ಅಂಪೈರ್ ಜೊತೆ ಅನುಚಿತ ವರ್ತನೆ: ರವಿಚಂದ್ರನ್ ಅಶ್ವಿನ್ಗೆ ದಂಡ..!
TNPL 2025: ತಮಿಳುನಾಡು ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡವು 16.2 ಓವರ್ಗಳಲ್ಲಿ 93 ರನ್ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ತಿರುಪ್ಪೂರು ತಮಿಳನ್ಸ್ ತಂಡವು 11.5 ಓವರ್ಗಳಲ್ಲಿ 94 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ತಮಿಳುನಾಡು ಪ್ರೀಮಿಯರ್ ಲೀಗ್ನ (TNPL 2025) 5ನೇ ಪಂದ್ಯದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಅವರಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ. ಕೊಯಂಬತ್ತೂರಿನ ಎಸ್ಎನ್ಆರ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ತಿರುಪ್ಪೂರು ತಮಿಳನ್ಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಪ್ಪೂರು ತಮಿಳನ್ಸ್ ತಂಡದ ನಾಯಕ ಸಾಯಿ ಕಿಶೋರ್ ಬೌಲಿಂಗ್ ಆಯ್ದುಕೊಂಡಿದ್ದರು.
ದಿಂಡಿಗಲ್ ಡ್ರಾಗನ್ಸ್ ಪರ ಇನಿಂಗ್ಸ್ ಆರಂಭಿಸಿದ ರವಿಚಂದ್ರನ್ ಅಶ್ವಿನ್ ಹಾಗೂ ಶಿವಂ ಸಿಂಗ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ 5ನೇ ಓವರ್ನ 5ನೇ ಎಸೆತದಲ್ಲಿ ಅಶ್ವಿನ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವಲ್ಲಿ ಸಾಯಿ ಕಿಶೋರ್ ಯಶಸ್ವಿಯಾದರು. ಇತ್ತ ಸಾಯಿ ಕಿಶೋರ್ ಎಲ್ಬಿ ವಿಕೆಟ್ಗೆ ಮನವಿ ಮಾಡುತ್ತಿದ್ದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದರು.
ಆದರೆ ಅಂಪೈರ್ ತೀರ್ಪಿನಿಂದ ಅಶ್ವಿನ್ ಸಂತುಷ್ಟರಾಗಿರಲಿಲ್ಲ. ಅಲ್ಲದೆ ನಾನು ನಾಟೌಟ್ ಎಂಬ ವಾದವನ್ನು ಮುಂದಿಟ್ಟು ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇತ್ತ ಅಶ್ವಿನ್ ತಮ್ಮ ವಾದವನ್ನು ಮುಂದಿಟ್ಟರೂ, ಅತ್ತ ಅಂಪೈರ್ ಅವರೊಂದಿಗೆ ಚರ್ಚಿಸಲು ಮುಂದಾಗಲಿಲ್ಲ.
ಇದರಿಂದ ಮತ್ತಷ್ಟು ಕುಪಿತಗೊಂಡ ಅಶ್ವಿನ್ ಬ್ಯಾಟ್ನಿಂದ ಪ್ಯಾಡ್ಗೆ ಬಡಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಅಶ್ವಿನ್ ಅವರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ, ಅಂಪೈರ್ ನಿರ್ಧಾರವನ್ನು ಆಕ್ಷೇಪಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ. 10 ರಷ್ಟು ಹಾಗೂ ಕ್ರಿಕೆಟ್ ಉಪಕರಣಗಳ ದುರುಪಯೋಗಕ್ಕಾಗಿ ಶೇ. 20 ರಷ್ಟು ದಂಡ ವಿಧಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ವಿಡಿಯೋ:
Ashwin was controlling himself just because the umpire was a female 😭🙏pic.twitter.com/3XM6WAMPgy
— Kusha Sharma (@Kushacritic) June 9, 2025
ಗೆದ್ದು ಬೀಗಿದ ತಿರುಪ್ಪೂರು ತಮಿಳನ್ಸ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡವು 16.2 ಓವರ್ಗಳಲ್ಲಿ 93 ರನ್ಗಳಿಸಿ ಆಲೌಟ್ ಆಯಿತು. ತಿರುಪ್ಪೂರು ತಮಿಳನ್ಸ್ ತಂಡದ ಪರ ಎಸಕ್ಕಿಮುತ್ತು 4 ಓವರ್ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರೆ, ಮತಿವನ್ನನ್ 3 ವಿಕೆಟ್ ಕಬಳಿಸಿ ಮಿಂಚಿದರು.
ಇದನ್ನೂ ಓದಿ: ಐಪಿಎಲ್ನ 3 ತಂಡಗಳು ಬ್ಯಾನ್, 2 ಟೀಮ್ಗಳು ಕ್ಯಾನ್ಸಲ್
ಇನ್ನು 94 ರನ್ಗಳ ಗುರಿ ಬೆನ್ನತ್ತಿದ ತಿರುಪ್ಪೂರು ತಮಿಳನ್ಸ್ ಪರ ತುಷಾರ್ ರಹೇಜಾ 39 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 65 ರನ್ ಬಾರಿಸಿದರೆ, ಎಸ್ ರಾಧಾಕೃಷ್ಣನ್ ಅಜೇಯ 14 ರನ್ ಕಲೆಹಾಕಿದರು. ಈ ಮೂಲಕ ತಿರುಪ್ಪೂರು ತಮಿಳನ್ಸ್ ತಂಡವು 11.5 ಓವರ್ಗಳಲ್ಲಿ 94 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
