Virat Kohli: ಕೊಹ್ಲಿ ಘನತೆಗೆ ಧಕ್ಕೆ ಬಾರದಂತೆ ಕಾಪಾಡಿದ ರಿಷಭ್ ಪಂತ್: ಹೇಗೆ ಗೊತ್ತೇ?, ವಿಡಿಯೋ
India vs Bangladesh 1st Test: ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸ್ಟಂಪಿಂಗ್, ಕ್ಯಾಚ್ ಮೂಲಕ ಗಮನ ಸೆಳೆದರು. ಮುಖ್ಯವಾಗಿ ವಿರಾಟ್ ಕೊಹ್ಲಿ ಬಿಟ್ಟ ಕ್ಯಾಚ್ ಅನ್ನು ತಾವು ಹಿಡಿದು ಎಲ್ಲರ ಮನ ಗೆದ್ದರು. ವಿಡಿಯೋ ನೋಡಿ
ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ (India vs Bangladesh) ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ಕಳೆದುಕೊಂಡ ಬಳಿಕ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಛತ್ತೋಗ್ರಾಮ್ನ ಝಹೂರ್ ಅಹ್ಮದ್ ಚೌಧುರಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಟೀಮ್ ಇಂಡಿಯಾ 188 ರನ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಭಾರತದ ಫೀಲ್ಡಿಂಗ್ ಕೂಡ ಅದ್ಭುತವಾಗಿತ್ತು. ಅದರಲ್ಲೂ ರಿಷಭ್ ಪಂತ್ (Rishabh Pant) ಸ್ಟಂಪಿಂಗ್, ಕ್ಯಾಚ್ ಮೂಲಕ ಗಮನ ಸೆಳೆದರು. ಮುಖ್ಯವಾಗಿ ವಿರಾಟ್ ಕೊಹ್ಲಿ (Virat Kohli) ಬಿಟ್ಟ ಕ್ಯಾಚ್ ಅನ್ನು ತಾವು ಹಿಡಿದು ಎಲ್ಲರ ಮನ ಗೆದ್ದರು.
ಭಾರತ ನೀಡಿದ್ದ 513 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುತ್ತಿತ್ತು. ನಜ್ಮುಲ್ ಶಾಂಟೊ ಹಾಗೂ ಝಾಕಿರ್ ಹಸನ್ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಭಾರತಕ್ಕೆ ಇವರ ಜೊತೆಯಾಟ ಮುರಿಯಲು ಸಾಧ್ಯವಾಗುತ್ತಿರಲಿಲ್ಲ. ಭಾರತ ತಂಡದ ಬೌಲರ್‌ಗಳ ವಿಶ್ವಾಸವನ್ನು ಕುಗ್ಗಿಸಿದ್ದರು. ಆದರೆ, ಅರ್ಧಶತಕ ಸಿಡಿಸಿದ್ದ ನಜ್ಮುಲ್ ಹುಸೇನ್ ಶಾಂಟೊ ಅವರನ್ನು ಉಮೇಶ್ ಯಾದವ್ ಔಟ್ ಮಾಡಿದ್ದು ಪಂದ್ಯದಲ್ಲಿ ತಿರುವು ಲಭಿಸಿತು. ಆದರೆ, ಈ ವಿಕೆಟ್ ಭಾರತಕ್ಕೆ ಅಷ್ಟೊಂದು ಸುಲಭದಲ್ಲಿ ಸಿಗಲಿಲ್ಲ.
