Rajat Patidar: ಪ್ಲೇಆಫ್‌ಗೂ ಮುನ್ನ ಆರ್‌ಸಿಬಿಗೆ ಶುರುವಾಯಿತು ಹೊಸ ಟೆನ್ಶನ್
Royal Challengers Bengaluru: ಆರ್‌ಸಿಬಿ ಈಗ ಎಂಟು ಗೆಲುವುಗಳು ಮತ್ತು ನಾಲ್ಕು ಸೋಲುಗಳಿಂದ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇಆಫ್ ಪಂದ್ಯಗಳು ಶುರುವಾಗಲಿದೆ. ಆದರೆ, ಇದಕ್ಕೂ ಮುನ್ನ, ನಾಯಕ ರಜತ್ ಪಾಟಿದಾರ್ ಅವರ ಫಾರ್ಮ್ ಆರ್‌ಸಿಬಿಗೆ ಕಳವಳಕಾರಿಯಾಗಿದೆ.

ಬೆಂಗಳೂರು (ಮೇ. 24): ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ಅಜೇಯ 94 ರನ್‌ಗಳ ಇನ್ನಿಂಗ್ಸ್‌ನ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧ 42 ರನ್‌ಗಳಿಂದ ಸೋಲಿಸಿತು. ಶುಕ್ರವಾರ ನಡೆದ ಈ ಪಂದ್ಯದಲ್ಲಿ ಕಿಶನ್ ಆರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು ಆದರೆ 48 ಎಸೆತಗಳ ಅಜೇಯ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ದೊಡ್ಡ ಸ್ಕೋರ್ ಗಳಿಸಿಕೊಟ್ಟರು. ಆರು ವಿಕೆಟ್‌ಗಳಿಗೆ 231 ರನ್ ಗಳಿಸಿದ ನಂತರ, ಎಸ್ಆರ್ಹೆಚ್ 19.5 ಓವರ್‌ಗಳಲ್ಲಿ ಆರ್‌ಸಿಬಿ ಅನ್ನು 189 ರನ್‌ಗಳಿಗೆ ಆಲೌಟ್ ಮಾಡಿತು.
ಈ ಸೋಲಿನಿಂದಾಗಿ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಿಗೆ ತಲುಪುವುದು ಕಷ್ಟಕರವಾಗಿದೆ. 13 ಪಂದ್ಯಗಳಲ್ಲಿ ಹೈದರಾಬಾದ್ ತಂಡಕ್ಕೆ ಇದು ಐದನೇ ಗೆಲುವು. ಆದರೆ, ಕಮ್ಮಿನ್ಸ್ ಪಡೆ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ, ಅತ್ತ ಆರ್‌ಸಿಬಿ ಈಗ ಎಂಟು ಗೆಲುವುಗಳು ಮತ್ತು ನಾಲ್ಕು ಸೋಲುಗಳಿಂದ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇಆಫ್ ಪಂದ್ಯಗಳು ಶುರುವಾಗಲಿದೆ. ಆದರೆ, ಇದಕ್ಕೂ ಮುನ್ನ, ನಾಯಕ ರಜತ್ ಪಾಟಿದಾರ್ ಅವರ ಫಾರ್ಮ್ ಆರ್‌ಸಿಬಿಗೆ ಕಳವಳಕಾರಿಯಾಗಿದೆ.
ರಜತ್ ಪಾಟಿದಾರ್ ಕಳಪೆ ಫಾರ್ಮ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಈ ಋತುವಿನ ಆರಂಭವನ್ನು ಉತ್ತಮವಾಗಿ ಮಾಡಿಕೊಂಡರು. ಅವರು ಮೊದಲ 6 ಪಂದ್ಯಗಳಲ್ಲಿ 209 ರನ್ ಗಳಿಸಿದರು, 157.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ಇದ್ದಕ್ಕಿದ್ದಂತೆ ಪಾಟಿದಾರ್ ಅವರ ಫಾರ್ಮ್ ಕುಸಿದಿದ್ದು, ಪ್ಲೇಆಫ್‌ಗೂ ಮುನ್ನ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ಬೆಂಗಳೂರು ತಂಡವು ತನ್ನ ಮೊದಲ ಪ್ರಶಸ್ತಿಯನ್ನು ಗೆಲ್ಲಬೇಕಾದರೆ, ನಾಯಕ ಫಾರ್ಮ್‌ನಲ್ಲಿ ಉಳಿಯುವುದು ಮುಖ್ಯವಾಗಿರುತ್ತದೆ. ಮೊದಲ 6 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಮುಂದಿನ 5 ಪಂದ್ಯಗಳಲ್ಲಿ ಅವರು 90.56 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 48 ರನ್‌ಗಳನ್ನು ಗಳಿಸಿದ್ದಾರಷ್ಟೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ 18 ರನ್ ಗಳಿಸಿ ಔಟಾದರು.
Josh Hazlewood: ಸೋಲಿನ ನಡುವೆ ಆರ್‌ಸಿಬಿಗೆ ಸಿಕ್ತು ಬಂಪರ್ ಸುದ್ದಿ: ರಜತ್ ಪಡೆಯಲ್ಲಿ ಸಂಭ್ರಮ
ಆರ್‌ಸಿಬಿ ಟಾಪ್ 2 ರಲ್ಲಿ ಹೇಗೆ ಸ್ಥಾನ ಪಡೆಯಬಹುದು?
ಹೈದರಾಬಾದ್ ವಿರುದ್ಧದ ಸೋಲಿನೊಂದಿಗೆ, ಆರ್‌ಸಿಬಿಗೆ ಅಗ್ರ 2 ರಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಗುಜರಾತ್ ತನ್ನ ಮುಂದಿನ ಪಂದ್ಯವನ್ನು ಗೆದ್ದರೆ, ಪಂಜಾಬ್ ತನ್ನ ಎರಡೂ ಪಂದ್ಯಗಳನ್ನು ಸೋತರೆ ಮತ್ತು ಆರ್‌ಸಿಬಿ ತನ್ನ ಉಳಿದ ಪಂದ್ಯವನ್ನು ಗೆದ್ದರೆ ಇದು ಸಾಧ್ಯವಾಗಲಿದೆ. ಪಂಜಾಬ್ ಒಂದು ಪಂದ್ಯ ಗೆದ್ದರೆ ಮತ್ತು ಆರ್‌ಸಿಬಿ ಕೂಡ ತನ್ನ ಪಂದ್ಯ ಗೆದ್ದರೆ ನಿವ್ವಳ ರನ್ ರೇಟ್ ಮೇಲೆ ನಿರ್ಧಾರವಾಗಲಿದೆ. ಇದೆಲ್ಲದರ ಹೊರತಾಗಿ, ಗುಜರಾತ್ ಟೈಟಾನ್ಸ್ ತನ್ನ ಮುಂದಿನ ಪಂದ್ಯವನ್ನು ಸೋತರೆ ಮತ್ತು ಪಂಜಾಬ್ ಮತ್ತು ಆರ್‌ಸಿಬಿ ಆಯಾ ಪಂದ್ಯಗಳನ್ನು ಗೆದ್ದರೆ, ಜಿಟಿ ಮತ್ತೆ ಟಾಪ್ 2 ರೇಸ್‌ನಿಂದ ಹೊರಗುಳಿಯುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




