ಕೇವಲ 14 ರನ್: ಪವರ್ ಕಳೆದುಕೊಂಡು ಅತ್ಯಂತ ಕೆಟ್ಟ ದಾಖಲೆ ಬರೆದ ಪಾಕಿಸ್ತಾನ್
New Zealand vs Pakistan, 1st T20I: ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಮೈಕೆಲ್ ಬ್ರೇಸ್ವೆಲ್ ಪಾಕಿಸ್ತಾನ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 18.4 ಓವರ್ಗಳಲ್ಲಿ ಕೇವಲ 91 ರನ್ಗಳಿಸಿ ಆಲೌಟ್ ಆಗಿದೆ. ಅಲ್ಲದೆ ಈ ಪಂದ್ಯದ ಪವರ್ಪ್ಲೇನಲ್ಲಿ ಅತೀ ಕಡಿಮೆ ಸ್ಕೋರ್ಗಳಿಸಿ ಅನಗತ್ಯ ದಾಖಲೆಯನ್ನು ಸಹ ಬರೆದಿದೆ.

ಪವರ್ಪ್ಲೇನಲ್ಲಿ ಪವರ್ ಇಲ್ಲದ ಬ್ಯಾಟಿಂಗ್ ಪ್ರದರ್ಶಿಸಿ ಪಾಕಿಸ್ತಾನ್ ತಂಡವು ಅತ್ಯಂತ ಕೆಟ್ಟ ದಾಖಲೆಯನ್ನು ಬರೆದಿದೆ. ಅದು ಸಹ ಮೊದಲ 6 ಓವರ್ಗಳಲ್ಲಿ ಕೇವಲ 14 ರನ್ಗಳನ್ನು ಮಾತ್ರ ಕಲೆಹಾಕುವ ಮೂಲಕ. ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಬ್ಯಾಟರ್ಗಳು ಪವರ್ಪ್ಲೇನಲ್ಲಿ ರನ್ಗಳಿಸಲು ಪರದಾಡಿದ್ದಾರೆ.
- ಕೈಲ್ ಜೇಮಿಸನ್ ಎಸೆದ ಇನಿಂಗ್ಸ್ನ ಮೊದಲ ಓವರ್ನಲ್ಲಿ ಮೊಹಮ್ಮದ್ ಹ್ಯಾರಿಸ್ (0) ಔಟಾದರು. ಈ ಓವರ್ನಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ.
- ಜೇಕಬ್ ಢಫಿ ಎಸೆದ ದ್ವಿತೀಯ ಓವರ್ನಲ್ಲಿ 2ನೇ ಎಸೆತದಲ್ಲಿ ಹಸನ್ ನವಾಝ್ (0) ಕ್ಯಾಚ್ ನೀಡಿ ಹೊರನಡೆದರು. ಈ ಓವರ್ನಲ್ಲಿ ಪಾಕ್ ಬ್ಯಾಟರ್ಗಳು ಕಲೆಹಾಕಿದ್ದು ಕೇವಲ 1 ರನ್ ಮಾತ್ರ.
- ಕೈಲ್ ಜೇಮಿಸನ್ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಇರ್ಫಾನ್ ಖಾನ್ (1) ಕ್ಯಾಚಿತ್ತರು. ಅಲ್ಲದೆ ಈ ಓವರ್ನಲ್ಲಿ ಗಳಿಸಿದ್ದು 2 ರನ್ ಮಾತ್ರ.
- ಜೇಕಬ್ ಡಫಿ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಸಲ್ಮಾನ್ ಅಲಿ ಅಘಾ ಫೋರ್ ಬಾರಿಸಿದರು. ಈ ಮೂಲಕ ನಾಲ್ಕನೇ ಓವರ್ನಲ್ಲಿ 6 ರನ್ಗಳಿಸುವಲ್ಲಿ ಯಶಸ್ವಿಯಾದರು.
