ಡಾಲರ್ ಎದುರು ತಿರುಗಿ ನಿಂತ ರುಪಾಯಿ; ಎಂಟು ತಿಂಗಳ ಗರಿಷ್ಠ ಮೌಲ್ಯ ಗಿಟ್ಟಿಸಿದ ಭಾರತೀಯ ಕರೆನ್ಸಿ
ನವೆಂಬರ್ 23, ಸೋಮವಾರದಂದು ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯ 19 ಪೈಸೆ ಹೆಚ್ಚಳಗೊಂಡು 92.43ರ ಮಟ್ಟ ಮುಟ್ಟಿದೆ. ಈ ವರ್ಷ ಹಲವು ಬಾರಿ ರುಪಾಯಿ ಮೌಲ್ಯ 97ರ ಮಟ್ಟ ದಾಟುವ ಸಮೀಪಕ್ಕೆ ಹೋಗಿದ್ದಿದೆ. ಈಗ ಕೆಲ ದಿನಗಳಿಂದ ಚೇತರಿಸಿಕೊಂಡಿದೆ. ಆರ್ಬಿಐನ ರಕ್ಷಣಾತ್ಮಕ ಕ್ರಮ, ಎಫ್ಐಐಗಳ ಹೂಡಿಕೆ ಒಳಹರಿವು ಮೊದಲಾದ ಸಂಗತಿಗಳು ರುಪಾಯಿಗೆ ಅನುಕೂಲವಾಗಿವೆ.

ನವದೆಹಲಿ, ನವೆಂಬರ್ 23: ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಸೋಮವಾರ 19 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿದೆ. ಕಳೆದ ವಾರಾಂತ್ಯದಲ್ಲಿ ಡಾಲರ್ಗೆ 93ರ ಮಟ್ಟಕ್ಕಿಂತ ಕಡಿಮೆಗೆ ವೃದ್ಧಿ ಕಂಡಿದ್ದ ರುಪಾಯಿ ಇದೀಗ ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇವತ್ತಿನ ವಹಿವಾಟಿನಲ್ಲಿ ಒಂದು ಡಾಲರ್ಗೆ 92.43 ರುಪಾಯಿ ಮೌಲ್ಯ ಇದೆ.
ಡಾಲರ್ ಎದುರು ರುಪಾಯಿ ಮೌಲ್ಯ 97ರ ಮಟ್ಟಕ್ಕೆ ಕುಸಿಯುವ ಹಂತದಿಂದ ಈಗ ಭಾರತೀಯ ಕರೆನ್ಸಿ ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಂಡಿದೆ. ಮೇ, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ರುಪಾಯಿ ಮೌಲ್ಯ 97ರ ಮಟ್ಟಕ್ಕೆ ಸಮೀಪಕ್ಕೆ ಕುಸಿದಿತ್ತು. ಈಗ ನಾಲ್ಕು ರೂಪಾಯಿಗಳಷ್ಟು ಮೌಲ್ಯ ವೃದ್ಧಿ ಕಂಡು, ಗಣನೀಯ ಚೇತರಿಕೆ ಹೊಂದಿದೆ.
ಇದನ್ನೂ ಓದಿ: ಮೋದಿಯ ಚಿನ್ನದಂಥ ಆಶಯದಿಂದ 7 ತಿಂಗಳಲ್ಲಿ ಭಾರತಕ್ಕಾಯ್ತು ದೊಡ್ಡ ಅನುಕೂಲ; ಬಂಗಾರದ ಬೆಲೆ ಇಳಿಯಲು ಪ್ರಮುಖ ಕಾರಣಗಳಿವು
ರುಪಾಯಿ ಮೌಲ್ಯವನ್ನು ಹೆಚ್ಚಿಸುತ್ತಿದೆ ಎಫ್ಐಐಗಳ ಬಂಡವಾಳ ಒಳಹರಿವು
ಭಾರತದ ಷೇರುಬಜಾರು ಸೇರಿದಂತೆ ಬಂಡವಾಳ ಮಾರುಕಟ್ಟೆಗೆ ವಿದೇಶೀ ಹೂಡಿಕೆಗಳ ಹರಿವು ಕಳೆದ ಕೆಲ ವಾರಗಳಿಂದ ಹೆಚ್ಚಾಗಿ ಬರುತ್ತಿದೆ. ಇದು ಡಾಲರ್ ಕರೆನ್ಸಿ ಹರಿವನ್ನು ಹೆಚ್ಚಿಸಿದೆ. ಹೀಗಾಗಿ, ಡಾಲರ್ ಎದುರು ರುಪಾಯಿ ಮೌಲ್ಯ ವೃದ್ಧಿಸಲು ಪ್ರಮುಖ ಕಾರಣವಾಗಿದೆ.
ಎಫ್ಐಐಗಳು ಭಾರತದತ್ತ ದಾಪುಗಾಲಾಗಲು ಏನು ಕಾರಣ?
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪರೀತವಾಗಿದ್ದ ಹೂಡಿಕೆಗಳಿಗೆ ನಿರೀಕ್ಷಿತ ಲಾಭಗಳು ಸದ್ಯದ ಮಟ್ಟಿಗೆ ಸಿಗುತ್ತಿಲ್ಲ. ಎಐ ಬಬಲ್ ಒಡೆದಿದೆ ಎಂದೇ ಹೇಳಲಾಗುತ್ತಿದೆ. ಟೆಕ್ನಾಲಜಿ ಕ್ಷೇತ್ರದ ಷೇರುಗಳಿಂದ ಹೂಡಿಕೆಗಳು ನಿರ್ಗಮನಿಸುತ್ತಿವೆ. ಹೀಗಾಗಿ, ತಂತ್ರಜ್ಞಾನ ಕಂಪನಿಗಳು ಹೆಚ್ಚಾಗಿ ಲಿಸ್ಟ್ ಆಗಿರುವ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ ಷೇರು ಮಾರುಕಟ್ಟೆಗಳು ಕುಸಿತ ಕಾಣುತ್ತಿರುವುದು.
ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ
ಇಲ್ಲಿಂದ ಹೂಡಿಕೆಗಳು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳತ್ತ ಧಾವಿಸಿ ಬರುತ್ತಿವೆ ಎಂಬುದು ಸದ್ಯಕ್ಕೆ ಇರುವ ಚಿತ್ರಣ.
ಆರ್ಬಿಐ ಕೈಗೊಂಡ ರಕ್ಷಣಾತ್ಮಕ ಕ್ರಮ
ರುಪಾಯಿ ಎದುರು ಡಾಲರ್ ಮೌಲ್ಯ ವಿಪರೀತ ಹೋಗುತ್ತಿದೆ ಎಂದಾಗ ಆರ್ಬಿಐ ಮಧ್ಯಪ್ರವೇಶಿಸಿ ಭಾರತೀಯ ಕರೆನ್ಸಿಗೆ ನೆರವು ಕೊಟ್ಟಿದ್ದಿದೆ. ಹೀಗಾಗಿ, ಆರ್ಬಿಐ ರಕ್ಷಣಾತ್ಮಕ ಕ್ರಮ ಮತ್ತು ಎಫ್ಐಐಗಳ ಒಳಹರಿವು ಇವೆರಡೂ ಸೇರಿ ಡಾಲರ್ ಎದುರು ರುಪಾಯಿ ನಿರೀಕ್ಷೆಮೀರಿ ಮೌಲ್ಯವೃದ್ಧಿಸುವಂತೆ ಮಾಡಿರುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




