Rohit Sharma: ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನ ಗೊತ್ತೇ?
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 246 ರನ್ ಗಳಿಸಿತು. ಟಾರ್ಗೆಟ್ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. 38.5 ಓವರ್ನಲ್ಲಿ ಕೇವಲ 146 ರನ್ಗೆ ಆಲೌಟ್ ಆಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಸೋಲಿನ ಬಗ್ಗೆ ಏನು ಹೇಳಿದ್ರು ಕೇಳಿ.
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ (India vs England) ನೀಡಿದ ಪ್ರದರ್ಶನ ಎಲ್ಲರ ಆಘಾತಕ್ಕೆ ಕಾರಣವಾಗಿದೆ. ಯಾಕೆಂದರೆ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳಿಂದ ಗೆದ್ದ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲಿ ಕೇವಲ 146 ರನ್ಗೆ ಆಲೌಟ್ ಆಗುವಂತಹ ಆಟವಾಡಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊಯಿನ್ ಅಲಿ(47) ಹಾಗೂ ಡೇವಿಡ್ ವಿಲ್ಲಿ(41) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 246 ರನ್ ಗಳಿಸಿತು. ಟಾರ್ಗೆಟ್ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಹಾರ್ದಿಕ್ ಹಾಗೂ ಜಡೇಜಾ 29 ರನ್ ಗಳಿಸಿದ್ದೇ ಹೆಚ್ಚು. ಭಾರತ 38.5 ಓವರ್ನಲ್ಲಿ 146 ರನ್ಗೆ ಆಲೌಟ್ ಆಯಿತು. ರೀಸ್ ಟೋಪ್ಲೆ (Reece Topley) 6 ವಿಕೆಟ್ ಕಿತ್ತು ಮಿಂಚಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಸೋಲಿನ ಬಗ್ಗೆ ಏನು ಹೇಳಿದ್ರು ಕೇಳಿ.
“ನಮ್ಮ ಬೌಲಿಂಗ್ ಅತ್ಯುತ್ತಮವಾಗಿತ್ತು. ಉತ್ತಮ ಆರಂಭ ಕೂಡ ಪಡೆದುಕೊಂಡೆವು. ಆದರೆ, ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಮೊಯೀನ್ ಅಲಿ ಮತ್ತು ಡೇವಿಡ್ ವಿಲ್ಲೆ ಆಕರ್ಷಕ ಬ್ಯಾಟಿಂಗ್ ನಡೆಸಿದರು. ನಮಗೆ ಸಿಕ್ಕ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಿಲ್ಲದ್ದಲ್ಲ. ಆದರ, ನಾವು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದೆವು. ಸಿಕ್ಕ ಎಲ್ಲ ಕ್ಯಾಚ್ಗಳನ್ನು ಹಿಡಿದುಕೊಳ್ಳಬೇಕು. ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಏನೇ ಆದರು ನಮ್ಮ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ,” ಎಂದು ಹೇಳುವ ಮೂಲಕ ತಂಡದ ಹೀನಾಯ ಸೋಲಿಗೆ ಬ್ಯಾಟರ್ಗಳೇ ಕಾರಣ ಎಂದು ನೇರವಾಗಿ ಹೇಳಿದ್ದಾರೆ.
