Rishabh Pant accident: ‘ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ’; ಡೆಹ್ರಾಡೂನ್ ಆಸ್ಪತ್ರೆಯಲ್ಲೇ ರಿಷಬ್ ಪಂತ್ಗೆ ಚಿಕಿತ್ಸೆ
Rishabh Pant accident: ಸದ್ಯಕ್ಕೆ ಪಂತ್ಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಪಂತ್ ಹೇಳಿಕೆಯ ಪ್ರಕಾರ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ’ ಎಂದಿದ್ದಾರೆ.
ಭೀಕರ ಅಪಘಾತದಲ್ಲಿ ಆಸ್ಪತ್ರೆ ಸೇರಿರುವ ರಿಷಬ್ ಪಂತ್ (Rishabh Pant) ಚೇತರಿಕೆಗೆ ವಿಶ್ವದಾದ್ಯಂತ ಕ್ರಿಕೆಟಿಗರು ಹಾರೈಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳಂತೂ ಪಂತ್ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್ಕೀಯಲ್ಲಿರುವ ತನ್ನ ಮನೆಗೆ ರಿಷಭ್ ಪಂತ್ ತನ್ನ ಬೆನ್ಝ್ ಕಾರ್ನಲ್ಲಿ ಬರ್ತಿದ್ರು. ಈ ವೇಳೆ ಪಂತ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ದೆಹಲಿ-ಡೆಹ್ರಾಡೂನ್ ಹೈವೇನಲ್ಲಿ ರಭಸವಾಗಿ ಬಂದ ಕಾರು ಡಿವೈಡರ್ಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದ್ದಲ್ಲದೆ, ಕಾರಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಅಷ್ಟರಲ್ಲಾಗಲೇ ಕಾರಿನಿಂದ ಹೊರಬಂದಿದೆ ಪಂತ್, ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಪ್ರಸ್ತುತ, ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಪಂತ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಅಧ್ಯಕ್ಷರು ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಅಪಘಾತವಾದ ಕೂಡಲೇ ಪಂತ್ ಅವರನ್ನು ಮೊದಲು ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಯಿತು. ಅಪಘಾತದಲ್ಲಿ ಪಂತ್ ತಲೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಅವರು ಅಸ್ಥಿರಜ್ಜು ಮುರಿತಕ್ಕೂ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಮತ್ತು ಡಿಡಿಸಿಎ ಕೂಡ ಅವರ ಮೇಲೆ ತೀವ್ರ ನಿಗಾ ಇರಿಸಿದೆ. ಅಲ್ಲದೆ ಪಂತ್ ಅವರ ಅಸ್ಥಿರಜ್ಜುಗೆ ಮಂಡಳಿಯ ವೈದ್ಯಕೀಯ ತಂಡದಿಂದ ಚಿಕಿತ್ಸೆ ನೀಡಲಾಗುವುದು ಎಂದು ಬಿಸಿಸಿಐ ಡೆಹ್ರಾಡೂನ್ ಆಸ್ಪತ್ರೆಗೆ ತಿಳಿಸಿದೆ.
IPL 2023: ಪಂತ್ ಐಪಿಎಲ್ ಆಡುವುದು ಡೌಟ್; ಡೆಲ್ಲಿ ತಂಡಕ್ಕೆ ಯಾರು ನಾಯಕ? ರೇಸ್ನಲ್ಲಿ ಈ ನಾಲ್ವರು
ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ
ಡಿಡಿಸಿಎ ತಂಡವೊಂದು ಪಂತ್ ಅವರನ್ನು ಭೇಟಿ ಮಾಡಲು ಬೆಳಗ್ಗೆ ರಾಷ್ಟ್ರ ರಾಜಧಾನಿಯಿಂದ ಹೊರಟಿತ್ತು. ಈ ತಂಡದಲ್ಲಿ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಕೂಡ ಇದ್ದರು. ಡೆಹ್ರಾಡೂನ್‌ನಿಂದ ಹೊರಡುವ ಮೊದಲು, ಪಂತ್ಗೆ ಹೆಚ್ಚಿನ ಚಿಕಿತ್ಸೆ ಅವಕಶ್ಯಕವಾಗಿದ್ದರೆ ಅವರನ್ನು ಏರ್‌ಲಿಫ್ಟ್ ಮಾಡಲಿದ್ದೇವೆ ಎಂದು ಹೇಳಿದ್ದರು. ಆದರೆ ಪಂತ್ ಅವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿರುವ ಶ್ಯಾಮ್, ‘ಪಂತ್ ಅವರ ಆರೋಗ್ಯ ಸ್ಥಿರವಾಗಿದೆ. ಅಲ್ಲದೆ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಬಿಸಿಸಿಐ ವೈದ್ಯರು ಇಲ್ಲಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಜೈ ಷಾ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಸದ್ಯಕ್ಕೆ ಪಂತ್ಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಪಂತ್ ಹೇಳಿಕೆಯ ಪ್ರಕಾರ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ’ ಎಂದಿದ್ದಾರೆ.
ಮತ್ತೊಂದೆಡೆ, ಪಂತ್ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಡೆಹ್ರಾಡೂನ್ ಎಸ್‌ಎಸ್‌ಪಿ ದಲೀಪ್ ಸಿಂಗ್ ಕುನ್ವಾರ್, ‘ಪಂತ್ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಹೀಗಾಗಿ ಪಂತ್ ಅವರನ್ನು ಏರ್ ಲಿಫ್ಟ್ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಬಿಸಿಸಿಐಗೆ ಹೊಸ ತಲೆನೋವು
ಪಂತ್ ಅವರು ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಅವರಿಗೆ ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದು ಟೀಮ್ ಇಂಡಿಯಾ ಹಾಗೂ ಬಿಸಿಸಿಐಗೆ ಹೊಸ ತಲೆನೋವು ತಂದ್ದೊಡ್ಡಿದೆ. ಏಕೆಂದರೆ ಭಾರತ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಬೇಕಾಗಿದೆ. ಈ ಪ್ರವಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಟೀಮ್ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯ ಗೆಲುವು ಭಾರತದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನ ಬಾಗಿಲನ್ನು ತೆರೆಯಲಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪಂತ್ ಅವರ ಅಲಭ್ಯತೆ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