T20 World Cup 2026: ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ
T20 World Cup 2026: 2026ರ ಟಿ20 ವಿಶ್ವಕಪ್‌ಗೂ ಮುನ್ನವೇ ವಿವಾದಗಳು ಹೆಚ್ಚುತ್ತಿವೆ. ಭಾರತ-ಬಾಂಗ್ಲಾದೇಶ ವಿವಾದದ ಬೆನ್ನಲ್ಲೇ, ಪಾಕಿಸ್ತಾನ ತನ್ನ ತಂಡ 2026ರ ಟಿ20 ವಿಶ್ವಕಪ್‌ನಲ್ಲಿ ಆಡುವುದನ್ನು ದೃಢಪಡಿಸಿದೆ. ಆದರೆ ಫೆಬ್ರವರಿ 15ರಂದು ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ರಾಜಕೀಯ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದ್ದು, ಇದು ಐಸಿಸಿಗೆ ಹೊಸ ತಲೆನೋವಾಗಿದೆ.

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭಕ್ಕೂ ಮುನ್ನವೇ ದಿನಕ್ಕೊಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇಷ್ಟು ದಿನ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ವಿವಾದವನ್ನು ಬಗೆಹರಿಸಲು ಹರಸಾಹಸ ಪಟ್ಟಿದ್ದ ಐಸಿಸಿಗೆ (ICC) ಇದೀಗ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್‌ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಐಸಿಸಿಗೆ ದೊಡ್ಡ ಶಾಕ್ ನೀಡಿದೆ. ತನ್ನ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು (India vs Pakistan) ಆಡುವುದಿಲ್ಲ ಎಂದಿದೆ. ರಾಜಕೀಯ ಮತ್ತು ಇತ್ತೀಚಿನ ಬೆಳವಣಿಗೆಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟಿ20 ವಿಶ್ವಕಪ್ ಆಡಲು ಅನುಮತಿ
ಕೆಲವು ದಿನಗಳ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಮ್ಮ ತಂಡ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವುದು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದಿದ್ದರು. ಆ ಬಳಿಕ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಂಡವನ್ನು ಪ್ರಕಟಿಸಿದ್ದರು. ಆದರೆ ಭಾರತದ ವಿರುದ್ಧದ ಪಂದ್ಯವನ್ನು ಆಡುವುದರ ಬಗ್ಗೆ ಮಾತ್ರ ಏನನ್ನು ಹೇಳಿರಲಿಲ್ಲ. ಆದರೀಗ ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದಿದ್ದು, ಅಲ್ಲಿ ತನ್ನ ಎಲ್ಲಾ ಗ್ರೂಪ್ ಎ ಪಂದ್ಯಗಳನ್ನು ಆಡಲಿದೆ.
ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ
ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನ ಭಾರತದಲ್ಲಿ ಆಡಲು ನಿರಾಕರಿಸಿದ್ದರಿಂದ, ಐಸಿಸಿ ಪಾಕ್ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಅದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೀಗ, ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.
T20 World Cup 2026: ಟಿ20 ವಿಶ್ವಕಪ್ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ
ಐಸಿಸಿ, ಪಿಸಿಬಿ ಎರಡಕ್ಕೂ ನಷ್ಟ
ಈ ನಿರ್ಧಾರದಿಂದಾಗಿ ಪಾಕಿಸ್ತಾನ ಗುಂಪು ಹಂತದಲ್ಲಿ ಎರಡು ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಯಾವುದೇ ತಂಡವು ನಿಗದಿಪಡಿಸಿದ ಪಂದ್ಯವನ್ನು ಆಡಲು ನಿರಾಕರಿಸಿದರೆ, ಎದುರಾಳಿ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ ಟೀಂ ಇಂಡಿಯಾಕ್ಕೆ ಆಡದೆಯೇ ಎರಡು ಅಂಕಗಳು ಸಿಗಲಿದೆ. ಆದರೆ ಉಭಯ ತಂಡಗಳ ಈ ಪಂದ್ಯ ರದ್ದಾಗಿರುವುದರಿಂದ ಐಸಿಸಿಗೆ ಆರ್ಥಿಕ ನಷ್ಟವಾಗುವುದಂತೂ ಖಚಿತ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯವು ವಿಶ್ವಕಪ್‌ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಆದಾಯ ಗಳಿಸುವ ಪಂದ್ಯವಾಗಿದೆ. ಇದೀಗ ಈ ಪಂದ್ಯ ನಡೆಯದಿರುವುದರಿಂದ ಐಸಿಸಿಗೆ ನಷ್ಟವಾಗುವುದು ಮಾತ್ರವಲ್ಲದೆ, ಪಾಕಿಸ್ತಾನ ಕೂಡ ಗಮನಾರ್ಹ ನಷ್ಟವನ್ನು ಎದುರಿಸಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Sun, 1 February 26
