
Ranji Trophy 2022-23: ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳು ಮಂಗಳವಾರದಿಂದ ಆರಂಭಗೊಂಡಿವೆ. ಡೆಹ್ರಾಡೂನ್‌ನ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಎಲೈಟ್ ಗ್ರೂಪ್-ಎ ನಲ್ಲಿನ ಪಂದ್ಯದಲ್ಲಿ ಉತ್ತರಾಖಂಡ್ ತಂಡದ ಬೌಲರ್ ದೀಪಕ್ ಧಾಪೋಲಾ 8 ವಿಕೆಟ್ ಕಬಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಿಮಾಚಲ ಪ್ರದೇಶ್ ತಂಡದ ನಾಯಕ ರಿಷಿ ಧವನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಹಿಮಾಚಲ ಪ್ರದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಉತ್ತರಾಖಂಡ್ ಬೌಲರ್ಗಳು ಯಶಸ್ವಿಯಾದರು.
ಹಿಮಾಚಲ ಪ್ರದೇಶ್ ತಂಡವು ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಉರುಳಿಸಿ ದೀಪಕ್ ಧಾಪೋಲಾ ಮೊದಲ ಯಶಸ್ಸು ತಂದುಕೊಟ್ಟರು. ಮೊದಲ ಯಶಸ್ಸಿನ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಉರುಳಿಸಿದ ದೀಪಕ್ ಹಿಮಾಚಲ ಪ್ರದೇಶ ತಂಡಕ್ಕೆ ಆರಂಭಿಕ ಶಾಕ್ ನೀಡಿದರು. ಪರಿಣಾಮ ಕೇವಲ 26 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಂಕಿತ್ ಕಲ್ಸಿ 26 ರನ್ ಬಾರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಪ್ರಯತ್ನಕ್ಕೆ ಕೈ ಹಾಕಿದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅಭಯ್ ನೇಗಿ 2 ವಿಕೆಟ್ ಪಡೆದರು. ಆ ಬಳಿಕ ಮತ್ತೆ ಬೌಲಿಂಗ್ ಮುಂದುವರೆಸಿದ ದೀಪಕ್ ಧಾಪೋಲಾ 5 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿ ಹಿಮಾಚಲ ತಂಡವನ್ನು ಕೇವಲ 49 ರನ್ಗೆ ಆಲೌಟ್ ಮಾಡಿದರು. ಉತ್ತರಾಖಂಡ್ ತಂಡದ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ದೀಪಕ್ ಧಾಪೋಲ 8.3 ಓವರ್ನಲ್ಲಿ 8 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿರುವ ಉತ್ತರಾಖಂಡ್ ತಂಡದ ಪರ ಆದಿತ್ಯ ತಾರೆ ಅಜೇಯ 91, ಜೀವನ್‌ಜೋತ್ ಸಿಂಗ್ (45), ಅಭಯ್ ನೇಗಿ ಅಜೇಯ 48 ರನ್ ಬಾರಿಸಿದ್ದಾರೆ. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಉತ್ತರಾಖಂಡ್ ತಂಡವು 6 ವಿಕೆಟ್ ನಷ್ಟಕ್ಕೆ 295 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 246 ರನ್ಗಳ ಮುನ್ನಡೆ ಸಾಧಿಸಿದೆ.
ಉತ್ತರಾಖಂಡ್ ಪ್ಲೇಯಿಂಗ್ 11: ಪ್ರಿಯಾಂಶು ಖಂಡೂರಿ , ಜೀವನ್‌ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಸ್ವಪ್ನಿಲ್ ಸಿಂಗ್ , ಆದಿತ್ಯ ತಾರೆ ( ವಿಕೆಟ್ ಕೀಪರ್ ) , ಅಖಿಲ್ ರಾವತ್ , ಅಭಯ್ ನೇಗಿ , ಮಯಾಂಕ್ ಮಿಶ್ರಾ , ಆರ್ಯನ್ ಶರ್ಮಾ , ಅಗ್ರಿಮ್ ತಿವಾರಿ , ದೀಪಕ್ ಧಾಪೋಲಾ
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
ಹಿಮಾಚಲ ಪ್ರದೇಶ್ ಪ್ಲೇಯಿಂಗ್ 11: ರಾಘವ್ ಧವನ್ , ಪ್ರಶಾಂತ್ ಚೋಪ್ರಾ , ಅಂಕಿತ್ ಕಲ್ಸಿ , ಅಮಿತ್ ಕುಮಾರ್ , ಆಕಾಶ್ ವಸಿಷ್ಟ್ , ರಿಷಿ ಧವನ್ (ನಾಯಕ) , ಪ್ರವೀಣ್ ಠಾಕೂರ್ (ವಿಕೆಟ್ ಕೀಪರ್) , ಮಯಾಂಕ್ ದಾಗರ್ , ವೈಭವ್ ಅರೋರಾ , ಗುರ್ವಿಂದರ್ ಸಿಂಗ್ , ಪಂಕಜ್ ಜೈಸ್ವಾಲ್.