
2025ರ ಏಷ್ಯಾಕಪ್ ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಹ್ಯಾಂಡ್ಶೇಕ್ ನಿರಾಕರಣೆಯೊಂದಿಗೆ ಶುರುವಾದ ಈ ವಿವಾದವು ಇದೀಗ ಪ್ರಶಸ್ತಿ ಸ್ವೀಕಾರ ನಿರಾಕರಣೆಯೊಂದಿಗೆ ಅಂತ್ಯಗೊಂಡಿದೆ. ಆದರೆ ಈ ನಿರಾಕರಣೆಯ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿಯೊಂದಿಗೆ ಎಸ್ಕೇಪ್ ಆಗಿರುವುದು ಅಚ್ಚರಿ.
ಹೌದು, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 5 ವಿಕೆಟ್ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಭಾರತೀಯ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ/ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.
ಟೀಮ್ ಇಂಡಿಯಾದ ದೃಢ ನಿರ್ಧಾರ:
ಏಷ್ಯಾ ಕಪ್ ಫೈನಲ್ ಪಂದ್ಯದ ಪ್ರದಾನ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ವೇದಿಕೆಯಲ್ಲಿದ್ದರು. ಆದರೆ ಟೀಮ್ ಇಂಡಿಯಾ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಬದಲಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ಸಿದ್ಧವಾಗಿತ್ತು. ಇದರಿಂದ ಅಸಮಾಧಾನಗೊಂಡ ನಖ್ವಿ ಏಷ್ಯಾ ಕಪ್ ಟ್ರೋಫಿ ಮತ್ತು ಟೀಮ್ ಇಂಡಿಯಾದ ಪದಕಗಳನ್ನು ತೆಗೆದುಕೊಂಡು ತಮ್ಮ ಹೋಟೆಲ್‌ಗೆ ಮರಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥನಾಗಿರುವ ನನ್ನಿಂದ ಟ್ರೋಫಿ ಸ್ವೀಕರಿಸದಿದ್ದರೆ, ಭಾರತ ತಂಡಕ್ಕೆ ಟ್ರೋಫಿ ನೀಡುವ ಅಗತ್ಯವಿಲ್ಲ ಎಂದು ಮೊಹ್ಸಿನ್ ನಖ್ವಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇತ್ತ ನಖ್ವಿ ಟ್ರೋಫಿಯೊಂದಿಗೆ ಎಸ್ಕೇಪ್ ಆದ ಕಾರಣ ಭಾರತ ತಂಡದ ಆಟಗಾರರು ಟ್ರೋಫಿ ಇಲ್ಲದೆ ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ನಡೆಗೆ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತೀಯ ತಂಡವು ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಬಯಸದಿದ್ದರೆ, ಅದನ್ನು ಅವರು ತಮ್ಮ ಹೋಟೆಲ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಅರ್ಥವಲ್ಲ. ಹಾಗೆ ಮಾಡುವುದು ಕ್ರೀಡೆಯ ಉತ್ಸಾಹಕ್ಕೆ ವಿರುದ್ಧ.
ಭಾರತೀಯ ಆಟಗಾರರು ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಒಂದು ಕಾರಣವಿದೆ. ಅವರು ಭಾರತದ ವಿರೋಧಿ ರಾಷ್ಟ್ರದವರು. ಉಭಯ ದೇಶಗಳ ನಡುವೆ ಯುದ್ಧ ನಡೆದಿದೆ. ನಮ್ಮೊಂದಿಗೆ ಯುದ್ಧ ಮಾಡಿದ ದೇಶದ ಪ್ರತಿನಿಧಿಯಿಂದ ನಾವು ಟ್ರೋಫಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದೆ.
ಇದನ್ನೂ ಓದಿ: ಸೋಲಿನ ನೋವು… ಪ್ರಶಸ್ತಿ ಚೆಕ್ ಎಸೆದು ಹೋದ ಪಾಕ್ ತಂಡದ ನಾಯಕ
ಅವರಿಂದ ಟ್ರೋಫಿ ಪಡೆಯಲು ಹಿಂದೇಟು ಹಾಕಿದ್ದಾರೆ ಎಂಬ ಮಾತ್ರಕ್ಕೆ ಅದನ್ನು ಮತ್ತೆ ಹೋಟೆಲ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಅರ್ಥವಲ್ಲ. ಮೊಹ್ಸಿನ್ ನಖ್ವಿ ಅವರ ವರ್ತನೆ ಅಸಹನೀಯವಾಗಿದೆ. ಅವರು ಸಾಧ್ಯವಾದಷ್ಟು ಬೇಗ ಟ್ರೋಫಿಯನ್ನು ಭಾರತಕ್ಕೆ ಹಿಂದಿರುಗಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.