IPL 2025: 16 ಬೌಂಡರಿ, 10 ಸಿಕ್ಸರ್; 144 ರನ್ ಚಚ್ಚಿದ ರಿಯಾನ್ ಪರಾಗ್
IPL 2025: ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಯಾನ್ ಪರಾಗ್, ಐಪಿಎಲ್ 2025ರ ಮೊದಲ ಪಂದ್ಯಕ್ಕೂ ಮುನ್ನ ಅಜೇಯ 144 ರನ್ ಬಾರಿಸಿದ್ದಾರೆ. ಕೇವಲ 64 ಎಸೆತಗಳಲ್ಲಿ 16 ಬೌಂಡರಿ ಮತ್ತು 10 ಸಿಕ್ಸರ್‌ಗಳ ಮೂಲಕ ಶತಕ ಪೂರೈಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪರಾಗ್, ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ (IPL 2025) ಮಾಜಿ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡ ಮಾರ್ಚ್ 23 ರಂದು ತನ್ನ ಮೊದಲ ಪಂದ್ಯವನ್ನು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಪ್ರತಿ ಪಂದ್ಯದಲ್ಲೂ 200 ಕ್ಕೂ ಹೆಚ್ಚು ರನ್ಗಳನ್ನು ಕಲೆಹಾಕುವಂತಹ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟಿಂಗ್ ವಿಭಾಗವನ್ನು ಎದುರಿಸಬೇಕೆಂದರೆ ರಾಜಸ್ಥಾನ ತಂಡದಲ್ಲೂ ಅದೇ ರೀತಿಯ ಬ್ಯಾಟ್ಸ್ಮನ್ಗಳಿರಬೇಕು. ಇದೀಗ ಅದಕ್ಕೆ ಸಾಕ್ಷಿಯಾಗಿ ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ (Riyan Parag) ಕೇವಲ 64 ಎಸೆತಗಳಲ್ಲಿ 16 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಅಜೇಯ 144 ರನ್ ಕಲೆಹಾಕಿದ್ದಾರೆ. ಅಂದರೆ ರಿಯಾನ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ಬರೋಬ್ಬರಿ 104 ರನ್ ಚಚ್ಚಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪರಾಗ್ ಪ್ರದರ್ಶನ
ಕಳೆದ ಐಪಿಎಲ್ ಋತುವಿನಲ್ಲಿ ರಿಯಾನ್ ಪರಾಗ್ ಅದ್ಭುತ ಬ್ಯಾಟಿಂಗ್ ಮಾಡಿದರು. ಈ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಟೀಂ ಇಂಡಿಯಾದಲ್ಲೂ ಅವಕಾಶ ಸಿಕ್ಕಿತು. ಈ ಬಲಗೈ ಬ್ಯಾಟ್ಸ್‌ಮನ್ ಐಪಿಎಲ್ 2024 ರಲ್ಲಿ ಆಡಿದ 16 ಪಂದ್ಯಗಳಲ್ಲಿ 52 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 573 ರನ್ ಗಳಿಸಿದ್ದರು. ಅವರ ಸ್ಟ್ರೈಕ್ ರೇಟ್ ಕೂಡ 150 ರ ಆಸುಪಾಸಿನಲ್ಲಿತ್ತು. ಇಡೀ ಆವೃತ್ತಿಯಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದ ಪರಾಗ್ 4 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಇತ್ತೀಚೆಗೆ ಅವರು ಗಾಯದಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಆದರೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪರಾಗ್, ಐಪಿಎಲ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
144* (64) – What a Riyan yaar 🔥💗 pic.twitter.com/K6Ht3wRFQE
— Rajasthan Royals (@rajasthanroyals) March 19, 2025
ರಿಯಾನ್ ಪರಾಗ್ ಅವರ ಪ್ರತಿಭೆಯನ್ನು ನೋಡಿ, ರಾಜಸ್ಥಾನ ರಾಯಲ್ಸ್ ಬರೋಬ್ಬರಿ 14 ಕೋಟಿ ರೂ.ಗಳನ್ನು ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಅವರಲ್ಲದೆ, ರಾಜಸ್ಥಾನ ತಂಡ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್ ಮತ್ತು ಸಂದೀಪ್ ಶರ್ಮಾ ಅವರನ್ನು ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡಿತ್ತು.
ಆರ್ಸಿಬಿ ನಾಯಕ ರಜತ್ ಎಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡ್ತಾರೆ..! ವಿಡಿಯೋ
ರಿಯಾನ್ ಮೇಲೆ ರಾಜಸ್ಥಾನ್ ನಿರೀಕ್ಷೆ
ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರಿಯಾನ್ ಪರಾಗ್ ಟ್ರಂಪ್ ಕಾರ್ಡ್ ಆಗಬಹುದು. ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಹೊರತುಪಡಿಸಿ, ರಿಯಾನ್ ಪರಾಗ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಅವರು ಸ್ವಂತ ಬಲದಿಂದ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದಾಗ್ಯೂ, ನಿತೀಶ್ ರಾಣಾ ಕೂಡ ತಂಡದಲ್ಲಿರುವುದರಿಂದ, ರಿಯಾನ್ ಪರಾಗ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Wed, 19 March 25