡಗೈ ಹಾಗೂ ಎಡಗಾಲಿನಲ್ಲೂ ಸ್ನಾಯು ಸೆಳೆತದ ಸಮಸ್ಯೆ ಕಾಡಲಾರಂಭಿಸಿತು. ಫಿಸಿಯೋ ಚಿಕಿತ್ಸೆ ಮುಂದುವರೆಸಿದರಾದರೂ ರಾಹುಲ್ಗೆ ನೋವು ಕಡಿಮೆಯಾಗಲಿಲ್ಲ. ಇದರಿಂದಾಗಿ ರಾಹುಲ್ಗೆ ನಡೆಯುವುದು ಕಷ್ಟಕರವಾಯಿತು.
IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್ ಮುಕ್ತಾಯ
ರಾಹುಲ್ ಮತ್ತೆ ಬ್ಯಾಟಿಂಗ್ಗೆ ಬರಬಹುದು
ಕೊನೆಗೆ ತಮ್ಮ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಹುಲ್, ಬ್ಯಾಟಿಂಗ್ ಮುಂದುವರಿಸದಿರಲು ನಿರ್ಧರಿಸಿ, ಫಿಸಿಯೋ ಸಹಾಯದಿಂದ ಕುಂಟುತ್ತಾ ಪೆವಿಲಿಯನ್‌ಗೆ ಮರಳಿದರು. ರಾಹುಲ್ 77 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಆದಾಗ್ಯೂ ರಾಹುಲ್ ಡ್ರೆಸ್ಸಿಂಗ್ ಕೋಣೆಗೆ ನಡೆಯುವಾಗ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ ಅವರು ಮೆಟ್ಟಿಲುಗಳನ್ನು ಹತ್ತುವುದಕ್ಕೂ ಬೇರಯವರ ಸಹಾಯ ಪಡೆಯಬೇಕಾಯಿತು. ಇದೀಗ ಗಾಯದಿಂದ ನಿವೃತ್ತಗೊಂಡಿರುವ ರಾಹುಲ್ ಮತ್ತೆ ಬ್ಯಾಟಿಂಗ್ ಮಾಡುವ ಅವಕಾಶ ಹೊಂದಿದ್ದಾರೆ. ತಂಡಕ್ಕೆ ಅವರ ಅವಶ್ಯಕತೆ ಇದ್ದರೆ ರಾಹುಲ್ ಮತ್ತೆ ಬ್ಯಾಟಿಂಗ್ಗೆ ಬರಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Sat, 15 August 26




