ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ತಾರಾ ನೊರ್ರಿಸ್ ಎಂಟ್ರಿ
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಮೊದಲ ಆಟಗಾರ್ತಿಯ ಟ್ರೇಡ್ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂಬರುವ 2027ರ ಸೀಸನ್‌ಗಾಗಿ ಯುಪಿ ವಾರಿಯರ್ಸ್ ತಂಡದಿಂದ ಅಮೆರಿಕನ್ ಎಡಗೈ ಬೌಲರ್ನನ್ನು ಮುಂಬೈ ಇಂಡಿಯನ್ಸ್ 10 ಲಕ್ಷ ರೂಪಾಯಿಗಳ ಒಪ್ಪಂದದೊಂದಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಬಿಗ್ ಟ್ರೇಡ್ ಮಾಡಿಕೊಂಡಿದೆ. ಅದು ಸಹ ಅಮೆರಿಕನ್ ಆಟಗಾರ್ತಿ ತಾರಾ ನೊರ್ರಿಸ್ ಅವರನ್ನು ಎಂಬುದು ವಿಶೇಷ. ಕಳೆದ ಸೀಸನ್‌ನಲ್ಲಿ ಯುಪಿ ವಾರಿಯರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ನೊರ್ರಿಸ್ ಅವರನ್ನು ಟ್ರೇಡಿಂಗ್ ಮೂಲಕ 10 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿದೆ. ವಿಶೇಷ ಎಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ತಂಡ ಆಟಗಾರ್ತಿಯೊಬ್ಬರನ್ನು ಟ್ರೇಡ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲು.
ಮುಂಬೈ ತಂಡದ ಮಾಸ್ಟರ್ ಪ್ಲ್ಯಾನ್:
ತಾರಾ ನೊರ್ರಿಸ್ ಅವರ ಸೇರ್ಪಡೆಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಯಮಾವಳಿಗಳ ಅನ್ವಯ ಒಂದು ವಿಶೇಷ ಲಾಭ ಸಿಗಲಿದೆ. ನೊರ್ರಿಸ್ ಅವರು ಸಹವರ್ತಿ ದೇಶವಾದ ಅಮೆರಿಕವನ್ನು ಪ್ರತಿನಿಧಿಸುವುದರಿಂದ, ಮುಂಬೈ ತಂಡವು ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ನಾಲ್ಕರ ಬದಲಿಗೆ ಐದು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸುವ ಸುವರ್ಣ ಅವಕಾಶ ಪಡೆಯಲಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮದ ಪ್ರಕಾರ, ಯಾವುದೇ ಒಂದು ಪಂದ್ಯದಲ್ಲಿ ಪ್ರತಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿಗರಿಷ್ಠ 4 ವಿದೇಶಿ ಆಟಗಾರ್ತಿಯರನ್ನು ಮಾತ್ರ ಆಡಿಸಲು ಅವಕಾಶವಿರುತ್ತದೆ. ಈ 4 ಆಟಗಾರ್ತಿಯರು ಐಸಿಸಿಯ ಪೂರ್ಣಾವಧಿ ಸದಸ್ಯ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್ ಮುಂತಾದ ಬಲಿಷ್ಠ ಟೆಸ್ಟ್ ಆಡುವ ದೇಶಗಳಿಗೆ ಸೇರಿರುತ್ತಾರೆ.
ಇದೇ ವೇಳೆ ಒಂದು ತಂಡವು ಐಸಿಸಿಯ ಅಸೋಸಿಯೇಟ್ ದೇಶದ ಆಟಗಾರ್ತಿಯನ್ನು ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಿದರೆ, ಆಕೆಯನ್ನು ಸಾಮಾನ್ಯ ವಿದೇಶಿ ಕೋಟಾದಡಿ (4 ಆಟಗಾರ್ತಿಯರ ಮಿತಿ) ಪರಿಗಣಿಸಲಾಗುವುದಿಲ್ಲ. ಅಂದರೆ, ತಂಡವು ತನ್ನ ಎಂದಿನ 4 ಪ್ರಮುಖ ವಿದೇಶಿ ಆಟಗಾರ್ತಿಯರ ಜೊತೆಗೆ, ಈ ಅಸೋಸಿಯೇಟ್ ಆಟಗಾರ್ತಿಯನ್ನೂ ಸೇರಿಸಿ ಒಟ್ಟು 5 ವಿದೇಶಿ ಆಟಗಾರ್ತಿಯರನ್ನು ಮೈದಾನಕ್ಕಿಳಿಸಲು ಅವಕಾಶವಿದೆ. ಅದರಂತೆ ಮುಂದಿನ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತನ್ನ ಪ್ಲೇಯಿಂಗ್ 11 ನಲ್ಲಿ 5 ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದು.
