RCB ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ನಿಕೋಲಸ್ ಪೂರನ್

RCB vs LSG: ಐಪಿಎಲ್​ನ 23ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 146 ರನ್​ ಗಳಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 15.1 ಓವರ್​ಗಳಲ್ಲಿ ಪಂದ್ಯ ಮುಗಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

RCB ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ನಿಕೋಲಸ್ ಪೂರನ್
Nicholas Pooran

Updated on: Apr 16, 2026 | 8:52 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 23ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 146 ರನ್​ಗಳು ಮಾತ್ರ. 147 ರನ್​ಗಳ ಸುಲಭ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 15.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇನ್ನು ಈ ಪಂದ್ಯದ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸಿದ್ದರು. ಇದಾಗ್ಯೂ ಎಲ್​ಎಸ್​ಜಿ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹಂಗಾಮಿ ನಾಯಕ ನಿಕೋಲಸ್ ಪೂರನ್, ಈ ಸೀಸನ್ ನಮಗೆ ನಿಜಕ್ಕೂ ಕಠಿಣವಾಗಿದೆ. ನಾವು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲವಾಗುತ್ತಿದ್ದೇವೆ.

ಆರ್​ಸಿಬಿ ವಿರುದ್ಧ  ಕನಿಷ್ಠ 175 ರನ್ ಗಳಿಸಿದ್ದರೆ ನಾವು ಪೈಪೋಟಿ ನೀಡಬಹುದಿತ್ತು. ಆದರೆ ಬ್ಯಾಟಿಂಗ್ ಕ್ರಮಾಂಕದ ವೈಫಲ್ಯಕ್ಕೆ ಇಂದು ನಾವು ದೊಡ್ಡ ಬೆಲೆ ತೆತ್ತಿದ್ದೇವೆ. ಅಂದರೆ ಸೋಲಿಗೆ ನಮ್ಮ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ನಿಕೋಲಸ್ ಪೂರನ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಹುಡುಗರು ಮೈದಾನದಲ್ಲಿ ತುಂಬಾ ಶ್ರಮಪಡುತ್ತಿದ್ದಾರೆ, ಅದಕ್ಕೆ ಅವರಿಗೆ ಕ್ರೆಡಿಟ್ ಸಲ್ಲಬೇಕು. ಆದರೆ ಕ್ರೀಸ್‌ನಲ್ಲಿ ಜವಾಬ್ದಾರಿಯುತ ಆಟದ ಅವಶ್ಯಕತೆಯಿದೆ. ತಾಳ್ಮೆಯಿಂದಿದ್ದು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ ಎಂದು ಇದೇ ವೇಳೆ ಪೂರನ್ ಅಭಿಪ್ರಾಯಪಟ್ಟರು.

ನಿಕೋಲಸ್ ಪೂರನ್ ಅವರ ವೈಯಕ್ತಿಕ ಬ್ಯಾಟಿಂಗ್ ಕೂಡ ಈ ಬಾರಿ ದೊಡ್ಡ ಮಟ್ಟದ ಸದ್ದು ಮಾಡಿಲ್ಲ. ಈ ಬಗ್ಗೆ ಮಾತನಾಡಿದ ಅವರು, ನಾನು ಚೆಂಡನ್ನು ಚೆನ್ನಾಗಿ ಬಾರಿಸುತ್ತಿದ್ದೇನೆ, ಬ್ಯಾಟಿಂಗ್ ಫೀಲ್ ಚೆನ್ನಾಗಿದೆ. ಆದರೆ ದುರದೃಷ್ಟವಶಾತ್ ಅದು ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತಿಲ್ಲ. ನಾನು ಈ ಹಿಂದೆಯೂ ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ, ಇದರಿಂದ ಹೇಗೆ ಹೊರಬರಬೇಕೆಂದು ನನಗೆ ತಿಳಿದಿದೆ. ಶೀಘ್ರದಲ್ಲೇ ಲಯಕ್ಕೆ ಮರಳುವ ನಂಬಿಕೆಯಿದೆ ಎಂದರು.

ಇದನ್ನೂ ಓದಿ: ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?

ಒಟ್ಟಾರೆಯಾಗಿ, ಲಕ್ನೋ ತಂಡವು ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಪುಟಿದೇಳಬೇಕಾದರೆ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅದರಂತೆ ಏಪ್ರಿಲ್ 19 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಲಯಕ್ಕೆ ಮರಳಲಿದೆಯಾ ಕಾದು ನೋಡಬೇಕಿದೆ.

 

Follow Us