
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮುಕ್ತಾಯದ ಬೆನ್ನಲ್ಲೇ ಸನ್ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಆಘಾತ ಎದುರಾಗಿದೆ. ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮುಂದಿನ ಸೀಸನ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎಂಬ ವರದಿ ಹೊರಬಿದ್ದಿದೆ.
ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಪ್ಯಾಟ್ ಕಮಿನ್ಸ್ ಐಪಿಎಲ್ 2027ರ ಟೂರ್ನಿಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.
ಮುಂದಿನ 18 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಮೆಲ್ಬೋರ್ನ್‌ನಲ್ಲಿ 150ನೇ ವರ್ಷದ ಐತಿಹಾಸಿಕ ಟೆಸ್ಟ್, ಆಶಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್‌ನಂತಹ ಸರಣಿಗಳನ್ನು ಆಡಬೇಕಿದೆ.
ಈ ಬಗ್ಗೆ ಸಿಡ್ನಿ ಹೆರಾಲ್ಡ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, “ಮುಂದಿನ ವರ್ಷದ ಯಾವುದಾದರೂ ಒಂದು ಹಂತದಲ್ಲಿ ಯಾವುದಕ್ಕಾದರೂ ಬ್ರೇಕ್ ನೀಡಲೇಬೇಕಾಗುತ್ತದೆ. ಆದರೆ ಅದು ಖಂಡಿತವಾಗಿಯೂ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್ ಪಂದ್ಯಗಳಂತೂ ಅಲ್ಲ” ಎಂದು ನೇರವಾಗಿ ಹೇಳಿದ್ದಾರೆ.
ಅಲ್ಲದೆ ” ಐಪಿಎಲ್ ಟೂರ್ನಿ ಹತ್ತಿರ ಬಂದಾಗ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಫ್ರಾಂಚೈಸಿ (SRH) ಜೊತೆಗೂ ಮಾತನಾಡಿ ಯಾವುದು ಸೂಕ್ತವೋ ಹಾಗೆ ಮಾಡುತ್ತೇನೆ” ಎಂದು ಇದೇ ವೇಳೆ ಕಮಿನ್ಸ್ ತಿಳಿಸಿದ್ದಾರೆ.
ಈ ಮೂಲಕ ಫ್ರಾಂಚೈಸಿ ಲೀಗ್‌ಗಳಿಗಿಂತ ತಮಗೆ ದೇಶದ ಪರ ಆಡುವ ಟೆಸ್ಟ್ ಪಂದ್ಯಗಳು ಮತ್ತು ಐಸಿಸಿ ಟೂರ್ನಿಗಳೇ ಮೊದಲ ಆದ್ಯತೆ ಎಂದು ಪ್ಯಾಟ್ ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್ ಸೀಸನ್-19ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲದೆ ಸನ್ರೈಸರ್ಸ್ ಹೈದರಾಬಾದ್ ಪರ ಈ ಬಾರಿ ಕೇವಲ 8 ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು.
ಇದನ್ನೂ ಓದಿ: ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
ಇತ್ತ ಕಮಿನ್ಸ್ ಅಲಭ್ಯತೆಯ ನಡುವೆ ಮೊದಲ 7 ಪಂದ್ಯಗಳಲ್ಲಿ ಇಶಾನ್ ಕಿಶನ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ತಂಡವನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಸೀಸನ್ನಲ್ಲಿ ಪ್ಯಾಟ್ ಕಮಿನ್ಸ್ ಅಲಭ್ಯರಾದರೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.