
17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದು 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಐಪಿಎಲ್‌ನಲ್ಲಿ ಸತತ ಎರಡು ಟ್ರೋಫಿ ಗೆದ್ದ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಯ ಬೆನ್ನಲ್ಲೇ, ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಆರ್‌ಸಿಬಿ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟು ಟೀಕಾಗಾರನೆಂದೇ ಗುರುತಿಸಿಕೊಂಡಿದ್ದ ಅಂಬಾಟಿ ರಾಯುಡು, ಇದೀಗ ಆರ್‌ಸಿಬಿ ತಂಡವನ್ನು ‘ಬಿಗ್ ಬಾಯ್ಸ್’ ಪಡೆ ಎಂದು ಹೊಗಳಿದ್ದಾರೆ. ಅಂದರೆ ಸಾಟಿಯಿಲ್ಲದ ಸರದಾರರು ಎಂದರ್ಥ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯುಡು, ಆರ್‌ಸಿಬಿ ತಂಡದ ಈ ಅದ್ಭುತ ಪರಿವರ್ತನೆಯನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
“ಈ ಹಿಂದೆ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರ ಮೇಲೆ ಅವಲಂಭಿತವಾಗಿತ್ತು. ಆದರೆ ಇದೀಗ ತಂಡ ಬದಲಾಗಿದೆ. ಒಂದು ತಂಡವಾಗಿ ಹೋರಾಡುತ್ತಿದ್ದಾರೆ”.
“ಆರ್‌ಸಿಬಿ ತಂಡದ ಪ್ರದರ್ಶನವನ್ನು ಗಮನಿಸಿದರೆ, ಅವರು ಐಪಿಎಲ್ನ ಬಿಗ್ ಬಾಯ್ಸ್ ಎಂಬುದರಲ್ಲಿ ಸಂಶಯವೇ ಇಲ್ಲ. ಪ್ರಸ್ತುತ ಇರುವ ತಂಡವು ಈ ಹಿಂದಿನ ಚಾಂಪಿಯನ್ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳಿಗಿಂತ ಬಲಿಷ್ಠವಾಗಿದೆ” ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.
“ಅಷ್ಟೇ ಅಲ್ಲದೆ ಇದು ಆರ್‌ಸಿಬಿ ತಂಡದ ಯುಗ. ಈ ಯುಗದಲ್ಲಿ ಅವರು ಈ ಹಿಂದಿನ ಚಾಂಪಿಯನ್ ತಂಡಗಳಿಗೆ ಸಮನಾದ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಇರುವ ಆರ್‌ಸಿಬಿ ತಂಡವು ಎಷ್ಟು ಬಲಿಷ್ಠವಾಗಿದೆ ಎಂದರೆ, ಬೇರೆ ಯಾವುದೇ ತಂಡಗಳು ಅವರ ಹತ್ತಿರವೂ ಬರಲು ಸಾಧ್ಯವಿಲ್ಲ” ಎಂದು ರಾಯುಡು ಹೇಳಿದ್ದಾರೆ.
ಇದೀಗ ಅಂಬಾಟಿ ರಾಯುಡು ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಗೆ ರಾಯುಡು ಅವರನ್ನು ಆರ್‌ಸಿಬಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಏಕೆಂದರೆ ಅಂಬಾಟಿ ರಾಯುಡು ಈ ಹಿಂದೆ ಆರ್‌ಸಿಬಿ ತಂಡವನ್ನು ಲೇವಡಿ ಮಾಡಿದ್ದರು. ಅಲ್ಲದೆ ಅವಕಾಶ ಸಿಕ್ಕಾಗೆಲ್ಲಾ ಆರ್‌ಸಿಬಿ ತಂಡವನ್ನು ಟೀಕಿಸಿದ್ದರು. ಇದಕ್ಕೆ ಸಾಕ್ಷಿ ಅವರ ಈ ಹಿಂದಿನ ಹೇಳಿಕೆಗಳು…
ಇದನ್ನೂ ಓದಿ: Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದಲಾಗಿದೆ. ಈ ಹಿಂದೆ ಟೀಕಿಸಿದ ಅಂಬಾಟಿ ರಾಯುಡುವೇ, “ಪ್ರಸ್ತುತ ಇರುವ ಆರ್‌ಸಿಬಿ ತಂಡವು ಎಷ್ಟು ಬಲಿಷ್ಠವಾಗಿದೆ ಎಂದರೆ, ಬೇರೆ ಯಾವುದೇ ತಂಡಗಳು ಅವರ ಹತ್ತಿರವೂ ಬರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Published On - 12:31 pm, Mon, 1 June 26