ನಮ್ಮ ಹಿಜಾಬ್, ಗಡ್ಡ, ಕ್ರಿಕೆಟ್‌ನಲ್ಲೂ ನಿಮಗೆ ಸಮಸ್ಯೆ ಇದೆ, ಪಾಕ್ ವಿರುದ್ಧ ಆಡಿಸಬೇಡಿ; ಓವೈಸಿ ಸ್ಫೋಟಕ ಹೇಳಿಕೆ
Asaduddin Owaisi: ಈಗ ನಾಳಿನ ಪಂದ್ಯವನ್ನು ಯಾರು ಗೆಲ್ಲುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ಭಾರತ ಗೆಲ್ಲಬೇಕು, ಶಮಿ ಮತ್ತು ಮೊಹಮ್ಮದ್ ಸಿರಾಜ್ರಂತಹ ನಮ್ಮ ಮಕ್ಕಳು ಪಾಕಿಸ್ತಾನವನ್ನು ಹತ್ತಿಕ್ಕಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ ಎಂದರು.
ಟಿ20 ವಿಶ್ವಕಪ್ (T20 World Cup) ಸೂಪರ್ 12 ಸುತ್ತಿನಲ್ಲಿ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮೆಲ್ಬೋರ್ನ್‌ನಲ್ಲಿ ಮುಖಾಮುಖಿಯಾಗಲಿದ್ದು, ಈ ಮೂಲಕ ಎರಡು ತಂಡಗಳು ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿವೆ. ಏತನ್ಮಧ್ಯೆ, ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಹೇಳಿಕೆಯೊಂದು ಹೊಸ ವಿವಾದವನ್ನು ಸೃಷ್ಟಿಸಿದೆ. ಕೆಲವು ದಿನಗಳ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾವನ್ನು ಕಳುಹಿಸುವುದಿಲ್ಲ ಎಂದಿದ್ದರು. ಜೈ ಶಾ ಅವರ ಈ ಹೇಳಿಕೆಯ ಬಳಿಕ ಉಭಯ ದೇಶಗಳ ಖ್ಯಾತನಾಮರು ತಮ್ಮ ಅಭಿಪ್ರಾಯಗಳನ್ನು ಈ ಬಗ್ಗೆ ವ್ಯಕ್ತಪಡಿಸಿದ್ದರು. ಅದರಲ್ಲೂ ಪಾಕ್ ತಂಡದ ಹಲವು ಮಾಜಿ ಕ್ರಿಕೆಟಿಗರು, ಪಾಕಿಸ್ತಾನ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕೆಂದಿದ್ದರು. ಈಗ ಆ ಹೇಳಿಕೆಗೆ ಧನಿಗೂಡಿಸಿರುವ ಅಸಾದುದ್ದೀನ್ ಓವೈಸಿ ತಮ್ಮ ಮಾತಿನ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಈ ಹಣ ಭಾರತಕ್ಕಿಂತ ಮುಖ್ಯವೇ?- ಓವೈಸಿ
ಜೈ ಶಾ ಹೇಳಿಕೆ ಬಗ್ಗೆ ಮಾತನಾಡಿರುವ ಅಸಾದುದ್ದೀನ್ ಓವೈಸಿ, ಏಷ್ಯಾಕಪ್‌ಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದ್ದರೆ, ನಾಳೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯದಲ್ಲೂ ಟೀಂ ಇಂಡಿಯಾವನ್ನು ಕಣಕ್ಕಿಳಿಸಬಾರದು ಎಂದಿದ್ದಾರೆ. ಪಕ್ಷದ ಸಭೆಯೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ಗೆ ಟೀಂ ಇಂಡಿಯಾವನ್ನು ಕಳುಹಿಸಲು ನೀವು ಸಿದ್ಧರಿಲ್ಲ ಅಂದಮೇಲೆ, ನಾಳೆ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯವನ್ನು ನೀವು ಏಕೆ ಆಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಟೀಂ ಇಂಡಿಯಾ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಆಡಲು ಹೋಗುವುದಿಲ್ಲ, ಆದರೆ ಆಸ್ಟ್ರೇಲಿಯಾದಲ್ಲಿ ಮಾತ್ರ ಅವರೊಂದಿಗೆ ಪಂದ್ಯವನ್ನು ಆಡುತ್ತದೆ. ಏಕೆಂದರೆ ಟೀಂ ಇಂಡಿಯಾ ಒಂದು ವೇಳೆ ನಾಳಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯದಿದ್ದರೆ ಇವರ ಜೇಬಿಗೆ 2 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ, ಹಾಗಾಗಿ ಆಡಿಸುತ್ತಿದ್ದಾರೆ. ಹಾಗಾದರೆ ಈ ಹಣ ಭಾರತಕ್ಕಿಂತ ಮುಖ್ಯವೇ? ಎಂದು ಹೀಯ್ಯಾಳಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: T20 World Cup 2022: 15 ದಿನ, 12 ತಂಡ, 30 ಪಂದ್ಯ; ಸೂಪರ್ 12 ಸುತ್ತಿನ ವೇಳಾಪಟ್ಟಿ ಹೀಗಿದೆ
“ಈಗ ನಾಳಿನ ಪಂದ್ಯವನ್ನು ಯಾರು ಗೆಲ್ಲುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ಭಾರತ ಗೆಲ್ಲಬೇಕು, ಶಮಿ ಮತ್ತು ಮೊಹಮ್ಮದ್ ಸಿರಾಜ್ರಂತಹ ನಮ್ಮ ಮಕ್ಕಳು ಪಾಕಿಸ್ತಾನವನ್ನು ಹತ್ತಿಕ್ಕಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ ಎಂದರು.
