AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಪೈರ್ ಎಡವಟ್ಟು: ತಿಲಕ್ ವರ್ಮಾ ಮತ್ತು ಪಾಕ್ ಆಟಗಾರರ ನಡುವೆ ವಾಗ್ವಾದ!

ಒಂದೆಡೆ ಏಕಾಂಗಿಯಾಗಿ ಹೋರಾಡಿ ಶತಕ ಸಿಡಿಸಿದ ನಾಯಕ ತಿಲಕ್ ವರ್ಮಾ ಅವರ ಕೆಚ್ಚೆದೆಯ ಬ್ಯಾಟಿಂಗ್, ಇನ್ನೊಂದೆಡೆ ಪಾಕ್ ಆಟಗಾರರ ಕೆಂಗಣ್ಣಿಗೆ ಗುರಿಯಾದ ಅಂಪೈರ್ ತೀರ್ಪು! ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಇಂಡೋ-ಪಾಕ್ ಕದನವು ಕೊನೆಯ ಓವರ್‌ವರೆಗೂ ರೋಚಕತೆ ಮತ್ತು ಹೈಡ್ರಾಮಾದಿಂದ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಅಂಪೈರ್ ಎಡವಟ್ಟು: ತಿಲಕ್ ವರ್ಮಾ ಮತ್ತು ಪಾಕ್ ಆಟಗಾರರ ನಡುವೆ ವಾಗ್ವಾದ!
Ind Vs Pak Image Credit source: Sonyliv.com
ಝಾಹಿರ್ ಯೂಸುಫ್
|

Updated on:Nov 23, 2026 | 12:37 PM

Share

ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮೈದಾನದಲ್ಲಿ ಮುಖಾಮುಖಿಯಾದರೆ ಅಲ್ಲಿ ಕೇವಲ ರನ್‌ಗಳ ಮಳೆ ಮಾತ್ರವಲ್ಲ, ಕಿಚ್ಚು ಹಚ್ಚುವ ಮಾತಿನ ಚಕಮಕಿಯೂ ಗ್ಯಾರಂಟಿ! ದೋಹಾದಲ್ಲಿ ನಡೆದ ಎಸಿಸಿ ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ‘ಭಾರತ ಎ’ ಮತ್ತು ‘ಪಾಕಿಸ್ತಾನ್ ಎ’ ನಡುವಿನ ಹೈ-ವೋಲ್ಟೇಜ್ ಕದನ ಇದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಅಂಪೈರ್ ಮಾಡಿದ ಒಂದು ಸಣ್ಣ ಎಡವಟ್ಟು, ಭಾರತದ ನಾಯಕ ತಿಲಕ್ ವರ್ಮಾ ಮತ್ತು ಪಾಕ್ ಆಟಗಾರರ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು.

ಅಷ್ಟಕ್ಕೂ ನಡೆದಿದ್ದೇನು?

ಭಾರತ ಎ ತಂಡದ ಇನಿಂಗ್ಸ್​ ವೇಳೆ ಈ ಹೈಡ್ರಾಮಾ ನಡೆಯಿತು. ಪಾಕಿಸ್ತಾನ್ ಎ ತಂಡದ ವೇಗಿ ಅಲಿ ರಾಝ ಓವರ್‌ನ ಮೊದಲ ಎಸೆತವನ್ನು ‘ಅರೌಂಡ್ ದಿ ವಿಕೆಟ್’ ಬಂದು ಎಸೆದರು. ಆದರೆ, ಅದೇ ಬದಿಯಲ್ಲಿ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ನಿಂತಿದ್ದರು.

ಬೌಲರ್ ಚೆಂಡೆಸೆಯುವ ಮುನ್ನ ನಾನ್-ಸ್ಟ್ರೈಕರ್ ನಿಂತಿದ್ದ ಜಾಗವನ್ನು ಗಮನಿಸದ ಅಂಪೈರ್, ಅಲಿ ರಾಝ ಬೌಲಿಂಗ್ ಮಾಡಲು ಅವಕಾಶ ನೀಡಿದರು. ಸ್ಟ್ರೈಕ್‌ನಲ್ಲಿದ್ದ ಶಹಬಾಝ್ ಅಹ್ಮದ್ ಆ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದರೆ, ಚೆಂಡು ಎಸೆದ ಬಳಿಕ ತಡವಾಗಿ ಎಚ್ಚೆತ್ತುಕೊಂಡ ಅಂಪೈರ್ ಅದನ್ನು ‘ಡೆಡ್ ಬಾಲ್’  ಎಂದು ಘೋಷಿಸಿದರು.

