ಪಾಕಿಸ್ತಾನ್ ಆಟಗಾರರ ವೇತನ ಶೇ. 75 ರಷ್ಟು ಕಡಿತ..!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡ ಎಲ್ಲಾ ಪಂದ್ಯಗಳಲ್ಲೂ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ದೇಶೀಯ ಟೂರ್ನಿ ಆಡುವ ಆಟಗಾರರ ವೇತನ ಕಡಿತಗೊಳಿಸಿ ನಗೆಪಾಟಲಿಗೀಡಾಗಿದ್ದಾರೆ. ಅಂದರೆ ಸೋತಿದ್ದು ಪಾಕಿಸ್ತಾನ್ ರಾಷ್ಟ್ರೀಯ ತಂಡ. ಕ್ರಮ ಜರುಗಿದ್ದು ದೇಶೀಯ ಆಟಗಾರರ ಮೇಲೆ..!

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ಆಟಗಾರರಿಗೆ ಬಿಸಿ ಮುಟ್ಟಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಆದರೆ ಪಿಸಿಬಿ ಇಂತಹದೊಂದು ಮಹತ್ವದ ಕ್ರಮ ಕೈಗೊಂಡಿರುವುದು ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವ ಆಟಗಾರರ ಮೇಲೆ ಎಂಬುದೇ ಅಚ್ಚರಿ. ಅಂದರೆ ಐಸಿಸಿ ಟೂರ್ನಿಯಲ್ಲಿ ಹೀನಾಯವಾಗಿ ಸೋತಿದ್ದು ಪಾಕಿಸ್ತಾನ್ ತಂಡ. ಆದರೆ ವೇತನ ಕಡಿತವಾಗಿದ್ದು ದೇಶೀಯ ಟೂರ್ನಿ ಆಡುವ ಆಟಗಾರರದ್ದು..!
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ದೇಶೀಯ ಟೂರ್ನಿ ನ್ಯಾಷನಲ್ ಕಪ್ನಲ್ಲಿ ಕಣಕ್ಕಿಳಿಯುವ ಆಟಗಾರರ ವೇತನವನ್ನು ಶೇ. 75 ರಷ್ಟು ಕಡಿತ ಮಾಡಿದೆ. ಈ ಹಿಂದೆ ಆಟಗಾರರಿಗೆ ಪಂದ್ಯ ಶುಲ್ಕವಾಗಿ 40,000 ರೂ. (PKR) ನೀಡಲಾಗುತ್ತಿತ್ತು.
ಆದರೆ ಇನ್ಮುಂದೆ ಈ ಪಂದ್ಯಾವಳಿಯಲ್ಲಿ ಕಣಕ್ಕಿಳಿಯುವ ಆಟಗಾರರಿಗೆ 10,000 ರೂ. ಪಂದ್ಯ ಶುಲ್ಕ ನೀಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಪ್ರಸ್ತುತ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ನೇತೃತ್ವದಲ್ಲಿ ನಡೆದ ಪಿಸಿಬಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನ್ಯಾಷನಲ್ ಟಿ20 ಕಪ್‌ಗಾಗಿ ಪಂದ್ಯ ಶುಲ್ಕವನ್ನು ಕಡಿತಗೊಳಿಸುವ ನಿರ್ಧಾರವು ಹಣಕಾಸಿನ ಸಮಸ್ಯೆಗಳ ಪರಿಣಾಮವಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ಇಎಸ್‌ಪಿಎನ್‌ಕ್ರಿಕ್‌ಇನ್ಫೊಗೆ ತಿಳಿಸಿದ್ದಾರೆ. ಇದಾಗ್ಯೂ ಇಂತಹದೊಂದು ಕ್ರಮ ಕೈಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ವೇತನ ಕಡಿತದ ನಿರ್ಧಾರದಿಂದ ದೇಶೀಯ ಟೂರ್ನಿಗಳ ಮೂಲಕ ಕೆರಿಯರ್ ಕಟ್ಟಿಕೊಳ್ಳುವ ವಿಶ್ವಾಸದಲ್ಲಿದ್ದ ಆಟಗಾರರರು ಕಂಗೆಟ್ಟಿರುವುದು ಸುಳ್ಳಲ್ಲ.
ಏಕೆಂದರೆ ಪಾಕಿಸ್ತಾನ್ ಬೋರ್ಡ್ನ ನಡೆಯು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಿದೆ. ಹೀಗಾಗಿಯೇ ಪಿಸಿಬಿ ತೆಗೆದುಕೊಂಡಿರುವ ಹೊಸ ನಿರ್ಧಾರವು ಇದೀಗ ನಗೆಪಾಟಲಿಗೀಡಾಗಿದೆ.
ಇನ್ನು ಈ ಬಾರಿಯ ನ್ಯಾಷನಲ್ ಟಿ20 ಕಪ್ ಮಾರ್ಚ್ 14 ರಂದು ಆರಂಭವಾಗಲಿದ್ದು, ಫೈಸಲಾಬಾದ್, ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ 39 ಪಂದ್ಯಗಳು ನಡೆಯಲಿವೆ. ಮಾರ್ಚ್ 27 ರಂದು ಫೈಸಲಾಬಾದ್‌ನಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಇತ್ತ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ವೇತನ ಕಡಿತಗೊಳಿಸಿರುವ ಕಾರಣ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಆಟಗಾರರ ವೇತನಕ್ಕೂ ಕತ್ತರಿ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿ..!
ಸದ್ಯ ಪಾಕಿಸ್ತಾನ್ ತಂಡ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಮಾರ್ಚ್ 16 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದೆ. ಈ ಸರಣಿಯ ಬಳಿಕ ಪಾಕಿಸ್ತಾನ್ ಆಟಗಾರರ ಕೇಂದ್ರ ಒಪ್ಪಂದ ನಡೆಯಲಿದೆ. ಈ ವೇಳೆ ರಾಷ್ಟ್ರೀಯ ಆಟಗಾರರ ವೇತನವನ್ನು ಪುನರ್ಪರಿಶೀಲಿಸುವ ಸಾಧ್ಯತೆಯಿದೆ.