- ಕೈಲ್ ಜೇಮಿಸನ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಶಾದಬ್ ಖಾನ್ (3) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಓವರ್ನಲ್ಲಿ ಮೂಡಿಬಂದಿದ್ದು ಕೇವಲ 2 ರನ್ ಮಾತ್ರ.
- ಝಕಾರಿ ಫೌಲ್ಕ್ಸ್ ಎಸೆದ 6ನೇ ಓವರ್ನಲ್ಲಿ ಪಾಕಿಸ್ತಾನ್ ಬ್ಯಾಟರ್ಗಳು ಕಲೆಹಾಕಿದ್ದು ಕೇವಲ 3 ರನ್ ಮಾತ್ರ.
ಈ ಮೂಲಕ ಪವರ್ಪ್ಲೇನಲ್ಲಿ ಪಾಕಿಸ್ತಾನ್ ತಂಡ 4 ವಿಕೆಟ್ ಕಳೆದುಕೊಂಡು 14 ರನ್ಗಳಿಸಿ ಅತ್ಯಂತ ಹೀನಾಯ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿತು. ಅಂದರೆ ಟಿ20 ಕ್ರಿಕೆಟ್ನಲ್ಲಿ ಪವರ್ಪ್ಲೇನಲ್ಲಿ 2 ಬಾರಿ 15 ಕ್ಕಿಂತ ಕಡಿಮೆ ಮೊತ್ತ ಕಲೆಹಾಕಿದ ತಂಡವೆಂಬ ಕಳಪೆ ದಾಖಲೆಯೊಂದು ಪಾಕ್ ತಂಡದ ಪಾಲಾಗಿದೆ.
ಇದಕ್ಕೂ ಮುನ್ನ 2014ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಪವರ್ಪ್ಲೇನಲ್ಲಿ ಕೇವಲ 13 ರನ್ ಮಾತ್ರ ಕಲೆಹಾಕಿತ್ತು. ಇದು ಟೆಸ್ಟ್ ಆಡುವ ದೇಶವೊಂದು ಟಿ20 ಕ್ರಿಕೆಟ್ನ ಮೊದಲ 6 ಓವರ್ಗಳಲ್ಲಿ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್.
ಇದೀಗ 11 ವರ್ಷಗಳ ಬಳಿಕ ಮತ್ತೊಮ್ಮೆ ಪಾಕಿಸ್ತಾನ್ ತಂಡ ಪವರ್ಪ್ಲೇನಲ್ಲಿ 14 ರನ್ ಮಾತ್ರ ಕಲೆಹಾಕಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಎರಡು ಬಾರಿ 15 ಕ್ಕಿಂತ ಕಡಿಮೆ ಮೊತ್ತ ಕಲೆಹಾಕಿದ ಮೊದಲ ತಂಡವೆಂಬ ಅತ್ಯಂತ ಕೆಟ್ಟ ದಾಖಲೆಯನ್ನು ಪಾಕಿಸ್ತಾನ್ ತಂಡ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್ ಮುಡಿಗೆ 12ನೇ ಟ್ರೋಫಿ
91 ರನ್ಗೆ ಆಲೌಟ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 18.4 ಓವರ್ಗಳಲ್ಲಿ 91 ರನ್ಗಳಿಸಿ ಸರ್ವಪತನ ಕಂಡಿದೆ. ನ್ಯೂಝಿಲೆಂಡ್ ಪರ ಕೈಲ್ ಜೇಮಿಸನ್ 4 ಓವರ್ಗಳಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದರೆ, ಜೇಕಬ್ ಢಫಿ 3.4 ಓವರ್ಗಳಲ್ಲಿ 14 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಇಶ್ ಸೋಧಿ 2 ವಿಕೆಟ್ ಪಡೆದರೆ, ಝಕಾರಿ ಫೌಲ್ಕ್ಸ್ಒಂದು ವಿಕೆಟ್ ಕಬಳಿಸಿದರು.