ಮೈದಾನದಲ್ಲಿ ಭುಗಿಲೆದ್ದ ಆಕ್ರೋಶ:

ನಿರ್ಣಾಯಕ ಹಂತದಲ್ಲಿ ತಮಗೆ ಸಿಗಬೇಕಿದ್ದ ಒಂದು ಉತ್ತಮ ‘ಡಾಟ್ ಬಾಲ್’ ಕೈತಪ್ಪಿದ್ದಕ್ಕೆ ಪಾಕಿಸ್ತಾನ್ ಎ ತಂಡದ ನಾಯಕ ಅಬ್ದುಲ್ ಸಮದ್ ಮತ್ತು ವೇಗಿ ಅಹ್ಮದ್ ದಾನಿಯಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಪಾಕ್ ಆಟಗಾರರು ಅಂಪೈರ್ ಸುತ್ತುವರಿದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಪಾಕಿಸ್ತಾನ ಆಟಗಾರರು ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ತಿಲಕ್ ವರ್ಮಾ ಅವರ ಕಡೆಗೆ ತಿರುಗಿ ಆಕ್ರೋಶ ಹೊರಹಾಕಲು ಮುಂದಾದರು. ಇದಕ್ಕೆ ಜಗ್ಗದ ನಾಯಕ ತಿಲಕ್ ವರ್ಮಾ, ಪಾಕ್ ನಾಯಕ ಅಬ್ದುಲ್ ಸಮದ್ ಬಳಿ ತೆರಳಿ ತಮ್ಮ ವಾದವನ್ನು ಮಂಡಿಸಿದರು. ಇಬ್ಬರು ನಾಯಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಮೀರುವ ಮುನ್ನ ಮಧ್ಯಪ್ರವೇಶಿಸಿದ ಅಂಪೈರ್‌ಗಳು ಆಟಗಾರರನ್ನು ಸಮಾಧಾನಪಡಿಸಿ, ತಮ್ಮ ‘ಡೆಡ್ ಬಾಲ್’ ನಿರ್ಧಾರವನ್ನೇ ಎತ್ತಿಹಿಡಿದರು. ಇದೀಗ ತಿಲಕ್ ವರ್ಮಾ ಹಾಗೂ ಪಾಕ್ ಆಟಗಾರರ ನಡುವಣ ವಾಕ್ಸಮರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

MCC ನಿಯಮ:

ಕ್ರಿಕೆಟ್‌ ನಿಯಮಾವಳಿಯಲ್ಲಿ ನಾನ್-ಸ್ಟ್ರೈಕರ್ ಬ್ಯಾಟ್ಸ್‌ಮನ್ ಪಿಚ್‌ನ ಯಾವ ಬದಿಯಲ್ಲಿ ನಿಲ್ಲಬೇಕು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಕಾನೂನು ಇಲ್ಲ. ಬ್ಯಾಟ್ಸ್‌ಮನ್ ಬೌಲರ್ ಬರುವ ಬದಿಯಲ್ಲೇ ನಿಲ್ಲುವುದು ನಿಯಮಬಾಹಿರವಲ್ಲ.

ನಾನ್-ಸ್ಟ್ರೈಕರ್ ತನ್ನ ಕ್ರೀಸ್ ಒಳಗೆ ಮತ್ತು ಪಿಚ್‌ನ ಅಪಾಯಕಾರಿ ವಲಯಕ್ಕೆ ಹಾನಿಯಾಗದಂತೆ ಪಿಚ್‌ನ ಎಡ ಅಥವಾ ಬಲ ಬದಿಯಲ್ಲಿ ನಿಲ್ಲಲು ಸ್ವತಂತ್ರರಾಗಿರುತ್ತಾರೆ.

ಆದರೆ ಬೌಲರ್ ತನ್ನ ಬೌಲಿಂಗ್ ಬದಿಯನ್ನು ಬದಲಾಯಿಸುವಾಗ ಮೊದಲೇ ಅಂಪೈರ್‌ಗೆ ತಿಳಿಸಬೇಕು. ಅಂಪೈರ್ ಅದನ್ನು ಸ್ಟ್ರೈಕರ್‌ಗೆ ತಿಳಿಸುತ್ತಾರೆ.

