T20 World Cup: ಸ್ವಯಂಕೃತ ಅಪರಾಧ; ಟಿ20 ವಿಶ್ವಕಪ್‌ನಿಂದ ಜಡೇಜಾ ಔಟ್! ಆಲ್ರೌಂಡರ್ ಮೇಲೆ ಬಿಸಿಸಿಐ ಕೆಂಡ
T20 World Cup: ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ತಮ್ಮದೇ ಆದ ನಿರ್ಲಕ್ಷ್ಯದಿಂದ ಜಡೇಜಾ T20 ವಿಶ್ವಕಪ್‌ನಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ (BCCI) ರವೀಂದ್ರ ಜಡೇಜಾ (Ravindra Jadeja) ವಿರುದ್ಧ ಕೋಪಗೊಂಡಿದ್ದು, ಮಂಡಳಿಯ ಅಸಮಾಧಾನಕ್ಕೆ ಜಡೇಜಾ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ. ವಾಸ್ತವವಾಗಿ, ಜಡೇಜಾ ಅವರು ಗಾಯದ ಕಾರಣ ಏಷ್ಯಾಕಪ್ (Asia Cup 2022) ಅರ್ಧದಿಂದ ತಂಡವನ್ನು ತೊರೆಯಬೇಕಾಯಿತು. ಇದರಿಂದಾಗಿ ಭಾರತ ಉಳಿದ ಪಂದ್ಯಗಳಲ್ಲಿ ಸೋತು, ಏಷ್ಯಾಕಪ್‌ನಿಂದ ಹೊರಬೀಳಬೇಕಾಯಿತು. ಈಗ ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ತಮ್ಮದೇ ಆದ ನಿರ್ಲಕ್ಷ್ಯದಿಂದ ಜಡೇಜಾ T20 ವಿಶ್ವಕಪ್‌ನಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಇತ್ತೀಚೆಗೆ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಬೇಗ ಗುಣಮುಖರಾಗಲು ಜಡೇಜಾರನ್ನು ದುಬೈನಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವಂತೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿತ್ತು. ಆದರೆ ಇದೆಲ್ಲವನ್ನು ಕಡೆಗಣಿಸಿದ ಜಡೇಜಾ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ.
ಜಾರಿದ ಜಡೇಜಾ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದುಬೈನಲ್ಲಿ ಟೀಮ್ ಇಂಡಿಯಾ ವಾಸ್ತವ ಹೂಡಿದ್ದ ಹೋಟೆಲ್‌ನಲ್ಲಿ, ಜಡೇಜಾ ಅವರಿಗೆ ಕೆಲವು ನೀರು ಆಧಾರಿತ ತರಬೇತಿ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿಲಾಗಿತ್ತು. ಆದರೆ ವೈದ್ಯರು ನೀಡಿದ ಸಲಹೆಯನ್ನು ಕಡೆಗಣಿಸಿದ ಜಡೇಜಾ ನೀರಿನಲ್ಲಿ ಸ್ಕೀ ಬೋರ್ಡ್ ಆಡುವ ವೇಳೆ ಜಾರಿ ಬಿದ್ದು, ಮೊಣಕಾಲು ಇಂಜುರಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ವೈದ್ಯರು ನೀಡಿದ ಸಲಹೆಯಲ್ಲಿ ಈ ಸ್ಕೀ ಬೋರ್ಡ್ ಚಟುವಟಿಕೆ ಇರಲಿಲ್ಲ. ಆದ್ದರಿಂದ ಮಾರ್ಗಸೂಚಿಗಳನ್ನು ಅನುಸರಿಸದ ಜಡೇಜಾ ಅವರ ಮೇಲೆ ಬಿಸಿಸಿಐ ಕೋಪಗೊಂಡಿದೆ ಎಂದು ವರದಿಯಾಗಿದೆ.
ಬಿಸಿಸಿಐ ಅಧಿಕಾರಿಗಳು ಕೆಂಡ
ಏಷ್ಯಾಕಪ್‌ನಿಂದ ಹೊರಬಂದ ಬಳಿಕ ಜಡೇಜಾ ಮುಂಬೈಗೆ ಮರಳಿದ್ದರು. ಅಲ್ಲಿ ಅವರು ಬಿಸಿಸಿಐ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಜಡೇಜಾ ಗಾಯಗೊಂಡ ನಂತರ ಸ್ಕೀ ಬೋರ್ಡ್ ಚಟುವಟಿಕೆ ಬೇಕಿತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ. ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೂ ಮುನ್ನ ಟೀಂ ಇಂಡಿಯಾದ ಪ್ರಮುಖ ಆಟಗಾರ ಸಾಹಸ ಚಟುವಟಿಕೆ ನಡೆಸುವುದು ಅನಿವಾರ್ಯವಾಗಿತ್ತಾ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೆಲವು ಬಿಸಿಸಿಐ ಅಧಿಕಾರಿಗಳು ಕೂಡ ಜಡೇಜಾ ಮೇಲೆ ಅಸಮಾಧಾನಗೊಂಡಿದ್ದಾರೆ.
ಜಡೇಜಾ ಇಲ್ಲದೆ ವಿಶ್ವಕಪ್ ಆಡಲಿದೆ ಟೀಂ ಇಂಡಿಯಾ
ಆದರೆ, ಜಡೇಜಾ ಹೇಗೆ ಗಾಯ ಮಾಡಿಕೊಂಡರು ಎಂಬುದರ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜಡೇಜಾ ಅವರ ಗಾಯದ ಮೇಲೆ ರಾಹುಲ್ ದ್ರಾವಿಡ್ ತಮ್ಮ ಕೂಲ್ ಕಳೆದುಕೊಳ್ಳದಿರುವುದು ಕೂಡ ಆಶ್ಚರ್ಯಕರವಾಗಿದೆ ಎಂದು ಮೂಲಗಳು ಹೇಳುತ್ತಿವೆ. ಈ ಎಲ್ಲದರ ನಡುವೆ ಈಗ ಜಡೇಜಾ ಇಲ್ಲದೆ ಟೀಂ ಇಂಡಿಯಾ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಹೋಗಲಿದೆ ಎಂದು ವರದಿಗಳು ಹರಿದುಬರುತ್ತಿವೆ.
Published On - 3:28 pm, Fri, 9 September 22