
ಭಾರತದಲ್ಲಿ ಹುಸಿ ಬಾಂಬ್ ಬೆದರಿಕೆಗಳಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಲ್ಲಿರುತ್ತವೆ. ಈ ಮೂಲಕ ಸಾರ್ವಜನಿಕರನ್ನು ಭಯ ಭೀತರನ್ನಾಗಿಸುವುದು ಕಿಡಿಗೇಡಿಗಳ ಹುನ್ನಾರವಾಗಿರುತ್ತದೆ. ಇದೀಗ ಅಂತಹದ್ದೇ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್, ಇಮೇಲ್ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಇಡೀ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಾಗ ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್ 19 ತಂಡಗಳ ನಡುವೆ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಆದಾಗ್ಯೂ ಯಾವುದೇ ಅಡೆತಡೆಗಳಿಲ್ಲದೆ ಈ ಪಂದ್ಯ ಬಾಂಬ್ ಬೆದರಿಕೆಯ ಇಮೇಲ್ ಬಂದ 15 ನಿಮಿಷದೊಳಗೆ ಸುಖಾಂತ್ಯಗೊಂಡಿತು. ಈ ಪಂದ್ಯವನ್ನು ಭಾರತ ಯುವ ಪಡೆ 10 ವಿಕೆಟ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಬಾಂಬ್ ಬೆದರಿಕೆಯ ಇಮೇಲ್ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮಾತ್ರವಲ್ಲದೆ ಅಹಮದಾಬಾದ್ ಹೈಕೋರ್ಟ್ ಮತ್ತು ಶಾಲೆಗಳಿಗೂ ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್, ‘ಇಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ಕೂಡಲೇ ಪೊಲೀಸ್ ಸೈಬರ್ ಸೆಲ್ ಕ್ರೀಡಾಂಗಣಕ್ಕೆ ಬಂದು ತಪಾಸಣೆ ನಡೆಸಿತು. ಅಷ್ಟಕ್ಕೂ ಈ ರೀತಿಯ ಬಾಂಬ್ ಬೆದರಿಕೆಗಳು ಇದೇ ಮೊದಲಲ್ಲ. 2023 ರ ವಿಶ್ವಕಪ್ ಮತ್ತು ಐಪಿಎಲ್ ಸೇರಿದಂತೆ ಹಲವಾರು ಬಾರಿ ಬಂದಿವೆ. ಹೀಗಾಗಿ ನಾವು ಪಂದ್ಯಕ್ಕೆ ಅಡಚಣೆಯಾಗದಂತೆ ಎರಡೂ ತಂಡಗಳಿಗೆ ಈ ಬೆದರಿಕೆ ಬಗ್ಗೆ ಬಹಳ ತಡವಾಗಿ ತಿಳಿಸಲಾಯಿತು. ಇದರಿಂದಾಗಿ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳು ಮಧ್ಯಾಹ್ನ 1 ಗಂಟೆಗೆ ತಮ್ಮ ಹೋಟೆಲ್‌ಗಳಿಗೆ ತೆರಳಿದವು’ ಎಂದಿದೆ.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಪಡೆಯಿಂದ ಭೀಕರ ಬಾಂಬ್ ದಾಳಿ: ಮಹಿಳೆಯರು, ಮಕ್ಕಳು ಸೇರಿ 9 ನಾಗರಿಕರು ಸಾವು
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ಅಂಡರ್-19 ತಂಡವು, ಆಸ್ಟ್ರೇಲಿಯಾ ಅಂಡರ್-19 ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 315 ರನ್ ಕಲೆಹಾಕಿ 141 ರನ್‌ಗಳ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಆಸ್ಟ್ರೇಲಿಯಾ ತಂಡ ಕೇವಲ 151 ರನ್‌ಗಳಿಸಲಷ್ಟೇ ಶಕ್ತವಾಗಿ ಭಾರತ ಅಂಡರ್-19 ತಂಡಕ್ಕೆ 11 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಆತಿಥೇಯ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಪಂದ್ಯವನ್ನು ಗೆದ್ದುಕೊಂಡಿತು. ಭಾರತದ ಪರ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದರು.
Published On - 5:56 pm, Wed, 7 October 26