ಮೊದಲೆರಡು ಪಂದ್ಯಗಳಿಗೆ ರಿಷಭ್ ಪಂತ್ ಅಲಭ್ಯ!

ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ತಂಡಗಳ ನಡುವಣ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯು ಅಕ್ಟೋಬರ್ 24 ರಿಂದ ಕಿವೀಸ್ ನಾಡಿನಲ್ಲಿ ಶುರುವಾಗಲಿದೆ. ಈ ಸರಣಿಗಾಗಿ ಬಲಿಷ್ಠ ಭಾರತ ‘ಎ’ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ತಂಡದಲ್ಲಿದ್ದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಗಾಯದ ಸಮಸ್ಯೆಯಿಂದಾಗಿ ಈಗ ಮೊದಲೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಮೊದಲೆರಡು ಪಂದ್ಯಗಳಿಗೆ ರಿಷಭ್ ಪಂತ್ ಅಲಭ್ಯ!
Rishabh Pant
Image Credit source: BCCI

Updated on: Oct 13, 2026 | 7:32 AM

ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಾಯದ ಸಮಸ್ಯೆಯಿಂದಾಗಿ ನ್ಯೂಝಿಲೆಂಡ್ ಎ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಂತ್ ಇನ್ನೂ ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಅಕ್ಟೋಬರ್ 24 ರಿಂದ ಶುರುವಾಗಲಿರುವ ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಬಿಸಿಸಿಐ ತಿಳಿಸಿದೆ.

ಗಾಯಕ್ಕೆ ಕಾರಣವೇನು?

ಇತ್ತೀಚೆಗೆ ನಡೆದ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುತ್ತಿದ್ದ ರಿಷಭ್ ಪಂತ್, ಮೊದಲ ಇನಿಂಗ್ಸ್‌ನಲ್ಲಿ ಸ್ವೀಪ್ ಶಾಟ್ ಬಾರಿಸುವ ಯತ್ನದಲ್ಲಿ ಎಡಭಾಗದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಫಿಟ್​ನೆಸ್​ ಆಧರಿಸಿ ನ್ಯೂಝಿಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತಾದರೂ, ಸದ್ಯ ಅವರು ಸಂಪೂರ್ಣ ಗುಣಮುಖರಾಗದ ಕಾರಣ ಮೊದಲ ಎರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.

ವೈದ್ಯಕೀಯ ತಂಡದ ನಿಗಾದಲ್ಲಿ ಪಂತ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಣೆಯ ಪ್ರಕಾರ, ಪಂತ್ ಸದ್ಯ ಬಿಸಿಸಿಐ ವೈದ್ಯಕೀಯ ತಂಡದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನವೆಂಬರ್ 7 ರಿಂದ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯರಿರುತ್ತಾರೆಯೇ ಇಲ್ಲವೇ ಎಂಬುದನ್ನು ಅವರ ಚೇತರಿಕೆಯ ವೇಗವನ್ನು ಆಧರಿಸಿ ನಂತರ ನಿರ್ಧರಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಕುಮಾರ್ ಕುಶಾಗ್ರ ಆಯ್ಕೆ:

ಮೊದಲ ಎರಡು ಪಂದ್ಯಗಳಿಗೆ ರಿಷಭ್ ಪಂತ್ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ, ಜಾರ್ಖಂಡ್‌ನ ಯುವ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ಬಿಸಿಸಿಐ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಕುಶಾಗ್ರ ಇತ್ತೀಚೆಗೆ ಪುದುಚೇರಿಯಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ನ್ಯೂಝಿಲೆಂಡ್ ಎ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿದೆ.

ಟೀಮ್ ಇಂಡಿಯಾ ಆಟಗಾರರು ಭಾರತ ಎ ಪರ ಕಣಕ್ಕಿಳಿಯುತ್ತಿರುವುದೇಕೆ?

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಅಲ್ಲಿನ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಮತ್ತು ಉತ್ತಮ ಅಭ್ಯಾಸ ಪಡೆಯಲು ಟೀಮ್ ಇಂಡಿಯಾ ಆಟಗಾರರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ನ್ಯೂಝಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರು ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಇದುವೇ ಪ್ಲಸ್ ಪಾಯಿಂಟ್ ಆಯ್ತು: ಶ್ರೇಯಸ್ ಅಯ್ಯರ್

ಭಾರತ ‘ಎ’ ತಂಡ: ಧ್ರುವ್ ಜುರೆಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವಿಚಂದ್ರನ್ ಸ್ಮರಣ್, ಯಶ್ ರಾಥೋಡ್, ಕುಮಾರ್ ಕುಶಾಗ್ರ, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಆಕಾಶ್ ದೀಪ್, ಮುಖೇಶ್ ಕುಮಾರ್, ಅನ್ಶುಲ್ ಕಂಬೋಜ್, ಮುಖೇಶ್ ಚೌಧರಿ, ಆಖಿಬ್ ನಬಿ, ರಿಷಭ್ ಪಂತ್ (ಮೊದಲೆರಡು ಪಂದ್ಯಗಳಿಗೆ ಅಲಭ್ಯ).

ಭಾರತ ಎ ಮತ್ತು ನ್ಯೂಝಿಲೆಂಡ್ ಎ ಟೆಸ್ಟ್​ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ
ಮೊದಲ ಪಂದ್ಯ ಅಕ್ಟೋಬರ್ 24 – 27, 2026 ಲಿಂಕನ್
ಎರಡನೇ ಪಂದ್ಯ ಅಕ್ಟೋಬರ್ 31 – ನವೆಂಬರ್ 3, 2026 ಕ್ರೈಸ್ಟ್‌ಚರ್ಚ್
ಮೂರನೇ ಪಂದ್ಯ ನವೆಂಬರ್ 7 – 10, 2026 ಲಿಂಕನ್

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us