Rishabh Pant accident: ಅತೀ ವೇಗದ ಚಾಲನೆ.. 2 ಬಾರಿ ದಂಡ.. ಆದ್ರೂ ಎಚ್ಚೆತ್ತುಕೊಳ್ಳಲಿಲ್ಲ ಪಂತ್!
Rishabh Pant accident: ಪಂತ್ ಇದೇ ಮೊದಲ ಬಾರಿಗೆ ಅತೀ ವೇಗದಲ್ಲಿ ಕಾರ್ ಓಡಿಸಿಲ್ಲ. ಈ ಹಿಂದೆ ಎರಡು ಬಾರಿ ಅತೀ ವೇಗದ ಚಾಲನೆಯಿಂದಲೇ ಪಂತ್ಗೆ ದಂಡದ ಬರೆ ಬಿದ್ದಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಈ ಯುವ ಕ್ರಿಕೆಟರ್ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸುದ್ದಿಯಾಗಿದೆ. ಆದರೆ ಪೊಲೀಸರ ಹೇಳಿಕೆಯ ಪ್ರಕಾರ ಪಂತ್ ಅವರ ಅತಿ ವೇಗವೇ ಈ ಅಪಘಾತಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ವಾಸ್ತವವಾಗಿ ಪಂತ್ ತನ್ನ ಅತಿಯಾದ ವೇಗದ ಡ್ರೈವಿಂಗ್ನಿಂದ ಎಡವಟ್ಟು ಮಾಡಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ತನ್ನ ಅತಿ ವೇಗಕ್ಕೆ ರಿಷಬ್ ಪಂತ್ ಎರಡೆರಡು ಬಾರಿ ಸಾರಿಗೆ ಇಲಾಖೆಯಿಂದ ದಂಡದ ಬರೆ ಕೂಡ ಎಳೆಸಿಕೊಂಡಿದ್ದಾರೆ. ಆದರೆ ಸಾರಿಗೆ ಇಲಾಖೆಯ ಎಚ್ಚರಿಕೆಗೆ ಸೊಪ್ಪು ಹಾಕದ ಪಂತ್ ಇದೀಗ ಆಸ್ಪತ್ರೆ ಬೆಡ್ ಮೇಲೆ ಕಾಲ ಕಳೆಯುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಅತಿ ವೇಗಕ್ಕೆ ದಂಡದ ನೋಟೀಸ್ ಪಡೆದಿರುವ ಪಂತ್ ಇದುವರೆಗೂ ದಂಡದ ಶುಲ್ಕವನ್ನು ಕಟ್ಟಿಲ್ಲ ಎಂದು ತಿಳಿದು ಬಂದಿದೆ.
ಪಂತ್, ಕಾರನ್ನು ಅತಿ ವೇಗವಾಗಿ ಓಡಿಸುತ್ತಾರೆ ಎಂಬುದನ್ನು ಈ ಹಿಂದೆಯೇ ಅಂದರೆ ಮೂರು ವರ್ಷಗಳ ಹಿಂದೆಯೇ ಟೀಂ ಇಂಡಿಯಾದ ಸಹ ಕ್ರಿಕೆಟಿಗ ಶಿಖರ್ ಧವನ್ ಹೇಳಿದ್ದರು. ಧವನ್ ಸಲಹೆ ನೀಡಿದ್ದ ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ, ಇಬ್ಬರೂ ಆಟಗಾರರು ಡೆಲ್ಲಿ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಪರಸ್ಪರ ಈ ಆಟಗಾರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಿಷಬ್ ಪಂತ್, ನನಗೆ ನೀವು ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಶಿಖರ್ ಧವನ್ ಬಳಿ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿಖರ್ ಧವನ್ ಆರಾಮವಾಗಿ ವಾಹನ ಚಲಾಯಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಶಿಖರ್ ಧವನ್ ಸಲಹೆಯಂತೆ ನಡೆದುಕೊಂಡಿದ್ದರೆ ಇಂದು ಇಂತಹ ಅವಘಡ ಸಂಭವಿಸುತ್ತಿರಲಿಲ್ಲ.
ಧವನ್, ಪಂತ್ಗೆ ಈ ಸಲಹೆ ನೀಡಿದ್ದು ಇಂದು ನಿನ್ನೆಯಲ್ಲ.. ಬರೋಬ್ಬರಿ ಮೂರು ವರ್ಷಗಳ ಹಿಂದೆ. ಆವತ್ತು ಪಂತ್ ಪ್ರತಿನಿಧಿಸುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ಸಮಯದಲ್ಲೇ ಧವನ್, ಪಂತ್ಗೆ ಈ ಸಲಹೆ ನೀಡಿದ್ರು. ಪಂತ್ ಕಾರ್ ಅನ್ನು ಅತೀ ವೇಗವಾಗಿ ಓಡಿಸುವ ವಿಚಾರ ಟೀಂ ಇಂಡಿಯಾ ಕ್ರಿಕೆಟಿಗರಿಗೂ ಗೊತ್ತಿತ್ತು. ಇದೇ ಕಾರಣಕ್ಕೆ ಧವನ್ ಅಷ್ಟೇ ಅಲ್ಲ. ಸ್ವತಃ ಧೋನಿಯೂ ಕಾರ್ ನಿಧಾನವಾಗಿ ಓಡಿಸುವಂತೆ ಸಲಹೆ ನೀಡ್ತಿದ್ರು ಎನ್ನಲಾಗಿದೆ. ಆದ್ರಿವತ್ತು ಪಂತ್, ತಮ್ಮ ಹಳೆ ಚಾಳಿಯನ್ನು ಮುಂದುವರಿಸಿ ಮಾಡಬಾರದ ಅನಾಹುತ ಮಾಡಿಕೊಂಡಿದ್ದಾರೆ.