“ಆದರೆ ಈ ಜನ, ಟೀಂ ಇಂಡಿಯಾ ಗೆದ್ದರೆ ಎದೆಯುಬ್ಬಿಸುತ್ತಾರೆ. ಒಂದು ವೇಳೆ ಸೋತರೆ, ಈ ಸೋಲಿಗೆ ಯಾರು ಕಾರಣ ಎಂದು ಹುಡುಕಲು ಪ್ರಾರಂಭಿಸುತ್ತಾರೆ ಎಂದಿದ್ದಾರೆ. ಅಲ್ಲದೆ ಪದೇಪದೇ ಮುಸ್ಲಿಂ ಆಟಗಾರರ ಟ್ರೋಲ್ ಆಗುವುದನ್ನು ಸೂಕ್ಷ್ಮವಾಗಿ ಹೇಳಿದ ಓವೈಸಿ, “ನಮ್ಮ ಹಿಜಾಬ್, ಗಡ್ಡ ಮತ್ತು ಕ್ರಿಕೆಟ್‌ನಲ್ಲೂ ನಿಮಗೆ ಸಮಸ್ಯೆ ಇದೆ. ಕ್ರಿಕೆಟ್ ಒಂದು ಆಟವಾಗಿದ್ದು ಇಲ್ಲಿ ಸೋಲು ಮತ್ತು ಗೆಲುವು ಸಹಜ ಎಂದಿದ್ದಾರೆ.
LIVE : Barrister @asadowaisi addresses Jalsa Rahmatul-Lil-Aalameen | Vikarabad | 2022#milad #Mawlid #prophetforall https://t.co/GVAKwlynyM
— AIMIM (@aimim_national) October 21, 2022
ನಾಳೆ ಭಾರತ- ಪಾಕ್ ಪಂದ್ಯ
ನಾಳೆ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರ ಸುಮಾರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. 2021 ರ ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ, ಇತ್ತೀಚಿನ ಏಷ್ಯಾಕಪ್‌ನಲ್ಲಿ ಸೋಲಿನ ಸೇಡು ತೀರಿಸಿಕೊಂಡಿತ್ತು. ಆ ಬಳಿಕ ಪಾಕಿಸ್ತಾನ ಕೂಡ ಸೂಪರ್ 4 ಹಂತದಲ್ಲಿ ಮತ್ತೊಮ್ಮೆ ಭಾ್ರತವನ್ನು ಮಣಿಸುವುದರಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ‘ಮೆನ್ ಇನ್ ಬ್ಲೂ’ ಪಡೆ ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಪಾಕ್ ಪಡೆಗೆ ಮತ್ತೊಂದು ಶಾಕ್ ನೀಡುವ ಕಾತುರದಲ್ಲಿದೆ.
ಹಾಗೆಯೇ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುವುದು ನಾಯಕ ರೋಹಿತ್ ಶರ್ಮಾಗೆ ಹೆಚ್ಚುವರಿ ಸವಾಲಾಗಿದೆ. ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದರೆ, ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಸಾಧ್ಯತೆಗಳು ಸಾಕಷ್ಟು ಹೆಚ್ಚಾಗುತ್ತವೆ. ನಾಳಿನ ಪಂದ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಉತ್ಸುಕರಾಗಿದ್ದು, ಈ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Sat, 22 October 22