Rajat Patidar: ಸೋಲಿಗೆ ಚಿನ್ನಸ್ವಾಮಿಯನ್ನೇ ದೂರಿದ್ರ ರಜತ್ ಪಾಟಿದಾರ್?: ಪೋಸ್ಟ್ ಮ್ಯಾಚ್ನಲ್ಲಿ ಏನಂದ್ರು?
Rajat Patidar post match presentation: ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳಲ್ಲಿ ತವರಿನ ತಂಡದ ಅನುಕೂಲಕ್ಕೆಂದು ಅವರಿಗೆ ಸಹಾಯವಾಗುವಂತೆ ಪಿಚ್ ಅನ್ನು ತಯಾರಿಸಲಾಗುತ್ತದೆ. ಆದರೆ, ಈ ಬಾರಿಯ ಸೀಸನ್ನಲ್ಲಿ ಅದು ನಡೆಯುತ್ತಿಲ್ಲ. ಡೆಲ್ಲಿ ವಿರುದ್ಧ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೂಡ, ನಾವು ಅಂದುಕೊಂಡಂತೆ ಬೆಂಗಳೂರು ಪಿಚ್ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಬೆಂಗಳೂರು (ಏ. 11): ಕೆಎಲ್ ರಾಹುಲ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ರಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿತು. ಐಪಿಎಲ್ 18 ನೇ ಸೀಸನ್‌ನ 24 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ಟಾಸ್ ಸೋತ ನಂತರ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕಳಪೆ ಆರಂಭದ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ 13 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.
ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳಲ್ಲಿ ತವರಿನ ತಂಡದ ಅನುಕೂಲಕ್ಕೆಂದು ಅವರಿಗೆ ಸಹಾಯವಾಗುವಂತೆ ಪಿಚ್ ಅನ್ನು ತಯಾರಿಸಲಾಗುತ್ತದೆ. ಆದರೆ, ಈ ಬಾರಿಯ ಸೀಸನ್ನಲ್ಲಿ ಅದು ನಡೆಯುತ್ತಿಲ್ಲ. ಚೆನ್ನೈ, ಕೆಕೆಆರ್, ಆರ್‌ಸಿಬಿ ಸೇರಿದಂತೆ ಹೆಚ್ಚಿನ ತಂಡಗಳು ತವರಿನಲ್ಲೇ ಹೆಚ್ಚು ಪಂದ್ಯವನ್ನು ಈ ಬಾರಿ ಸೋತಿದೆ. ಇದೀಗ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೂಡ, ನಾವು ಅಂದುಕೊಂಡಂತೆ ಬೆಂಗಳೂರು ಪಿಚ್ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
‘‘ನಾವು ವಿಕೆಟ್ ಅನ್ನು ನೋಡಿದ ರೀತಿ ತುಂಬಾ ಭಿನ್ನವಾಗಿತ್ತು, ಇದು ಉತ್ತಮ ಬ್ಯಾಟಿಂಗ್ ವಿಕೆಟ್ ಎಂದು ನಾವು ಭಾವಿಸಿದ್ದೇವೆ, ಆದರೆ ಆ ರೀತಿ ಇರಲಿಲ್ಲ.. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು, ಸರಿಯಾದ ಉದ್ದೇಶವನ್ನು ತೋರಿಸುತ್ತಿದ್ದರು. ಆದರೆ 80 ಕ್ಕೆ 1 ರಿಂದ 90 ಕ್ಕೆ 4 ಕ್ಕೆ ಹೋಗುವುದು ಸ್ವೀಕಾರಾರ್ಹವಲ್ಲ’’ ಎಂದು ಹೇಳಿದ್ದಾರೆ.
RCB vs DC, IPL 2025: ಆರ್‌ಸಿಬಿ ನಾಯಕನಿಂದಲೇ ಕೈ ಜಾರಿತು ಪಂದ್ಯ: ರಜತ್ ಮಾಡಿದ್ರು ದೊಡ್ಡ ಎಡವಟ್ಟು
‘‘ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ, ಆದರೆ ನಾವು ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ. ಅದು ಸಕಾರಾತ್ಮಕವಾಗಿದೆ, ಟಿಮ್ ಡೇವಿಡ್ ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿದ ರೀತಿ ಅದ್ಭುತವಾಗಿತ್ತು, ಪವರ್‌ಪ್ಲೇನಲ್ಲಿ ನಮ್ಮ ಬೌಲಿಂಗ್ ಕೂಡ ಉತ್ತಮವಾಗಿತ್ತು. ನಾವು ನಮ್ಮ ದಾಖಲೆಯ ಬಗ್ಗೆ ಯೋಚಿಸುತ್ತಿಲ್ಲ, ಆದರೆ ನಾವು ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಅದನ್ನು ಸರಳವಾಗಿ ಇಡಬೇಕು’’ ಎಂದು ರಜತ್ ಪಾಡಿದಾರ್ ಹೇಳಿದ್ದಾರೆ.
ಗೆದ್ದ ತಂಡದ ನಾಯಕ ಅಕ್ಷರ್ ಪಟೇಲ್ ಮಾತನಾಡಿ, ‘‘ತಂಡ ಆಡುತ್ತಿರುವ ರೀತಿ ನೋಡಿದರೆ, ಎಲ್ಲರೂ ಆತ್ಮವಿಶ್ವಾಸದಿಂದಿದ್ದಾರೆ ಮತ್ತು ನಾಲ್ಕರಲ್ಲಿ ನಾಲ್ಕನ್ನು ಗೆಲ್ಲುವುದು ಸಂತೋಷದ ಸಂಗತಿ ಆಗಿದೆ. ಆರ್‌ಸಿಬಿ ತಂಡ ವೇಗಿಗಳನ್ನು ಹೆಚ್ಚಾಗಿ ಎದುರಿಸುತ್ತಾರೆ, ಹೀಗಾಗಿ ನಾನು ಸ್ಪಿನ್ ಅನ್ನು ಮೊದಲೇ ಬಳಸುವುದು ಉತ್ತಮ ಆಯ್ಕೆ ಎಂದು ಭಾವಿಸಿದೆ. ಚೆಂಡು ನಿಲ್ಲುತ್ತಿತ್ತು ಮತ್ತು ಸ್ವಲ್ಪ ಬೌನ್ಸ್ ಕೂಡ ಇತ್ತು, ಆದ್ದರಿಂದ ಪವರ್‌ಪ್ಲೇನಲ್ಲಿ ಸ್ಪಿನ್ನರ್‌ಗಳನ್ನು ಹೊಡೆಯುವುದು ಕಷ್ಟ ಎಂದು ನಾನು ಭಾವಿಸಿದೆ. ರಾಹುಲ್‌ನಂತಹ ವ್ಯಕ್ತಿಯನ್ನು ಈ ಕ್ರಮಾಂಕದಲ್ಲಿ ಇರಿಸಿದರೆ ನನ್ನ ಕೆಲಸ ಸುಲಭವಾಗುತ್ತದೆ. ಅವರು ಪ್ರಬುದ್ಧ ಇನ್ನಿಂಗ್ಸ್ ಆಡಿದರು ಮತ್ತು ಚಾಂಪಿಯನ್ಸ್ ಟ್ರೋಫಿಯಿಂದ ಫಾರ್ಮ್ ಅನ್ನು ಮುಂದುವರಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