
ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಮ್ಯಾಟ್ ರೆನ್‌ಶಾ ಮತ್ತು ನಾಥನ್ ಲಿಯಾನ್ 9ನೇ ವಿಕೆಟ್‌ಗೆ 134 ರನ್‌ಗಳ ಬೃಹತ್ ಜೊತೆಯಾಟವಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಭರ್ಜರಿ ಜೊತೆಯಾಟದೊಂದಿಗೆ ರೆನ್‌ಶಾ-ಲಿಯಾನ್ ಜೋಡಿ ವಿದೇಶಿ ಮಣ್ಣಿನಲ್ಲಿ 9ನೇ ವಿಕೆಟ್‌ಗೆ ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಕಲೆಹಾಕಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಂದು ಹಂತದಲ್ಲಿ 230 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಈ ಜೋಡಿಯು ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ರಕ್ಷಿಸಿತು. ಇವರ ಸಾಹಸದಿಂದಾಗಿ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 390 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
28 ವರ್ಷಗಳ ಹಳೆಯ ದಾಖಲೆ ಉಡೀಸ್: ಈ ಜೋಡಿಯು 134 ರನ್‌ಗಳನ್ನು ಕಲೆಹಾಕುವ ಮೂಲಕ, ಡರ್ಬನ್ ಮೈದಾನದಲ್ಲಿ 1998ರಲ್ಲಿ ಸೌತ್ ಆಫ್ರಿಕಾದ ಮಾರ್ಕ್ ಬೌಷರ್ ಮತ್ತು ಫ್ಯಾನಿ ಡಿ ವಿಲಿಯರ್ಸ್ ಬರೆದಿದ್ದ 86 ರನ್‌ಗಳ 9ನೇ ವಿಕೆಟ್ ಜೊತೆಯಾಟದ ದಾಖಲೆಯನ್ನು ಮುರಿದರು.
ರೆನ್‌ಶಾ ಮ್ಯಾರಥಾನ್ ಇನಿಂಗ್ಸ್: ಮೊದಲ ದಿನದಾಟದಲ್ಲಿ 5ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ ಎಡಗೈ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾ, 397 ಎಸೆತಗಳನ್ನು ಎದುರಿಸಿ ಭರ್ಜರಿ 190 ರನ್ ಸಿಡಿಸಿದರು. ಇದು ಕಿಂಗ್ಸ್‌ಮೀಡ್ ಮೈದಾನದಲ್ಲಿ 5ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಒಬ್ಬರು ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ನಾಥನ್ ಲಿಯಾನ್ ಅದ್ಭುತ ಸಾಥ್: ಕೆಳಕ್ರಮಾಂಕದಲ್ಲಿ ರೆನ್‌ಶಾಗೆ ಅತ್ಯುತ್ತಮ ಬೆಂಬಲ ನೀಡಿದ ಸ್ಪಿನ್ನರ್ ನಾಥನ್ ಲಿಯಾನ್, 92 ಎಸೆತಗಳನ್ನು ಎದುರಿಸಿ 27 ರನ್ ಗಳಿಸಿದರು. ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗುವ ಮುನ್ನ ಇವರು ಸೌತ್ ಆಫ್ರಿಕಾದ ಬೌಲರ್‌ಗಳನ್ನು ತೀವ್ರವಾಗಿ ಕಾಡಿದ್ದರು.
ಸಾರ್ವಕಾಲಿಕ 3ನೇ ಅತ್ಯುತ್ತಮ ಸಾಧನೆ: ಆಸ್ಟ್ರೇಲಿಯಾದ 149 ವರ್ಷಗಳ ಸುದೀರ್ಘ ಟೆಸ್ಟ್ ಇತಿಹಾಸದಲ್ಲೇ 9ನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ದಾಖಲಾದ 3ನೇ ಅತಿ ದೊಡ್ಡ ಜೊತೆಯಾಟ ಇದಾಗಿದೆ.
ಇದನ್ನೂ ಓದಿ: ಕೆನಡಾ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಆಸ್ಟ್ರೇಲಿಯಾವನ್ನು 390 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ, ಎರಡನೇ ದಿನದ ಆಟದ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಮಂದಬೆಳಕಿನ ಕಾರಣ ಪಂದ್ಯವನ್ನು ಬೇಗನೇ ನಿಲ್ಲಿಸಲಾಗಿದ್ದು, ಆತಿಥೇಯ ತಂಡ ಸದ್ಯ 363 ರನ್‌ಗಳ ಹಿನ್ನಡೆಯಲ್ಲಿದೆ.