
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ದೆಹಲಿಯ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅಬ್ಬರಿಸಿದ್ದಾರೆ. ನವೆಂಬರ್ 24ರಂದು ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ್ದಾರೆ. ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ ಪ್ರಿಯಾಂಶ್, ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಇದು ಅವರ ಟಿ20 ವೃತ್ತಿಜೀವನದ ಅತಿ ವೇಗದ ಶತಕವೂ ಆಗಿದೆ. ಈ ಮೂಲಕ ತಮ್ಮ ಹಿಂದಿನ ದಾಖಲೆಯನ್ನೇ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಪ್ರಿಯಾಂಶ್ ಆರ್ಯ ಅವರ ಹಿಂದಿನ ಅತಿ ವೇಗದ ಟಿ20 ಶತಕ 39 ಎಸೆತಗಳಲ್ಲಿ ಬಂದಿತ್ತು. ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ಆದರೆ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲೇ ಶತಕ ಪೂರೈಸಿ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಶತಕದ ಹಾದಿಯಲ್ಲಿ ನಾಲ್ಕು ಬೌಂಡರಿ ಹಾಗೂ 12 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಶತಕದ ಬಳಿಕವೂ ಅವರ ಬ್ಯಾಟಿಂಗ್ ಅಬ್ಬರ ಕಡಿಮೆಯಾಗಲಿಲ್ಲ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಪ್ರಿಯಾಂಶ್, ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದರು.
ತಮಿಳುನಾಡು ವಿರುದ್ಧ ಪ್ರಿಯಾಂಶ್ ಆರ್ಯ ಸಿಡಿಸಿದ 181 ರನ್‌ಗಳ ಇನ್ನಿಂಗ್ಸ್ ಮತ್ತೊಂದು ದೊಡ್ಡ ದಾಖಲೆಗೆ ಸಾಕ್ಷಿಯಾಯಿತು. ಕೇವಲ 68 ಎಸೆತಗಳಲ್ಲಿ 266ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, 19 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡರು. ವಿಶ್ವಮಟ್ಟದಲ್ಲಿ ಎರಡನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
2026ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪ್ರಿಯಾಂಶ್ ಆರ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಸತತವಾಗಿ ರನ್ ಮಳೆ ಸುರಿಸುತ್ತಿರುವ ಅವರು ಟೂರ್ನಿಯ ಪ್ರಮುಖ ರನ್ ಗಳಿಕೆದಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ರೋಚಕ ಫೈನಲ್‌ನಲ್ಲಿ ಕರ್ನಾಟಕದ ತಾಕತ್ತು ಪ್ರದರ್ಶನ; ಒಲಿದ ಚೊಚ್ಚಲ ಟಿ20 ಪ್ರಶಸ್ತಿ
ಪ್ರಿಯಾಂಶ್ ಆರ್ಯ ಅವರ ದಾಖಲೆಯ ಇನ್ನಿಂಗ್ಸ್ ನೆರವಿನಿಂದ ದೆಹಲಿ ತಂಡ ಟಿ20 ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿತು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 275 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ 159 ರನ್ಗಳಿಗೆ ಆಲೌಟ್ ಆಗುವ ಮೂಲಕ 116 ರನ್ಗಳಿಂದ ಸೋಲೊಪ್ಪಿಕೊಂಡಿತು.
Published On - 2:56 pm, Tue, 24 November 26