ಎರಡು ಬಾರಿಯೂ ದಂಡ ಕಟ್ಟದೇ ಉಡಾಫೆ ತೋರಿ ಪಂತ್!
ಪಂತ್ ಇದೇ ಮೊದಲ ಬಾರಿಗೆ ಅತೀ ವೇಗದಲ್ಲಿ ಕಾರ್ ಓಡಿಸಿಲ್ಲ. ಈ ಹಿಂದೆ ಎರಡು ಬಾರಿ ಅತೀ ವೇಗದ ಚಾಲನೆಯಿಂದಲೇ ಪಂತ್ಗೆ ದಂಡದ ಬರೆ ಬಿದ್ದಿದೆ. ಇದೇ ವರ್ಷ ಫೆಬ್ರವರಿ 22ರಂದು ರಾತ್ರಿ 11.30ಕ್ಕೆ ಪಂತ್ ಉತ್ತರ ಪ್ರದೇಶದಲ್ಲಿ ಅತೀವೇಗದ ಚಾಲನೆ ಮಾಡಿದ್ರು. ಪಂತ್ ವೇಗದ ಚಾಲನೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಯುಪಿ ಸಂಚಾರಿ ಪೊಲೀಸರು ಪಂತ್ಗೆ 2000 ದಂಡ ಕಟ್ಟುವಂತೆ ನೊಟೀಸ್ ಕಳುಹಿಸಿದ್ರು. ಬಳಿಕ ಮೇ 25 ಸಂಜೆ 5 ಗಂಟೆಗೂ ಪಂತ್ ಇದೇ ರೀತಿ ಮಿತಿ ಮೀರಿದ ವೇಗದಿಂದ ಕಾರ್ ಚಲಾಯಿಸಿದ್ರು. ಆಗಲೂ ಯುಪಿ ಪೊಲೀಸರು 2000 ದಂಡ ಕಟ್ಟುವಂತೆ ಪಂತ್ಗೆ ನೊಟೀಸ್ ಕಳುಹಿಸಿದ್ರು. ಆದ್ರೆ ಎರಡು ಬಾರಿಯೂ ಪಂತ್ ದಂಡ ಕಟ್ಟದೇ ಉಡಾಫೆ ತೋರಿಸಿದ್ದಾರೆ. ತಾನು ಸಾಗುತ್ತಿರುವ ಹಾದಿ ಸರಿಯಿಲ್ಲ ಅನ್ನೋ ಸೂಚನೆ ಪಂತ್ಗೆ ಪದೆ ಪದೆ ಸಿಕ್ಕಿದೆ. ಆದ್ರೂ ಎಚ್ಚೆತ್ತುಕೊಳ್ಳದ ಪಂತ್, ಕ್ರಿಕೆಟ್ ಬದುಕಿಗೆ ಕಂಟಕ ತಂದುಕೊಂಡಿದ್ದಾರೆ.
ಸ್ನೇಹಿತನ ಮಾತನ್ನು ಧಿಕ್ಕರಿಸಿ ಮನೆಯತ್ತ ಹೊರಟಿದ್ದ ಪಂತ್!
ದೆಹಲಿಯಲ್ಲಿ ಮಧ್ಯ ರಾತ್ರಿ 2 ಗಂಟೆಗೆ ಪಂತ್ ಉತ್ತರಾಖಂಡನ ರೂರ್ಕಿಗೆ ತೆರಳಲು ಸಜ್ಜಾಗಿದ್ದಾರೆ. ಈ ವೇಳೆ ಪಂತ್ ಆತ್ಮೀಯ ಸ್ನೇಹಿತ ಮುಂಜಾನೆ ಹೋಗು ಎಂದಿದ್ದಾನೆ. ಆದ್ರೆ ಪಂತ್ ಆತನ ಮಾತನ್ನೂ ಧಿಕ್ಕರಿಸಿ, ಅಮ್ಮನಿಗೆ ಸರ್ಪ್ರೈಸ್ ಕೊಡಲು ಅತೀ ವೇಗದಲ್ಲಿ ಕಾರ್ ಚಲಾಯಿಸಿಕೊಂಡು ಬಂದಿದ್ದಾರೆ. ಇದೇ ಪಂತ್ಗೆ ಮುಳುವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sat, 31 December 22