INDW vs AUSW: ಹರ್ಮನ್, ರಿಚ್ಚಾ ಹೋರಾಟ ವ್ಯರ್ಥ: ರೋಚಕ ಪಂದ್ಯ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ
ಪಂದ್ಯದ 47ನೇ ಓವರ್ನಲ್ಲಿ ಉಮೇಶ್ ಯಾದವ್ ಅವರು ತಮ್ಮ ಮೊದಲ ಎಸೆತವನ್ನು ಉತ್ತಮ ಲೆಂತ್ನಿಂದ ಅರೌಂಡ್ ವಿಕೆಟ್ ಹಾಕಿದರು. ಆದರೆ, ನಜ್ಮುಲ್ ಹುಸೇನ್ ಬ್ಯಾಟ್ಗೆ ಸರಿಯಾಗಿ ಚೆಂಡು ಸಿಗದೆ ಔಟ್ಸೈಡ್ ಎಡ್ಜ್ ಆಯಿತು. ಚೆಂಡು ನೇರವಾಗಿ ಫಸ್ಟ್ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿ ಕೈ ಬಳಿ ಬಂತು. ಆದರೆ, ಕೊಹ್ಲಿ ತಡವಾಗಿ ಕ್ಯಾಚ್ ಹಿಡಿಯಲು ಕೈ ತೆರೆದಿದ್ದರಿಂದ ಚೆಂಡು ಕೈಗೆ ತಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಬಳಿ ಬಂತು. ಇದನ್ನು ತಕ್ಷಣವೇ ಗಮನಿಸಿದ ಪಂತ್ ಡೈವ್ ಬಿದ್ದು ಚೆಂಡನ್ನು ಹಿಡಿದರು.
ಭಾರತಕ್ಕೆ ಅತ್ಯಮೂಲ್ಯ ವಿಕೆಟ್ ಆಗಿದ್ದ ಆ ಕ್ಯಾಚ್ ಅನ್ನು ವಿಶ್ವಶ್ರೇಷ್ಠ ಫೀಲ್ಡನ್ ಎನಿಸಿಕೊಂಡಿರುವ ಕೊಹ್ಲಿ ಬಿಟ್ಟಿದ್ದರೆ ದೊಡ್ಡ ಹಿನ್ನಡೆ ಆಗಿತ್ತಿತ್ತು. ಆದರೆ, ಪಂತ್ ಅವರು ಕೊಹ್ಲಿ ಘನತೆಗೆ ಧಕ್ಕೆ ಬಾರದಂತೆ ಕ್ಯಾಚ್ ಹಿಡಿದು ತಂಡಕ್ಕೆ ಬ್ರೇಕ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ಕೆಎಲ್ ರಾಹುಲ್ ಕೂಡ ಪಂತ್ ಅವರ ಕ್ಯಾಚ್ಗೆ ಶಹಭಾಷ್ ಎಂದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
Brilliant Catch From Rishabh Pant! ?
Virat Kohli dropped this?#BANvIND #INDvsBAN #RishabhPant pic.twitter.com/KtecqzFZE2
— Divyansh khanna (@meme_lord2663) December 17, 2022
ಭಾರತಕ್ಕೆ 188 ರನ್ಸ್ ಜಯ:
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 133.5 ಓವರ್ಗಳಲ್ಲಿ 404 ರನ್ ಕಲೆಹಾಕಿತು. ಪೂಜಾರ 90 ರನ್, ಶ್ರೇಯಸ್ ಅಯ್ಯರ್ 86 ರನ್ ಗಳಿಸಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 55.5 ಓವರ್ಗಳಲ್ಲಿ 150 ರನ್ಗೆ ಆಲೌಟ್ ಆಯಿತು. ಸಿರಾಜ್ 3 ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರು. 254 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಬಿರುಸಿನ ಬ್ಯಾಟಿಂಗ್ ನಡೆಸಿ 61.4 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. 513 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾಕ್ಕೆ ನಜ್ಮುಲ್ ಶಾಂಟೊ(67) ಹಾಗೂ ಝಾಕಿರ್ ಹಸನ್ (100) ಭರ್ಜರಿ ಆರಂಭ ತಂದುಕೊಟ್ಟಿದ್ದು ಬಿಟ್ಟರೆ ನಂತರ ದಿಢೀರ್ ಕುಸಿಯಿತು. ಶಕಿಬ್ 84 ರನ್‌ಗಳ ಹೋರಾಟ ಫಲ ಕೊಡಲಿಲ್ಲ. ಬಾಂಗ್ಲಾ 113.2 ಓವರ್ಗಳಲ್ಲಿ 324 ರನ್ಗೆ ಆಲೌಟ್ ಆಗುವ ಮೂಲಕ ಸೋಲುಕಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