ನಾನ್-ಸ್ಟ್ರೈಕರ್ ಅದೇ ಬದಿಯಲ್ಲಿ ನಿಂತಾಗ ಬೌಲರ್ ಓಡಿಬರುವ ದಾರಿಗೆ ಅಡ್ಡಿಯಾದರೆ, ಬೌಲರ್‌ಗೆ ಡಿಕ್ಕಿ ಹೊಡೆಯುವ ಅಪಾಯವಿದ್ದರೆ, ಅಥವಾ ಅಂಪೈರ್‌ಗೆ ನೋ-ಬಾಲ್ ಗಮನಿಸಲು ಅಡ್ಡಿಯಾದರೆ ಅಂಪೈರ್ ಆ ಎಸೆತವನ್ನು ‘ಡೆಡ್ ಬಾಲ್’ ಎಂದು ಘೋಷಿಸುತ್ತಾರೆ.

ಭಾರತ ಮತ್ತು ಪಾಕ್ ನಡುವಣ ಪಂದ್ಯದಲ್ಲಿ ಅಲಿ ರಾಝ ಬೌಲಿಂಗ್ ಬದಿ ಬದಲಾಯಿಸಿ ಬಂದಾಗ ತಿಲಕ್ ವರ್ಮಾ ಅದೇ ಬದಿಯಲ್ಲಿ ನಿಂತಿದ್ದರು. ಆದರೆ ಈ ಬಗ್ಗೆ ಅಂಪೈರ್ ಯಾವುದೇ ಸೂಚನೆ ನೀಡದೇ ಚೆಂಡನ್ನು ಡೆಡ್ ಬಾಲ್ ಎಂದು ಘೋಷಿಸಿದ್ದು ಪಾಕ್ ಆಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಪಂದ್ಯದ ಫಲಿತಾಂಶ:

ಮೈದಾನದಲ್ಲಿನ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ಮತ್ತು ನಾಯಕ ತಿಲಕ್ ವರ್ಮಾ ಅವರ ಏಕಾಂಗಿ ಹೋರಾಟದ ಶತಕದ ಹೊರತಾಗಿಯೂ, ಭಾರತ ಎ ತಂಡವು ಪಾಕಿಸ್ತಾನ್ ಎ ವಿರುದ್ಧ 48 ರನ್‌ಗಳ ಸೋಲು ಕಂಡಿತು.

  • ಪಾಕಿಸ್ತಾನ ಎ: 313/10 (49.2 ಓವರ್) – ಫರ್ಹಾನ್ ಯೂಸುಫ್, ಮಾಝ್ ಸದಾಕತ್ ಮತ್ತು ಹಸನ್ ನವಾಝ್ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು.
  • ಭಾರತ ಎ: 265/10 (49.1 ಓವರ್) – ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (70 ರನ್, 42 ಎಸೆತ) ಉತ್ತಮ ಆರಂಭ ನೀಡಿದರೂ, ಮಧ್ಯಮ ಕ್ರಮಾಂಕದ ಕುಸಿತದಿಂದ ಭಾರತ 129 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ನಂತರ ತಿಲಕ್ ವರ್ಮಾ (100 ರನ್, 149 ಎಸೆತ) ಮತ್ತು ಶಹಬಾಝ್ ಅಹ್ಮದ್ 7ನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟವಾಡಿ ಗೆಲುವಿಗಾಗಿ ಹೋರಾಡಿದರಾದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಶಹಬಾಝ್ ನಿಂತಿದ್ರೆ, ನಾ ಮ್ಯಾಚ್ ಗೆಲ್ಲಿಸುತ್ತಿದ್ದೆ: ತಿಲಕ್ ವರ್ಮಾ ಅಚ್ಚರಿಯ ಹೇಳಿಕೆ

ಒಟ್ಟಿನಲ್ಲಿ, ದೋಹಾದಲ್ಲಿ ನಡೆದ ಈ ಹೈ-ವೋಲ್ಟೇಜ್ ಕದನವು ಕೇವಲ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗದೆ, ಅಂಪೈರ್‌ಗಳ ತೀರ್ಪು ಮತ್ತು ಮೈದಾನದ ಶಿಸ್ತಿನ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ತಿಲಕ್ ವರ್ಮಾ ಅವರ ಏಕಾಂಗಿ ಶತಕದ ಹೋರಾಟ ವ್ಯರ್ಥವಾದರೂ, ಮುಂದಿನ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿ ಜಯ ಸಾಧಿಸಿ ಭಾರತ ಎ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On - 12:33 pm, Mon, 23 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More