
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 67ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಹೆಚ್ 20 ಓವರ್ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 200 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್ಸಿಬಿ ತಂಡ 55 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಅಬ್ಬರ ಮತ್ತು ಶಿಸ್ತುಬದ್ಧ ಬೌಲಿಂಗ್ ದಾಳಿಯೇ ನಮ್ಮ ಸೋಲಿಗೆ ಮುಖ್ಯ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಪಂದ್ಯದ ಗತಿಯನ್ನು ಬದಲಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಎದುರಾಳಿ ತಂಡದ ಮೊದಲ ಐದು ಜನ ಬ್ಯಾಟರ್‌ಗಳು ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಕಲೆಹಾಕಿದ 255 ರನ್‌ಗಳ ಬೃಹತ್ ಮೊತ್ತವೇ ಪಂದ್ಯದ ಫಲಿತಾಂಶವನ್ನು ಬಹುಪಾಲು ನಿರ್ಧರಿಸಿತು ಎಂದು ಪಾಟೀದಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ
ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೂ, ಎದುರಾಳಿ ಬೌಲರ್‌ಗಳು ತಮ್ಮ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು. ಪಿಚ್‌ನಲ್ಲಿ ಸ್ಲೋ ಬೌನ್ಸರ್‌ಗಳು ಕೊಂಚ ಗ್ರಿಪ್ ಆಗುತ್ತಿದ್ದವು. ಇದನ್ನು ಸರಿಯಾಗಿ ಬಳಸಿಕೊಂಡ ಎದುರಾಳಿ ಪಡೆಯ ಐದೂ ಜನ ಬೌಲರ್‌ಗಳು ನಿರಂತರವಾಗಿ ಸ್ಲೋ ಬೌನ್ಸರ್ ಮತ್ತು ಯಾರ್ಕರ್‌ಗಳನ್ನು ಎಸೆಯುವ ಮೂಲಕ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇಂತಹ ಎಸೆತಗಳು ಎಸ್ಆರ್ಹೆಚ್ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಸಾಮಾನ್ಯವಾಗಿ ಪಿಚ್ ಸಂಪೂರ್ಣವಾಗಿ ನಿಧಾನಗತಿಯಾಗಿ ಬದಲಾಗದಿದ್ದರೂ, ಬೌಲರ್‌ಗಳು ಪಿಚ್‌ನ ಮೇಲ್ಮೈಯನ್ನು ಬಳಸಿಕೊಂಡು ಸ್ಲೋ ಎಸೆತಗಳನ್ನು ಹಾಕಿದಾಗ ರನ್ ಗಳಿಸುವುದು ಬ್ಯಾಟರ್‌ಗಳಿಗೆ ತೀವ್ರ ಕಷ್ಟಕರವಾಗಿ ಪರಿಣಮಿಸಿತು.
ನಮ್ಮ ಮೊದಲ ಆದ್ಯತೆ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನದಲ್ಲೇ ಉಳಿಯುವುದಾಗಿತ್ತು. ಆದರೆ ಎದುರಾಳಿಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ನಮಗೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ರಜತ್ ಪಾಟೀದಾರ್ ಎಂದು ಹೇಳಿದ್ದಾರೆ.
ಈ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.