IND vs PAK: ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಟೀಂ ಇಂಡಿಯಾ
Team India Champions: ದುಬೈನಲ್ಲಿ ನಡೆದ 2025ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಪಾಕಿಸ್ತಾನದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಒಂಬತ್ತನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿದು ದಾಖಲೆ ನಿರ್ಮಿಸಿದೆ.

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್ (Asia Cup 2025) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಿದ್ದವು. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಇಡೀ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಯಾವ ರೀತಿಯ ಮೇಲುಗೈ ಸಾಧಿಸಿತ್ತೋ ಅದೇ ರೀತಿ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನದ ವಿರುದ್ಧ ವಿರೋಚಿತ ಪ್ರದರ್ಶನ ನೀಡಿ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು.
ಪಾಕಿಸ್ತಾನಕ್ಕೆ ಉತ್ತಮ ಆರಂಭ
ಸೆಪ್ಟೆಂಬರ್ 28 ರ ಭಾನುವಾರ ಸಂಜೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಬಲಿಷ್ಠ ಆರಂಭ ಸಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಆರಂಭಿಕ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ಉತ್ತಮ ಆರಂಭವನ್ನು ನೀಡಿದರು. ಫರ್ಹಾನ್ ಮತ್ತೊಮ್ಮೆ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಕೇವಲ 38 ಎಸೆತಗಳಲ್ಲಿ 57 ರನ್ ಬಾರಿಸಿದರು. ಅಲ್ಲದೆ ಫರ್ಹಾನ್ ಮತ್ತು ಫಖರ್ ಮೊದಲ ವಿಕೆಟ್ಗೆ 84 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ನಂತರ ಫಖರ್ ಜಮಾನ್ ಜವಾಬ್ದಾರಿ ವಹಿಸಿಕೊಂಡು ತಂಡವನ್ನು 100 ರ ಗಡಿ ದಾಟಿಸಿದರು.
ಒಂದೇ ಓವರ್‌ನಲ್ಲಿ 3 ವಿಕೆಟ್ ಉರುಳಿಸಿದ ಕುಲ್ದೀಪ್
ಆದರೆ ಕುಲ್ದೀಪ್ ಯಾದವ್ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. 13 ನೇ ಓವರ್‌ನಲ್ಲಿ ಕುಲ್ದೀಪ್, ಸೈಮ್ ಅಯೂಬ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಪಾಕಿಸ್ತಾನ 113 ರನ್‌ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ, ಮುಂದಿನ ಐದು ಓವರ್‌ಗಳಲ್ಲಿ ಪಾಕಿಸ್ತಾನ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. 17 ನೇ ಓವರ್‌ನಲ್ಲಿ ಕುಲ್ದೀಪ್ ಕೇವಲ ಒಂದು ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
20 ರನ್ಗೆ ಭಾರತದ 3 ವಿಕೆಟ್ ಪತನ
ಈ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾ ಗ್ರೂಪ್ ಹಂತ ಮತ್ತು ಸೂಪರ್ 4 ಸುತ್ತುಗಳಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಇದಕ್ಕೆ ಕಾರಣರಾಗಿದ್ದವರು ಆರಂಭಿಕ ಅಭಿಷೇಕ್ ಶರ್ಮಾ, ಈ ಎರಡೂ ಪಂದ್ಯಗಳಲ್ಲಿ ಅವರು ಸ್ಫೋಟಕ ಆರಂಭವನ್ನು ನೀಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಎಡವಿದ ಅಭಿಷೇಕ್ ಎರಡನೇ ಓವರ್‌ನಲ್ಲಿಯೇ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಕೂಡ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದರು. ಹೀಗಾಗಿ ತಂಡವು ಕೇವಲ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇನ್ನಿಂಗ್ಸ್ ನಿಭಾಯಿಸಿ 57 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು.
Asia cup 2025 Final IND vs PAK Live Score: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ; ಭಾರತಕ್ಕೆ ಏಷ್ಯಾಕಪ್
ಭಾರತವನ್ನು ಗೆಲ್ಲಿಸಿದ ತಿಲಕ್, ದುಬೆ
ಸ್ಯಾಮ್ಸನ್ ಔಟಾದ ನಂತರ ಬಂದ ಶಿವಂ ದುಬೆ, ತಿಲಕ್‌ಗೆ ಬೆಂಬಲವಾಗಿ ನಿಂತು ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ಇಬ್ಬರೂ ಕೇವಲ 40 ಎಸೆತಗಳಲ್ಲಿ 60 ರನ್‌ಗಳ ತ್ವರಿತ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಸಮಯದಲ್ಲಿ, ತಿಲಕ್ ತಮ್ಮ ಹೋರಾಟದ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ತಂಡಕ್ಕೆ ಗೋಡೆಯಂತೆ ನಿಂತರು. 19 ನೇ ಓವರ್‌ನ ಕೊನೆಯ ಎಸೆತದಲ್ಲಿ ದುಬೆ ಔಟಾದರು, ಇದರಿಂದಾಗಿ ಭಾರತಕ್ಕೆ ಕೊನೆಯ ಆರು ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕೊನೆಯ ಓವರ್‌ನಲ್ಲಿ ತಿಲಕ್, ಹ್ಯಾರಿಸ್ ರೌಫ್ ಅವರ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಒತ್ತಡ ಕಡಿಮೆ ಮಾಡಿದರು. ನಂತರ ಸ್ಟ್ರೈಕ್ಗೆ ಬಂದ ರಿಂಕು ಸಿಂಗ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
Published On - 12:00 am, Mon, 29 September 25
