ಪ್ರತೀಕಾ ರಾವಲ್ ಕನಸು ಕೊನೆಗೂ ನನಸು; ಜಯ್ ಶಾಗೆ ಧನ್ಯವಾದ ಹೇಳಿದ ವಿಶ್ವ ವಿಜೇತೆ
Pratika Rawal Gets World Cup Medal: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಗಾಯದಿಂದಾಗಿ ವಿಶ್ವಕಪ್ ಫೈನಲ್‌ನಿಂದ ಹೊರಗುಳಿದು ಪದಕ ವಂಚಿತರಾಗಿದ್ದರು. ಐಸಿಸಿ ನಿಯಮದಂತೆ ಅವರಿಗೆ ಪದಕ ಸಿಗದಿರುವ ಕೊರಗು ಜಯ್ ಶಾ ಮಧ್ಯಸ್ಥಿಕೆಯಿಂದ ನೀಗಿದೆ. ಟೀಂ ಇಂಡಿಯಾ ರಾಷ್ಟ್ರಪತಿ ಭೇಟಿ ವೇಳೆ ಅವರು ಪದಕ ಧರಿಸಿದ್ದು, ಪದಕವನ್ನು ಕಂಡು ಭಾವುಕರಾಗಿದ್ದಾಗಿ ಪ್ರತೀಕಾ ತಿಳಿಸಿದ್ದಾರೆ.

ಭಾರತ ಮಹಿಳಾ ತಂಡದ ವಿಶ್ವಕಪ್ (Women’s Cricket World Cup) ಗೆಲುವಿನಲ್ಲಿ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (Pratika Rawal) ಅವರ ಪಾತ್ರ ಅಪಾರ ಎಂದರೇ ತಪ್ಪಾಗಲಾರದು. ಏಕೆಂದರೆ ನಾಕೌಟ್ ಸುತ್ತಿಗೂ ಮುನ್ನ ಇಂಜುರಿಯಿಂದಾಗಿ ತಂಡದಿಂದ ಹೊರಹೋದ ಪ್ರತೀಕಾ, ಗಾಯಗೊಳ್ಳುವುದಕ್ಕೂ ಮುನ್ನ ಆರಂಭಿಕ ಆಟಗಾರ್ತಿಯಾಗಿ ತಂಡಕ್ಕೆ ಯಾವ ರೀತಿಯ ಕೊಡುಗೆ ನೀಡಬೇಕೋ ಅದನ್ನು ನೀಡಿದ್ದರು. ಆದಾಗ್ಯೂ ಅದೊಂದು ದುರಂತ ಅವರನ್ನು ವಿಶ್ವಕಪ್ನಿಂದ ಹೊರಹಾಕಿತ್ತು. ಇದರಿಂದಾಗಿ ಅವರಿಗೆ ವಿಶ್ವಕಪ್ ವಿಜೇತ ಪದಕ ಸಿಕ್ಕಿರಲಿಲ್ಲ. ಆದರೆ ಇದೀಗ ಪದಕವಿಲ್ಲದ ಕೊರಗಿನಲ್ಲಿದ್ದ ಪ್ರತೀಕಾಗೆ ವಿಶ್ವಕಪ್ ಪದಕ ಸಿಕ್ಕಿದೆ. ಟೀಂ ಇಂಡಿಯಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದಾಗ, ಪ್ರತಿಕಾ ರಾವಲ್ ಅವರು ಪದಕವನ್ನು ತಮ್ಮ ಕುತ್ತಿಗೆಗೆ ಧರಿಸಿದ್ದರು. ಇದರಿಂದ ಅವರಿಗಿದ್ದ ಅದೊಂದು ಕೊರಗು ಈಗ ನೀಗಿದೆ ಎನ್ನಬಹುದು.
ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಪ್ರತೀಕಾ ಗಾಯಗೊಂಡಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಯಿತು. ತಂಡದಿಂದ ಕೈಬಿಡಲಾದ ಆಟಗಾರ್ತಿಯರಿಗೆ ವಿಜೇತ ಪದಕವನ್ನು ನೀಡಲಾಗುವುದಿಲ್ಲ ಎಂದು ಐಸಿಸಿ ನಿಯಮಗಳು ಹೇಳುತ್ತವೆ. ಆದರೆ ಐಸಿಸಿ ಮುಖ್ಯಸ್ಥ ಜಯ್ ಶಾ ಅವರು ಪ್ರತೀಕಾ ಅವರಿಗೆ ಸಲ್ಲಬೇಕಾದ ಅರ್ಹತೆಯನ್ನು ನೀಡಿದ್ದಾರೆ. ಪದಕ ಸ್ವೀಕರಿಸಿದ ಬಳಿಕ ಖಾಸಗಿ ಚಾನೆಲ್ವೊಂದರಲ್ಲಿ ಮಾತನಾಡಿರುವ ಪ್ರತೀಕಾ, ಜಯ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
It was a moment of pride to meet Smt Droupadi Murmu ji, Honourable President of India, at the Rashtrapati Bhavan.
We thank the Honourable President for inviting the ICC Women’s Cricket World Cup-winning squad and inspiring #TeamIndia with her words of encouragement and support… pic.twitter.com/wG32vqoKf5
— BCCI Women (@BCCIWomen) November 6, 2025
ಪದಕ ನೋಡಿ ನಾನು ಭಾವುಕಳಾದೆ
ಪ್ರತೀಕಾ ರಾವಲ್ ಸಿಎನ್ಎನ್ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ, ‘ಜಯ್ ಶಾ ನಮ್ಮ ವ್ಯವಸ್ಥಾಪಕರಿಗೆ ಸಂದೇಶ ಕಳುಹಿಸಿ, ‘ನಾನು ಪ್ರತೀಕಾಗೆ ಪದಕ ತಂದುಕೊಡಲು ವ್ಯವಸ್ಥೆ ಮಾಡುತ್ತಿದ್ದೇನೆ ಎಂದಿದ್ದರು. ಅದರಂತೆ ಈಗ ನನಗೆ ಕೊನೆಗೂ ಪದಕ ಸಿಕ್ಕಿದೆ. ನಾನು ಮೊದಲ ಬಾರಿಗೆ ನನ್ನ ವಿಶ್ವಕಪ್ ಪದಕವನ್ನು ನೋಡಿದಾಗ, ನನಗೆ ಕಣ್ಣೀರು ಬಂತು. ಸಾಮಾನ್ಯವಾಗಿ ನಾನು ಅಳುವುದಿಲ್ಲ. ಆದರೆ ಪದಕವನ್ನು ನೋಡಿ ನಾನು ಭಾವುಕಳಾದೆ ಎಂದಿದ್ದಾರೆ.
6,084 ದಿನಗಳ ಕಾಯುವಿಕೆ ಅಂತ್ಯ; ಹರ್ಮನ್ ತೋಳಿನ ಮೇಲೆ ಮೂಡಿದ ವಿಶ್ವಕಪ್ ಟ್ರೋಫಿ ಟ್ಯಾಟೂ
ವಿಶ್ವಕಪ್‌ನಲ್ಲಿ ಪ್ರತೀಕಾ ರಾವಲ್ ಪ್ರದರ್ಶನ
2025 ರ ಮಹಿಳಾ ವಿಶ್ವಕಪ್‌ನಲ್ಲಿ ಪ್ರತಿಕಾ ರಾವಲ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಈ ಬಲಗೈ ಆರಂಭಿಕ ಆಟಗಾರ್ತಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 51.33 ಸರಾಸರಿಯಲ್ಲಿ 308 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ ಪ್ರಶ್ನಾರ್ಹವಾಗಿದ್ದರೂ, ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಆದಾಗ್ಯೂ ಪ್ರತಿಕಾ ರಾವಲ್ ಅವರ ಗಾಯದಿಂದಾಗಿ ಬದಲಿಯಾಗಿ ಬಂದಿದ್ದ ಶಫಾಲಿ ವರ್ಮಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಅವರು 78 ಎಸೆತಗಳಲ್ಲಿ 87 ರನ್ ಬಾರಿಸುವುದರ ಜೊತೆಗೆ ಎರಡು ವಿಕೆಟ್‌ಗಳನ್ನು ಸಹ ಪಡೆದರು. ಇದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Fri, 7 November 25
