ICC Awards: ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಮೂವರು ‘ತಿಂಗಳ ಆಟಗಾರ’ ಪ್ರಶಸ್ತಿಗೆ ಆಯ್ಕೆ
ICC Player Of The Month Award: ಬಾಂಗ್ಲಾದೇಶ್ ತಂಡ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಹೊಸ ಭರವಸೆ ಮೂಡಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ತಂಡದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಸರಣಿಯಲ್ಲಿ ಒಟ್ಟು 15 ವಿಕೆಟ್ ಪಡೆದಿದ್ದಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಡಿಸೆಂಬರ್ ತಿಂಗಳ ‘ಪ್ಲೇಯರ್ ಆಫ್ ದಿ ಮಂತ್’ ಪ್ರಶಸ್ತಿಗೆ ಆಯ್ಕೆಯಾದ ಆಟಗಾರರ ಹೆಸರನ್ನು ಪ್ರಕಟಿಸಿದೆ. ಪಾಕ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು 3-0 ಅಂತರದಲ್ಲಿ ಗೆಲುವಿನತ್ತ ಮುನ್ನಡೆಸಿದ್ದ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಹೆಸರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇವರಲ್ಲದೆ, ನ್ಯೂಝಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಮತ್ತು ಬಾಂಗ್ಲಾದೇಶದ ತೈಜುಲ್ ಇಸ್ಲಾಂ ಕೂಡ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷ ಎಂದರೆ ಡಿಸೆಂಬರ್ ತಿಂಗಳ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವುದೇ ಪ್ಲೇಯರ್ ಕಾಣಿಸಿಕೊಂಡಿಲ್ಲ.
ಕಮಿನ್ಸ್ ಮಿಂಚಿಂಗ್:
ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ 3ನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೆಸ್ಟ್‌ನಲ್ಲಿ 250 ವಿಕೆಟ್‌ಗಳ ಸಾಧನೆ ಮಾಡಿದ್ದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ತೈಜುಲ್ ಹೊಸ ಭರವಸೆ:
ಬಾಂಗ್ಲಾದೇಶ್ ತಂಡ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಹೊಸ ಭರವಸೆ ಮೂಡಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ತಂಡದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಸರಣಿಯಲ್ಲಿ ಒಟ್ಟು 15 ವಿಕೆಟ್ ಪಡೆದಿದ್ದಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡರು.
ಫಿಲಿಪ್ಸ್ ಅಬ್ಬರ:
ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾದ ನ್ಯೂಝಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಬಾಂಗ್ಲಾದೇಶದ ವಿರುದ್ಧ ಆಲ್ರೌಂಡರ್ ಆಟವನ್ನು ಪ್ರದರ್ಶಿಸಿದ್ದರು. ಮೊದಲ ಟೆಸ್ಟ್‌ನಲ್ಲಿ ಸೋಲಿನ ಹೊರತಾಗಿಯೂ, ಐದು ವಿಕೆಟ್ ಮತ್ತು 42 ರನ್‌ಗಳ ಕೊಡುಗೆ ನೀಡಿದ್ದರು. ಎರಡನೇ ಟೆಸ್ಟ್‌ನಲ್ಲಿ 127 ರನ್ಗಳನ್ನು ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಬಾಂಗ್ಲಾದೇಶ್ ವಿರುದ್ಧ ನ್ಯೂಝಿಲೆಂಡ್ ಸರಣಿ ಗೆಲ್ಲುವಲ್ಲಿ ಫಿಲಿಪ್ಸ್ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: IPL 2024: RCB ತಂಡವನ್ನು ನಂಬಿ ಕೆಟ್ಟ ಯುವ ಸ್ಪೋಟಕ ಬ್ಯಾಟರ್..!
ಈ ಅದ್ಭುತ ಪ್ರದರ್ಶನಗಳ ಫಲವಾಗಿ ಇದೀಗ ಈ ಮೂವರು ಆಟಗಾರರು ಐಸಿಸಿಯ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರಂತೆ ಡಿಸೆಂಬರ್ 2023ರ ಅತ್ಯುತ್ತಮ ಆಟಗಾರ ಪ್ರಶಸ್ತಿ ಯಾರಿಗೆ ಒಲಿಯಲಿದೆ ಕಾದು ನೋಡಬೇಕಿದೆ.