ಬದಲಾದ ಪರ್ಸ್ ಮೊತ್ತ:
ಅಕ್ಟೋಬರ್ 28, 2026 ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಮುನ್ನ ಈ ಟ್ರೇಡ್ ನಡೆದಿದ್ದು, ಎರಡೂ ತಂಡಗಳ ಪರ್ಸ್ ಮೊತ್ತದಲ್ಲಿ ಬದಲಾವಣೆಯಾಗಿದೆ:
- ಮುಂಬೈ ಇಂಡಿಯನ್ಸ್: ಈ ಟ್ರೇಡ್‌ನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ವಿದೇಶಿ ಆಟಗಾರ್ತಿಯರ ಕೋಟಾ ಸಂಪೂರ್ಣ ಭರ್ತಿಯಾಗಿದೆ. ಈಗ ತಂಡದ ಬಳಿ 90 ಲಕ್ಷ ರೂಪಾಯಿ ಬಾಕಿ ಉಳಿದಿದ್ದು, ಹರಾಜಿನಲ್ಲಿ ಉಳಿದ 6 ಸ್ಥಾನಗಳನ್ನು ತುಂಬಿಸಿಕೊಳ್ಳಬೇಕಿದೆ.
- ಯುಪಿ ವಾರಿಯರ್ಸ್: ತಾರಾ ನೊರ್ರಿಸ್ ಅವರನ್ನು ಬಿಟ್ಟುಕೊಟ್ಟ ಬಳಿಕ ಯುಪಿ ವಾರಿಯರ್ಸ್ ತಂಡದ ಪರ್ಸ್ ಮೊತ್ತ 3.75 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹರಾಜಿನಲ್ಲಿ ತಂಡವು 8 ಸ್ಥಾನಗಳನ್ನು ಭರ್ತಿ ಮಾಡಲು ಈ ಹಣವನ್ನು ಬಳಸಿಕೊಳ್ಳಬಹುದು.
ಕೋಚ್ ಜೊತೆ ಮತ್ತೆ ಒಂದಾದ ತಾರಾ ನೊರ್ರಿಸ್:
ಈ ಟ್ರೇಡ್ ಮುಂಬೈ ಇಂಡಿಯನ್ಸ್ ತಂಡದ ಹೊಸ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ಮತ್ತು ತಾರಾ ನೊರ್ರಿಸ್ ಅವರನ್ನು ಮತ್ತೆ ಒಂದಾಗಿಸಿದೆ. ಈ ಹಿಂದೆ 2021ರ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಸದರ್ನ್ ಬ್ರೇವ್ಸ್ ತಂಡದಲ್ಲಿದ್ದಾಗ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಲ್ಯೂಕ್ ವಿಲಿಯಮ್ಸ್ ಶಿಫಾರಸ್ಸಿನ ಮೇರೆಗೆ ಮುಂಬೈ ಇಂಡಿಯನ್ಸ್ ತಾರಾ ನೊರ್ರಿಸ್ ಅವರನ್ನು ಟ್ರೇಡ್ ಮಾಡಿಕೊಂಡಿದೆ.
WPL ನಲ್ಲಿ ನೊರ್ರಿಸ್ ಪ್ರದರ್ಶನ:
2023ರ ವುಮೆನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದ ತಾರಾ ನೊರ್ರಿಸ್, WPL ಇತಿಹಾಸದಲ್ಲೇ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದಾದ ಬಳಿಕ ಅವರು ಯುಪಿ ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: WPL 2027: ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ
ಇದೇ ವೇಳೆ, ‘ದಿ ಹಂಡ್ರೆಡ್’ ಲೀಗ್‌ನಲ್ಲಿ ‘ಎಂಐ ಲಂಡನ್’ ತಂಡದ ಪರ ಕಣಕ್ಕಿಳಿದಿದ್ದ ತಾರಾ ನೊರ್ರಿಸ್ ಅವರನ್ನು ಇದೀಗ ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಮಾಸ್ಟರ್ ಪ್ಲ್ಯಾನ್ ಮುಂಬರುವ ಸೀಸನ್‌ನಲ್ಲಿ ಹೇಗೆ ವರ್ಕ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




