IND vs AUS: 9999 ರನ್ಗೆ ಔಟ್; ಸ್ಮಿತ್‌ಗೆ ಮರೆಯಲಾಗದ ನೋವು ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
IND vs AUS: ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವೆ ಸಿಡ್ನಿಯಲ್ಲಿ ನಡೆದಿದ್ದ 5ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅವರು ಸ್ಟೀವ್ ಸ್ಮಿತ್ ಅವರನ್ನು ಕೇವಲ 4 ರನ್‌ಗಳಿಗೆ ಔಟ್ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಾಸ್ತವವಾಗಿ ಸ್ಮಿತ್‌ಗೆ ಟೆಸ್ಟ್‌ನಲ್ಲಿ 1000 ರನ್ ಪೂರೈಸಲು 5 ರನ್ ಬೇಕಿತ್ತು. ಆದರೆ 4 ರನ್‌ಗಳಿಗೆ ಅವರನ್ನು ಔಟ್ ಮಾಡಿದ ಪ್ರಸಿದ್ಧ್, ಸ್ಮಿತ್ 10000 ರನ್ ಪೂರೈಸದಂತೆ ತಡೆದಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ 10 ವರ್ಷಗಳ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಭಾರತ ನೀಡಿದ್ದ 162 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ನಾಲ್ಕು ವಿಕೆಟ್ಗಳಲ್ಲಿ ಅನುಭವಿ ಸ್ಟೀವ್ ಸ್ಮಿತ್ ಅವರ ವಿಕೆಟ್ ಕೂಡ ಸೇರಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸ್ಮಿತ್ ಅವರ ವಿಕೆಟ್ ಪಡೆದರು. 4 ರನ್‌ಗಳಿಗೆ ಸ್ಮಿತ್ ವಿಕೆಟ್ ಉರುಳಿಸಿದ ಪ್ರಸಿದ್ಧ್, ಈ ಮೂಲಕ ಅದೊಂದು ಐತಿಹಾಸಿಕ ಸಾಧನೆಗೆ ಅಡ್ಡಿಯಾದರು.
ಮೊದಲ 3 ವಿಕೆಟ್ ಉರುಳಿಸಿದ ಪ್ರಸಿದ್ಧ್
ಸಿಡ್ನಿ ಟೆಸ್ಟ್‌ನ ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಪ್ರಸಿದ್ಧ್ ಕೃಷ್ಣ ಆಸ್ಟ್ರೇಲಿಯಾದ ಮೊದಲ ಮೂರು ವಿಕೆಟ್‌ಗಳನ್ನು ಪಡೆದರು. ಅವರು ಸ್ಯಾಮ್ ಕೊನ್ಸ್ಟಾಸ್, ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಬಲಿಪಶುಗಳನ್ನಾಗಿ ಮಾಡಿದರು. ಆದರೆ ಸ್ಟೀವ್ ಸ್ಮಿತ್ ಅವರ ವಿಕೆಟ್ ಅವರಿಗೆ ಅತ್ಯಂತ ವಿಶೇಷವಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ 9 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಪ್ರಸಿದ್ಧ್ ಕೃಷ್ಣನಿಗೆ ಬಲಿಯಾದರು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿಯೂ ಸ್ಟೀವ್ ಸ್ಮಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಇದೇ ಪ್ರಸಿದ್ಧ್ ಕೃಷ್ಣ.
ಈ ಸಾಧನೆ ಮಾಡಿದ ಮೊದಲ ವೇಗಿ
ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್ ಮತ್ತೊಮ್ಮೆ ಟೆಸ್ಟ್‌ನಲ್ಲಿ ತಮ್ಮ 10,000 ರನ್‌ಗಳನ್ನು ಪೂರ್ಣಗೊಳಿಸುವುದನ್ನು ತಪ್ಪಿಸಿಕೊಂಡರು. ಸ್ಟೀವ್ ಸ್ಮಿತ್ ಟೆಸ್ಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ಮುಟ್ಟಲು ಇನ್ನೂ 1 ರನ್ ಅಗತ್ಯವಿತ್ತು. ಆದರೀಗ 9999 ರನ್‌ಗಳಿಗೆ ಈ ಸರಣಿಯನ್ನು ಮುಗಿಸಿರುವ ಸ್ಮಿತ್, ಟೆಸ್ಟ್‌ನಲ್ಲಿ 10000 ರನ್‌ಗಳನ್ನು ಪೂರೈಸಲು ಮುಂದಿನ ಸರಣಿಯವರೆಗೂ ಕಾಯಬೇಕಾಗಿದೆ. ಇನ್ನು ಸ್ಮಿತ್ರನ್ನು ಔಟ್ ಮಾಡುವ ಮೂಲಕ ಪ್ರಸಿದ್ಧ್ ಕೃಷ್ಣ ಅವರು 9999 ರನ್‌ಗಳಲ್ಲಿ ಬ್ಯಾಟ್ಸ್‌ಮನ್ ಒಬ್ಬನನ್ನು ಔಟ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಲಂಕಾ ವಿರುದ್ಧ ಸ್ಮಿತ್ ದಾಖಲೆ
ಸ್ಟೀವ್ ಸ್ಮಿತ್ಗೂ ಮೊದಲು, ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಕೂಡ 9999 ಟೆಸ್ಟ್ ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ದರು. ಆದರೆ ಅವರು ರನೌಟ್ ಆಗಿದ್ದರಿಂದ ಯಾವುದೇ ಬೌಲರ್ಗೆ ಅವರ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಸ್ಟೀವ್ ಸ್ಮಿತ್ ಕ್ಯಾಚಿತ್ತು ಔಟಾದ ಕಾರಣದಿಂದ ಪ್ರಸಿದ್ಧ್ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಸ್ಟ್ರೇಲಿಯಾ ಈಗ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಸ್ಟೀವ್ ಸ್ಮಿತ್ ಈ ಸರಣಿಯಲ್ಲಿ ತಮ್ಮ 10 ಸಾವಿರ ಟೆಸ್ಟ್ಗಳನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 5 January 25