ಭರ್ಜರಿ ಸೆಂಚುರಿ ಸಿಡಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ ಜಡೇಜಾ

ಭಾರತ ಟೆಸ್ಟ್ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ, ಮುಂಬರುವ ನ್ಯೂಝಿಲೆಂಡ್ ಪ್ರವಾಸಕ್ಕೂ ಮುನ್ನ ದೇಶಿ ಕ್ರಿಕೆಟ್ ಅಖಾಡದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಟೀಮ್ ಇಂಡಿಯಾ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಛತ್ತೀಸ್‌ಗಢ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಜಡೇಜಾ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಭರ್ಜರಿ ಸೆಂಚುರಿ ಸಿಡಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ ಜಡೇಜಾ
Ravindra Jadeja
Image Credit source: BCCI

Updated on: Oct 13, 2026 | 9:41 AM

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ದೇಶಿ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಝಲಕ್ ತೋರಿಸಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಛತ್ತೀಸ್‌ಗಢ್ ವಿರುದ್ಧದ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಉದ್ಘಾಟನಾ ಪಂದ್ಯದ ಎರಡನೇ ದಿನದಂದು, ಜಡೇಜಾ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನದ 16ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಛತ್ತೀಸ್‌ಗಢ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಶಿಸ್ತುಬದ್ಧ ಆಟವಾಡಿದ ಅವರು 209 ಎಸೆತಗಳನ್ನು ಎದುರಿಸಿ, 7 ಫೋರ್‌ಗಳ ನೆರವಿನಿಂದ 102 ರನ್ ಬಾರಿಸಿ ಮಿಂಚಿದರು.

205 ರನ್‌ಗಳ ಬೃಹತ್ ಜೊತೆಯಾಟ:

ಸೌರಾಷ್ಟ್ರ ತಂಡವು 151 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಜಡೇಜಾ, ಶತಕವೀರ ಪ್ರೇರಕ್ ಮಂಕಡ್ (129 ರನ್) ಅವರೊಂದಿಗೆ ಸೇರಿ 5ನೇ ವಿಕೆಟ್‌ಗೆ 205 ರನ್‌ಗಳ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು. ಈ ಅದ್ಭುತ ರಕ್ಷಣಾತ್ಮಕ ಆಟದಿಂದಾಗಿ ಸೌರಾಷ್ಟ್ರ ತನ್ನ ಮೊದಲ ಇನಿಂಗ್ಸ್‌ನಲ್ಲಿ 392 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

‘ಜಡೇಜಾ’ಗೆ ವಿಕೆಟ್ ಒಪ್ಪಿಸಿದ ಜಡೇಜಾ:

ಶತಕ ಪೂರೈಸಿದ ಬೆನ್ನಲ್ಲೇ ರವೀಂದ್ರ ಜಡೇಜಾ ಅವರ ಇನಿಂಗ್ಸ್ ಒಂದು ರೋಚಕ ತಿರುವು ಪಡೆದುಕೊಂಡಿತು. ಸೌರಾಷ್ಟ್ರ ತಂಡದಲ್ಲಿ ಜಡೇಜಾ ಅವರ ಸುದೀರ್ಘ ಕಾಲದ ಸಹ ಆಟಗಾರನಾಗಿದ್ದ, ಪ್ರಸ್ತುತ ಛತ್ತೀಸ್‌ಗಢ್ ತಂಡವನ್ನು ಪ್ರತಿನಿಧಿಸುತ್ತಿರುವ ಎಡಗೈ ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜಾ ಅವರೇ ರವೀಂದ್ರ ಜಡೇಜಾಗೆ ‘ಕಾಟ್ ಅಂಡ್ ಬೌಲ್ಡ್’ ಮಾಡುವ ಮೂಲಕ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು.

ನ್ಯೂಝಿಲೆಂಡ್ ಟೆಸ್ಟ್ ಸರಣಿಗೆ ಭರ್ಜರಿ ತಾಲೀಮು:

ರವೀಂದ್ರ ಜಡೇಜಾ ಅವರ ಈ ಶತಕದ ಪ್ರದರ್ಶನವು ಭಾರತ ತಂಡದ ಮುಂಬರುವ ಅಂತಾರಾಷ್ಟ್ರೀಯ ಸರಣಿಗೆ ಅತ್ಯುತ್ತಮ ಸಿದ್ಧತೆಯಾಗಿದೆ. ಮುಂದಿನ ತಿಂಗಳು (ನವೆಂಬರ್ 19, 2026 ರಿಂದ) ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಜಡೇಜಾ ಸಜ್ಜಾಗುತ್ತಿದ್ದು, ಅವರ ಈ ಕೆಂಪು ಚೆಂಡಿನ ಕ್ರಿಕೆಟ್ ಫಾರ್ಮ್ ಟೀಮ್ ಇಂಡಿಯಾ ಪಾಲಿಗೆ ಶುಭ ಸಂಕೇತ ಎಂದೇ ಹೇಳಬಹುದು.

ಸೌರಾಷ್ಟ್ರ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) ಪ್ರೇರಕ್ ಮಂಕಡ್ , ಸಮ್ಮರ್ ಗುಜ್ಜರ್ ,
ಅರ್ಪಿತ್ ವಾಸವಾಡ , ರವೀಂದ್ರ ಜಡೇಜಾ , ಜೇ ಗೋಹಿಲ್ , ಚಿರಾಗ್ ಜಾನಿ , ಜಯದೇವ್ ಉನದ್ಕತ್ (ನಾಯಕ) ,
ಚೇತನ್ ಸಕರಿಯಾ , ಅಂಕುರ್ ಪನ್ವಾರ್ , ಅರ್ಥ್ ಯಾದವ್.

ಇದನ್ನೂ ಓದಿ: ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ತಾರಾ ನೊರ್ರಿಸ್ ಎಂಟ್ರಿ

ಛತ್ತೀಸ್‌ಗಢ್ ಪ್ಲೇಯಿಂಗ್ 11: ಅನುಜ್ ತಿವಾರಿ (ನಾಯಕ) , ಮಾಯಾಂಕ್ ವರ್ಮಾ (ವಿಕೆಟ್ ಕೀಪರ್) , ಆಯುಷ್ ಪಾಂಡೆ ,
ಸಾನಿಧ್ಯ ಹುರ್ಕತ್ , ಅಮನ್‌ದೀಪ್ ಖರೆ , ಅಜಯ್ ಜಾದವ್ ಮಂಡಲ್ , ವಿಕಲ್ಪ್ ತಿವಾರಿ , ಧರ್ಮೇಂದ್ರಸಿಂಹ ಜಡೇಜಾ , ದೇವ್ ಆದಿತ್ಯ ಸಿಂಗ್ , ಸಂದೀಪ್ ವಾರಿಯರ್ , ರುದ್ರ ಪ್ರತಾಪ್ ದೇಹಾರಿ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us