“ಪಿಚ್ ತುಂಬಾ ಅಚ್ಚರಿ ನೀಡಿತು. ಪಂದ್ಯ ಸಾಗುತ್ತಿದ್ದಂತೆ ಉತ್ತಮವಾಗುತ್ತಿತ್ತು. ಈರೀತಿಯ ಬಲಿಷ್ಠ ತಂಡದ ಎದುರು ಆಡುವಾಗ ನೀವು ನಿಮ್ಮ ಐದು ಬೆಸ್ಟ್ ಬೌಲರ್ಗಳನ್ನು ಮತ್ತು ಆಲ್ರೌಂಡರ್ಗಳನ್ನು ಆಡಿಸಬೇಕು. ಒಬ್ಬ ಬ್ಯಾಟರ್ ತುಂಬಾ ಹೊತ್ತು ಕ್ರೀಸ್ನಲ್ಲಿ ನಿಲ್ಲಬೇಕಿತ್ತು. ನಮ್ಮಲ್ಲಿ ಹಾಗಾಗಲಿಲ್ಲ. ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಮುಂದಿನ ಮೂರನೇ ಏಕದಿನ ಪಂದ್ಯವನ್ನು ಎದುರು ನೋಡುತ್ತಿದ್ದೇವೆ. ಏನನ್ನು ಬದಲಾವಣೆ ತಂದು ಉತ್ತಮ ಪಡಿಸಲು ಸಾಧ್ಯ ಎಂಬ ಬಗ್ಗೆ ಯೋಚಿಸುತ್ತೇವೆ. ಅಲ್ಲಿನ ವಾತಾವರಣಕ್ಕೆ ಸೆಟ್ ಆಗಬೇಕು,” ಎಂಬುದು ರೋಹಿತ್ ಮಾತು.
ಇನ್ನು ಗೆದ್ದ ತಂಡದ ನಾಯಕ ಜೋಸ್ ಬಟ್ಲರ್ ಮಾತನಾಡಿ, “ನಾವು ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಎಂಬ ರೀತಿ ಆಡಲಿಲ್ಲ. ಆದರೆ, ಸವಾಲಿನ ಮೊತ್ತ ಕಲೆಹಾಕಿದ್ದೆವು. ಭಾರತೀಯರ ಬೌಲಿಂಗ್ ಅದ್ಭುತವಾಗಿತ್ತು. ಡೇವಿಡ್ ವಿಲ್ಲೆ ಮತ್ತು ಮೊಯೀನ್ ಅಲಿ ಜೊತೆಯಾಟ ತಂಡಕ್ಕೆ ನೆರವಾಯಿತು. ನಾವು ಎದುರಾಳಿಯ ವಿಕೆಟ್ ಅನ್ನು ಆದಷ್ಟು ಬೇಗ ಕೀಳಬೇಕಿತ್ತು. ಅವರ ಮೇಲೆ ಸಂಪೂರ್ಣ ಒತ್ತಡ ಹಾಕಬೇಕಿತ್ತು. ಅದೇರೀತಿ ನಡೆಯಿತು. 6 ವಿಕೆಟ್ ಪಡೆದ ರೀಸ್ ಟೋಪ್ಲೆಗೆ ಇಂದು ವಿಶೇಷ ದಿನ. ತಂಡ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ನಾವು ಅದನ್ನು ಮುಂದುವರೆಸಬೇಕು,” ಎಂದು ಹೇಳಿದ್ದಾರೆ.
ಕೊಹ್ಲಿ ಬೆನ್ನಿಗೆ ನಿಂತ ರೋಹಿತ್:
ವಿರಾಟ್ ಕೊಹ್ಲಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ಕೊಹ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅನೇಕ ವರ್ಷಗಳಿಂದ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅಂಥಹ ಅದ್ಭುತ ಬ್ಯಾಟರ್ಗೆ ಯಾವುದೇ ಆಶ್ವಾಸನೆಯ ಅಗತ್ಯವಿಲ್ಲ. ಇದೇ ವಿಚಾರವನ್ನು ನಾನು ಕಳೆದ ಸುದ್ದಿಗೋಷ್ಠಿಯಲ್ಲೂ ಹೇಳಿದ್ದೆ. ಆಟಗಾರನ ಕ್ರಿಕೆಟ್ ಜೀವನದಲ್ಲಿ ಏಳು-ಬೀಳು ಇರುವುದು ಸಾಮಾನ್ಯ. ಅದು ಆಟದ ಒಂದು ಭಾಗ. ಕೊಹ್ಲಿಗೆ ಕಮ್ಬ್ಯಾಕ್ ಮಾಡಲು ಒಂದು ಅಥವಾ ಎರಡು ಪಂದ್ಯಗಳು ಬೇಕಷ್ಟೆ,” ಎಂದು ಹೇಳಿದರು.
Published On - 9:18 am, Fri, 15 July 22