BCCI: ‘ಸಾಧ್ಯವೇ ಇಲ್ಲ’; ಕೊಹ್ಲಿ ಮನವಿಗೂ ಬೆಲೆಕೊಡದ ಬಿಸಿಸಿಐ
BCCI's New Travel Policy: ಬಿಸಿಸಿಐನ ಹೊಸ ಪ್ರಯಾಣ ನೀತಿಯ ಬಗ್ಗೆ ಸಾಕಷ್ಟು ವಿರೋದಗಳು ವ್ಯಕ್ತವಾಗಿವೆ. ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಆಟಗಾರರ ಕುಟುಂಬಗಳು ತಮ್ಮೊಂದಿಗೆ ಇರುವುದು ಮುಖ್ಯ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನೀತಿಯು ಎಲ್ಲಾ ತಂಡದ ಸದಸ್ಯರಿಗೆ ಅನ್ವಯಿಸುತ್ತದೆ ಮತ್ತು ದಶಕಗಳಿಂದ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಬಿಸಿಸಿಐನ (BCCI) ಹೊಸ ಪ್ರಯಾಣ ನೀತಿ ಇತ್ತೀಚೆಗೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಬಿಸಿಸಿಐನ ಈ ಹೊಸ ನಿಯಮವನ್ನು ಟೀಕಿಸಿದ್ದರು. ಸಂಕಷ್ಟದ ಸಮಯದಲ್ಲಿ ಆಟಗಾರನ ಕುಟುಂಬ ಆತನ ಜೊತೆಯಲ್ಲಿರುವುದು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಕೊಹ್ಲಿ ವಿವರಿಸಿದ್ದರು. ಕೊಹ್ಲಿಯ ಈ ಹೇಳಿಕೆಯ ನಂತರ ಬಿಸಿಸಿಐ ತನ್ನ ಈ ನೀತಿಯನ್ನು ಬದಲಾಯಿಸಬಹುದು ಎಂದು ವರದಿಗಳಾಗಿದ್ದವು. ಆದರೆ ಈ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಜಾರಿಗೆ ತಂದ ಕುಟುಂಬ ನೀತಿಯನ್ನು ಬಿಸಿಸಿಐ ಮರುಪರಿಶೀಲಿಸುತ್ತಿದೆ ಎಂಬ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ, ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬಗಳು ನಿರ್ದಿಷ್ಟ ಸಮಯದ ನಂತರ ತಂಡದೊಂದಿಗೆ ಇರಲು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ವಿರಾಟ್ ಕೊಹ್ಲಿ ಅವರ ಟೀಕೆಯ ನಂತರ, ಬಿಸಿಸಿಐ ಈ ನೀತಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಪ್ರಸ್ತುತ ನೀತಿಯೇ ಮುಂದುವರಿಯಲಿದ್ದು, ಸದ್ಯಕ್ಕೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕಾರ್ಯದರ್ಶಿ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
ಹೊಸ ಪ್ರಯಾಣ ನೀತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ ಎಂದು ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಸೈಕಿಯಾ ಹೇಳಿದ್ದು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುವುದರಿಂದ, ಇದರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಅಥವಾ ವಿಭಿನ್ನ ಅಭಿಪ್ರಾಯಗಳು ಬರುವುದು ಸಹಜ. ಆದರೆ ಈ ನೀತಿಯು ಎಲ್ಲಾ ತಂಡದ ಸದಸ್ಯರಿಗೆ, ಆಟಗಾರರು, ತರಬೇತುದಾರರು, ವ್ಯವಸ್ಥಾಪಕರು, ಸಹಾಯಕ ಸಿಬ್ಬಂದಿ ಮತ್ತು ಒಳಗೊಂಡಿರುವ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಎಲ್ಲರ ಹಿತದೃಷ್ಟಿಯಿಂದ ಇದನ್ನು ಜಾರಿಗೆ ತರಲಾಗಿದೆ. ಈ ನೀತಿಯನ್ನು ರಾತ್ರೋರಾತ್ರಿ ರೂಪಿಸಲಾಗಿಲ್ಲ. ಬದಲಿಗೆ ಈ ನೀತಿಯು ದಶಕಗಳಿಂದಲೂ ಜಾರಿಯಲ್ಲಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಂಡದಲ್ಲಿ ಆಡುತ್ತಿದ್ದ ದಿನಗಳಿಂದಲೂ, ಬಹುಶಃ ಅದಕ್ಕೂ ಮುಂಚೆಯೂ ಸಹ ಈ ನಿಯಮ ಜಾರಿಯಲ್ಲಿತ್ತು ಎಂದಿದ್ದಾರೆ.
ಒಬ್ಬಂಟಿಯಾಗಿ ಕುಳಿತು ಅಳಬೇಕ?: ಕುಟುಂಬವನ್ನು ದೂರವಿಟ್ಟ ಬಿಸಿಸಿಐ ವಿರುದ್ಧ ಗುಡುಗಿದ ವಿರಾಟ್ ಕೊಹ್ಲಿ
ಬಿಸಿಸಿಐನ ಹೊಸ ನಿಯಮ ಹೇಳುವುದೇನು?
ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ, ವಿದೇಶ ಪ್ರವಾಸವು 45 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ಆಟಗಾರರ ಕುಟುಂಬಸ್ಥರು ಗರಿಷ್ಠ ಎರಡು ವಾರಗಳವರೆಗೆ ತಂಡದೊಂದಿಗೆ ಇರಲು ಅವಕಾಶವಿರುತ್ತದೆ. ಹೊಸ ನೀತಿಯು ಹಿಂದಿನ ನೀತಿಯ ಪರಿಷ್ಕೃತ ಆವೃತ್ತಿಯಾಗಿದೆ. ತಂಡದ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಈ ಎಲ್ಲಾ ನಿಬಂಧನೆಗಳನ್ನು ಮಾಡಲಾಗಿದೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬಸ್ಥರು ಅವರೊಂದಿಗೆ ಇರಲು ಬಿಸಿಸಿಐ ಅನುಮತಿಸಿದ ಸಮಯವನ್ನು ಹೆಚ್ಚಿಸಿದೆ, ಆದರೆ ವಿಶೇಷ ಸಂದರ್ಭಗಳಲ್ಲಿ ನಿಯಮಗಳನ್ನು ಸಡಿಲಿಸಬಹುದು ಎಂದು ಸೈಕಿಯಾ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Wed, 19 March 25